ಬುಧವಾರ, ಆಗಸ್ಟ್ 17, 2022
25 °C

ಜೆಡಿಎಸ್‌ ಬೆಂಬಲ ಖಂಡಿಸಿ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್‌ ಬೆಂಬಲ ನೀಡಿರುವುದು, ಹೋರಾಟಗಾರರ ಬಂಧನ ಖಂಡಿಸಿ ದಲಿತ, ರೈತ ಮತ್ತು ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ ಸಂಘಟನೆ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು ಮೈಸೂರು ಹೆದ್ದಾರಿ ಬಳಿಯ ಸರ್‌ ಎಂ.ವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ, ಕೆಲಹೊತ್ತು ಹೆದ್ದಾರಿ ತಡೆದರು.

ಮಣ್ಣಿನ ಮಗ, ರೈತರ ಮಗ, ರೈತರೇ ನನಗೆ ಎಲ್ಲಾ ಎಂದು ಹೇಳಿದ ಕುಮಾರಸ್ವಾಮಿ ಅವರು ರೈತರಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿ ರೈತರ ವಿರುದ್ಧ ನಿಂತಿದ್ದಾರೆ. ಕೂಡಲೇ ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಜೆಡಿಎಸ್‌ ರೈತರ ಕ್ಷಮೆ ಯಾಚಿಸಬೇಕು. ಮಂಗಳವಾರ ವಿಧಾನ ಪರಿಷತ್‌ನಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಅಂಗೀಕರಿಸಲಾಗಿದ್ದು, ಅಲ್ಲದೆ ರೈತ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಸಲುವಾಗಿ ಅಧಿವೇಶನವನ್ನು ಡಿ.10ಕ್ಕೆ ಮುಗಿಸಲು ಏಕಪಕ್ಷೀಯವಾಗಿ ನಿರ್ಧರಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಒಂದೆಡೆ ರೈತರ ಅಭಿಪ್ರಾಯವನ್ನು ಪಡೆಯದೆ ಸರ್ವಾಧಿಕಾರಿ ನೀತಿಯ ಮೂಲಕ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗುತ್ತಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುತ್ತಿದ್ದಾರೆ. ಭೂ ಸುಧಾರಣಾ ಕಾಯ್ದೆಯ ಜೀವಾಳ ವಾದ ಸೆಕ್ಷನ್ 79 ಎ, ಬಿಗಳನ್ನು ತೆಗೆದು ಹಾಕಲಾಗಿದ್ದು, ರೈತರಿಗೆ ದ್ರೋಹವೆಸಗಿದ್ದಾರೆ. ನಗರ ಪ್ರದೇಶದಲ್ಲಿ ಕೃಷಿ ಮಾಡಲು ಅವಕಾಶ ಒದಗಿಸುತ್ತಿದ್ದೇವೆ ಎನ್ನುವ ಅಪ್ಪಟ ಸುಳ್ಳನ್ನು ಹೇಳುತ್ತಾ ಸಮಾಜಾಯಿಷಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ಗೌರವಾಧ್ಯಕ್ಷ ಕೀಲಾರ ಸೋಮಶೇಖರ್, ಬೊಮ್ಮೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಶಂಕರ್, ಕರ್ನಾಟಕ ಜನಶಕ್ತಿಯ ರಾಜ್ಯ ಘಟಕದ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮಹಿಳಾ ಮುನ್ನಡೆಯ ಕಾರ್ಯದರ್ಶಿ ಕಮಲಾ, ಅಂಜಲಿ, ಶಿಲ್ಪಾ, ದಸಂಸ ಪ್ರಸನ್ನ, ಶ್ರೀನಿವಾಸ್, ಚಂದ್ರು, ಶಿವಕುಮಾರ್, ಮರಿಚನ್ನೇಗೌಡ, ನಾಗರಾಜು, ಮಂಜುಳಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು