ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌: ಮುಖ್ಯಮಂತ್ರಿ ಮಾತು ಉಳಿಸಿಕೊಳ್ಳಲಿ

ಖಾಸಗಿ ಟೆಂಡರ್‌ ರದ್ದತಿಗೆ ಒತ್ತಾಯ, ಕಾರ್ಖಾನೆ ಎದುರು ವಿವಿಧ ಸಂಘಟನೆ ಮುಖಂಡರ ಪ್ರತಿಭಟನೆ
Last Updated 1 ಜುಲೈ 2021, 12:06 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್‌ ಕಾರ್ಖಾನೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೊಟ್ಟ ಮಾತು ಉಳಿಸಿಳ್ಳಬೇಕು. ಕಾರ್ಖಾನೆಯನ್ನು 40 ವರ್ಷಗಳವರೆಗೆ ಖಾಸಗಿ ಗುತ್ತಿಗೆ ನೀಡುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಕಾರ್ಖಾನೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಭೆ ನಡೆಸಿ ನಂತರ ಕಾರ್ಖಾನೆ ಬಳಿ ತೆರಳಿದ ಮುಖಂಡರು ‘ಮೈಷುಗರ್‌ ಕಾರ್ಖಾನೆ ಮಾರಾಟಕ್ಕಿಲ್ಲ’ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು. ಕಾರ್ಖಾನೆ ವೃತ್ತ ಹಾಗೂ ಕಾರ್ಖಾನೆ ಪ್ರವೇಶದ್ವಾರದಲ್ಲಿ ಭಿತ್ತಿಪತ್ರ ಅಳವಡಿಸಿ ಘೋಷಣೆ ಕೂಗಿದರು.

ವಿಧಾನ ಪರಿಷತ್‌ನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರೈತರ ಜೊತೆ ಮಾತನಾಡಲಾಗುವುದು. ರೈತರೊಂದಿಗೆ ಚರ್ಚಿಸದೇ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಏಕಾಏಕಿ ಕಾರ್ಖಾನೆಯನ್ನು 40 ವರ್ಷಗಳವರೆಗೆ ಖಾಸಗಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡುವ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ‘ವಿಧಾನ ಪರಿಷತ್‌ನಲ್ಲಿ ನಾನು ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿಗಳು ರೈತಪರವಾದ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಕೋವಿಡ್‌ ಸಮಯದಲ್ಲಿ ಖಾಸಗಿ ಗುತ್ತಿಗೆಗೆ ಆದೇಶ ಹೊರಡಿಸಿರುವುದು ಸರಿಯಲ್ಲ. ಇದನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಹಕ್ಕುಚ್ಯುತಿ ಮಂಡಿಸಲಾಗುವುದು’ ಎಂದು ಎಚ್ಚರಿಸಿದರು.

‘ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ರೈತ ಮುಖಂಡರೊಂದಿಗೆ ನಿಯೋಗ ತೆರಳಿ, ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರನ್ನು ಭೇಟಿಯಾಗಿ ಕೂಡಲೇ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸುವಂತೆ ಒತ್ತಾಯ ಮಾಡಲಾಗುವುದು’ ಎಂದರು.

ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಎಂ.ಶ್ರೀನಿವಾಸ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಲೆಸ್ಲಿ ಕೋಲ್ಮನ್‌ ಅವರು ದೂರದೃಷ್ಟಿಯೊಂದಿಗೆ ಮೈಷುಗರ್‌ ಕಾರ್ಖಾನೆಯನ್ನು ಸ್ಥಾಪನೆ ಮಾಡಿದ್ದರು. ಮೈಷುಗರ್‌ನಲ್ಲಿ ನಿರ್ಣಯವಾಗುತ್ತಿದ್ದ ಬೆಲ್ಲದ ದರ ಇಡೀ ರಾಜ್ಯಕ್ಕೆ ಅನ್ವಯವಾಗುತ್ತಿತ್ತು. ಜಿಲ್ಲೆಯಲ್ಲಿ ಚಳವಳಿ ರೂಪಗೊಳ್ಳಲು ಮೈಷುಗರ್‌ ಕಾರ್ಖಾನೆಯೂ ಪ್ರಮುಖ ಕಾರಣವಾಗಿದೆ. ಇಂತಹ ಐತಿಹಾಸಿಕ ಕಾರ್ಖಾನೆಯನ್ನು ರಾಜಕೀಯ ಕಾರಣಕ್ಕೆ ಖಾಸಗಿ ಗುತ್ತಿಗೆಗೆ ನೀಡುವುದು ಸರಿಯಲ್ಲ’ ಎಂದರು.

ವಿಧಾನ ಪರಿಷತ್‌ ಸದಸ್ಯ ಎನ್‌.ಅಪ್ಪಾಜಿಗೌಡ ಮಾತನಾಡಿ ‘ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲು ಉಗ್ರರೂಪದ ಹೋರಾಟ ಆರಂಭಿಸಬೇಕಾಗಿದೆ. ರೈತರು, ವಿವಿಧ ಸಂಘಟನೆಗಳು ಯಾವುದೇ ಹೋರಾಟ ನಡೆಸಿದರೂ ಅವರ ಜೊತೆ ನಾನು ನಿಲ್ಲುತ್ತೇನೆ. ಪರಿಷತ್‌ನ ಒಳಗೆ ಹಾಗೂ ಹೊರಗೆ ಹೋರಾಟ ನಡೆಸುತ್ತೇನೆ’ ಎಂದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಾಯಕಿ ಸುನಂದಾ ಜಯರಾಂ ಮಾತನಾಡಿ ‘₹ 1,500 ಕೋಟಿ ಮೌಲ್ಯ ಹೊಂದಿರುವ ಮೈಷುಗರ್‌ ಕಾರ್ಖಾನೆ ಆಸ್ತಿಯ ಮೇಲೆ ಕಣ್ಣಿಟ್ಟಿರುವ ಹಲವರು ಕಾರ್ಖಾನೆಯನ್ನು ಖಾಸಗಿ ಗುತ್ತಿಗೆ ನೀಡುವ ಹುನ್ನಾರ ಮಾಡಿದ್ದಾರೆ. ಹಲವು ವರ್ಷಗಳಿಂದ ಕಾರ್ಖಾನೆಯನ್ನು ದುಸ್ಥಿತಿಯಲ್ಲಿಟ್ಟುಕೊಂಡೇ ಬಂದಿದ್ದಾರೆ. ಇದಕ್ಕೆ ಖಾಸಗಿ, ಸಕ್ಕರೆ ಲಾಬಿಯೂ ಕಾರಣವಾಗಿದೆ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ ಅವರು ಖಾಸಗೀಕರಣ, ಒ ಅಂಡ್‌ ಎಂ ಮಾತುಗಳನ್ನು ಬಿಟ್ಟು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಳ್ಳುವ ಮಾತುಗಳನ್ನಾಡಬೇಕು. ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ದೇವಿ, ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್‌, ಕಬ್ಬು ಬೆಳೆಗಾರರ ಸಂಘದ ವೇಣುಗೋಪಾಲ್‌, ಸಾಹಿತಿ ಜಿ.ಟಿ.ವೀರಪ್ಪ, ವಕೀಲ ಬಿ.ಟಿ.ವಿಶ್ವನಾಥ್‌, ರೈತಸಂಘ ಮೂಲ ಸಂಘಟನೆಯ ಬೋರಾಪುರ ಶಂಕರೇಗೌಡ, ಸಿಐಟಿಯು ಸಿ.ಕುಮಾರಿ ಇದ್ದರು.

ಕಾರ್ಖಾನೆ ಮುಂದೆ ಪ್ರತಿನಿತ್ಯ ಧರಣಿ
ವಿವಿಧ ಸಂಘಟನೆ ಮುಖಂಡರು ಮೈಷುಗರ್‌ ಕಾರ್ಖಾನೆ ಎದುರು ಪ್ರತಿನಿತ್ಯ ಧರಣಿ ಕೂರಲು ಚಿಂತಿಸಿದ್ದು ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲು ಜುಲೈ 3ರಂದು ಪ್ರವಾಸಿ ಮಂದಿರಲ್ಲಿ ಸಭೆ ಕರೆಯಲಾಗಿದೆ.

ರೈತರು, ಕಾರ್ಮಿಕ, ಕಾರ್ಮಿಕ, ಕನ್ನಡಪರ, ಮಹಿಳಾ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಹೋರಾಟದ ರೂಪುರೇಷೆ ಸಿದ್ಧಗೊಳಿಸಲು ಸಭೆ ಕರೆಯಲಾಗಿದೆ. ಎಲ್ಲಾ 7 ಕ್ಷೇತ್ರಗಳ ಶಾಸಕರು ಸಭೆಗೆ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT