ಮಂಗಳವಾರ, ಸೆಪ್ಟೆಂಬರ್ 17, 2019
22 °C
ಡೇರಿ ಎದುರು ಹಾಲು ಉತ್ಪಾದಕರ ಪ್ರತಿಭಟನೆ; ರೈತನಾಯಕಿ ಸುನಂದಾ ಜಯರಾಂ ಒತ್ತಾಯ

ಮನ್‌ಮುಲ್‌: ಭ್ರಷ್ಟಾಚಾರಿಗಳ ಸ್ಪರ್ಧೆಗೆ ನಿರ್ಬಂಧ ಹೇರಿ

Published:
Updated:
Prajavani

ಮದ್ದೂರು: ‘ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ (ಮನ್‌ಮುಲ್‌) ಅಮಾನತುಗೊಂಡ ನಿರ್ದೇಶಕರು ₹ 500 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆಸಿದ್ದಾರೆ. ಅಂಥವರು ಮುಂಬರುವ ಮನ್‌ಮುಲ್‌ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು’ ಎಂದು ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ ಒತ್ತಾಯಿಸಿದರು.

ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿಯಿಂದ ತಾಲ್ಲೂಕಿನ ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ‘ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಅಮಾನತುಗೊಂಡವರು ಮತ್ತೆ ಸ್ಪರ್ಧಿಸಲು ಮುಂದಾಗಿದ್ದಾರೆ. ಅವರಿಗೆ ಅವಕಾಶ ನೀಡಬಾರದು. ಅವರು ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಅವರ ಆಡಳಿತಾವಧಿಯಲ್ಲಿ 210 ನೇಮಕಾತಿ ವಿಷಯಕ್ಕೆ ಸಂಬಂಧಪಟ್ಟಂತೆ ಸುಮಾರು ₹ 45 ಕೋಟಿ ಭ್ರಷ್ಟಾಚಾರ ನಡೆದಿದೆ. ನಕಲಿ ಅಂಕಪಟ್ಟಿ ತೆಗೆದುಕೊಂಡು ‍ಅರ್ಹತೆ ಇಲ್ಲದವರಿಗೂ ನೇಮಕಾತಿ ನೀಡಿದ್ದಾರೆ. ಇಂಥವರಲ್ಲಿ ಹಲವರು ಈಗಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಹಾಲು ಉತ್ಪಾದಕರಾದ ರೈತರ ಹಾಲಿಗೆ ರಾಜ್ಯದಲ್ಲೇ ಅತಿ ಕಡಿಮೆ ದರವನ್ನು ನೀಡಿ ರೈತರ ಜೀವನವನ್ನು ಕತ್ತಲೆಗೆ ತಳ್ಳಿದ್ದಾರೆ. ಇಂತಹ ಕರ್ಮಕಾಂಡ ಎಸಗಿದವರು ಮತ್ತೊಮ್ಮೆ ಚುನಾವಣೆಗೆ ನಿಂತರೆ ಜಿಲ್ಲೆಯಲ್ಲಿರುವ 1,250 ಹಾಲು ಉತ್ಪಾದಕರ ಸಂಘದ ಮೂಲಕ ನಿತ್ಯ 9 ಲಕ್ಷ ಲೀಟರ್ ಹಾಲನ್ನು ನೀಡುತ್ತಿರುವ ರೈತರ ಗತಿ ಏನು’ ಎಂದು ಪ್ರಶ್ನಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಮಧುಚಂದನ್ ಮಾತನಾಡಿ ‘ನಿರ್ಮಾಣ ಹಂತದಲ್ಲಿರುವ ಮೆಗಾ ಡೇರಿ ಕಾಮಗಾರಿಯಲ್ಲೂ ಭಾರಿ ಅವ್ಯವಹಾರ ನಡೆದಿದೆ. ಕಳಪೆ ಕಬ್ಬಿಣ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಬಳಸಿದ್ದು ಅಧಿಕಾರಿಗಳ ತನಿಖೆಯಲ್ಲಿ ಬಯಲಾಗಿದೆ. ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ ಹಿಂದಿನ ಅಧ್ಯಕ್ಷ ಕದಲೂರು ರಾಮಕೃಷ್ಣ ಹಾಗೂ ಆಡಳಿತ ಮಂಡಳಿ ಇದಕ್ಕೆ ಕಾರಣೀಭೂತರಾಗಿದ್ದು, ಇಂತಹ ನಿರ್ದೇಶಕರು ಮಾಡಿರುವ ಹಗರಣಗಳು ಹಾಗೂ ಭ್ರಷ್ಟಾಚಾರದ ಹಣವನ್ನು ವಶಪಡಿಸಿಕೊಳ್ಳಬೇಕು. ನೇಮಕಾತಿ ಮಾಡಿಕೊಂಡವರಿಗೆ ಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು.

ಹಾಲು ಚೆಲ್ಲಿ ಆಕ್ರೋಶ: ಆಕ್ರೋಶಗೊಂಡ ಹಾಲು ಉತ್ಪಾದಕರು ಸೇರಿದಂತೆ ಪ್ರತಿಭಟನಾಕಾರರು 5 ಕ್ಯಾನ್ ಹಾಲನ್ನು ಬೆಂಗಳೂರು–ಮೈಸೂರು ಹೆದ್ದಾರಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಮನ್‌ಮುಲ್ ಎಂ.ಡಿ. ಮಹೇಶ್ ಮಾತನಾಡಿ, ‘ಈ ಎಲ್ಲಾ ವಿಷಯಗಳನ್ನು ಸರ್ಕಾರದ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಹಾಲಿನ ಬೆಲೆ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಚುನಾವಣೆ ಮುಗಿದ ನಂತರ ತೀರ್ಮಾನಿಸಲಾಗುವುದು’ ಎಂದರು.

ಕೂಡಲೇ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿ ಎಚ್ಚರಿಸಿದ ಪ್ರತಿಭಟನಾಕಾರರು ಧರಣಿ ಕೈಬಿಟ್ಟರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹೊನ್ನಪ್ಪ, ಕಾರಸವಾಡಿ ಮಹದೇವ್, ಕೃಷ್ಣೇಗೌಡ, ಶಿವಲಿಂಗಯ್ಯ, ಲಕ್ಷ್ಮಿನಾರಾಯಣ್, ಶಿವರಾಜು ವರಲಕ್ಷ್ಮಿ, ಸುಧಾ ಮತ್ತಿತರರು ಇದ್ದರು.
ಹಾಲಿನ ದರ ಹೆಚ್ಚಿಸಿ

ರೈತರು ಕಷ್ಟಪಟ್ಟು ಹೈನುಗಾರಿಕೆ ನಡೆಸುತ್ತಿದ್ದಾರೆ. ಮಳೆ, ಮೇವಿನ ಕೊರತೆಯಿಂದ ಹಸುಗಳನ್ನು ಸಾಕುವುದು ಕಷ್ಟವಾಗಿದೆ. ಹೀಗಿರುವಾಗ ಹಾಲಿನ ಖರೀದಿ ದರವನ್ನು ಹೆಚ್ಚಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Post Comments (+)