ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಮೈಸೂರಿನಲ್ಲಿ ಸೋಮವಾರದಿಂದ ನಿರಂತರ ಧರಣಿ ಶುರುವಾಗಿದೆ. ಚಾಮರಾಜನಗರದಲ್ಲಿ ಮಂಗಳವಾರದಿಂದ ಶುರುವಾಗಲಿದೆ.
ಮಂಡ್ಯದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಪಟಾ ಚಡ್ಡಿ ಧರಿಸಿ ಜೆ.ಸಿ.ವೃತ್ತದಿಂದ ಸರ್ ಎಂ.ವಿ ಪ್ರತಿಮೆವರೆಗೂ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾ ರೈತಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿಗೆ ಸಾಥ್ ಕೊಟ್ಟರು. ಜಾನುವಾರು, ಎತ್ತಿನಗಾಡಿಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಹಳ್ಳಿಕಾರ್ ತಳಿಯ ಜೋಡೆತ್ತುಗಳು ಗಮನ ಸೆಳೆದವು. ಶ್ರೀರಂಗಪಟ್ಟಣದ ಬಂಗಾರದೊಡ್ಡಿ ಅಣೆಕಟ್ಟೆ ಮೇಲೆ ನಿಂತ ರೈತಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಸೋಮವಾರವೂ ಪ್ರತಿಭಟನೆ ಮುಂದುವರಿದಿದ್ದು, ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ವಿವಿಧ ಸಂಘಟನೆಗಳ ಮುಖಂಡರು 29ರಂದು ಕರೆ ನೀಡಲಾಗಿರುವ ಅಖಂಡ ಕರ್ನಾಟಕ ಬಂದ್ ಅನ್ನು ಬೆಂಬಲಿಸಿದ್ದಾರೆ.
ಹೋರಾಟವನ್ನು ಮುನ್ನಡೆಸಲು ಕಾವೇರಿ ಕ್ರಿಯಾ ಸಮಿತಿ ರಚಿಸಲು ನಿರ್ಧರಿಸಿದ್ದು, ಸಮಿತಿಯ ನೇತೃತ್ವದಲ್ಲೇ ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಯಲಿದೆ. ಕರ್ನಾಟಕ ಸೇನಾ ಪಡೆಯ ಕಾರ್ಯಕರ್ತರು ಗಂಟೆ ಬಾರಿಸುವ ಚಳವಳಿ ನಡೆಸಿದರೆ, ಕಬ್ಬು ಬೆಳೆಗಾರರ ಸಂಘದವರು ಖಾಲಿ ಮಡಕೆ ಪ್ರದರ್ಶಿಸಿದರು.
ಸಚಿವರ ಕಾರಿಗೆ ಮುತ್ತಿಗೆ:
ಜನತಾ ದರ್ಶನ ಸಲುವಾಗಿ ಮೈಸೂರಿನ ಜಿಲ್ಲಾ ಪಂಚಾಯಿತಿಗೆ ಬಂದ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಕಾರನ್ನು ಅಡ್ಡಗಟ್ಟಿದ ರೈತ ಸಂಘದ ಮುಖಂಡರು, ತಮಿಳುನಾಡಿಗೆ ನೀರು ಹರಿಸಬಾರದೆಂದು ಒತ್ತಾಯಿಸಿ ಹಕ್ಕೊತ್ತಾಯ ಪತ್ರ ಸಲ್ಲಿಸಿದರು. ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಕೃಷ್ಣರಾಜ ವೃತ್ತದಲ್ಲಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸಿದರು. ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಸದಸ್ಯರು ಕಾಡಾ ಕಚೇರಿ ಬಳಿ ತೆಂಗಿನ ಚಿಪ್ಪು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ–ರಾಂಪುರ ಕಪಿಲಾ ನದಿ ಸೇತುವೆ ಮೇಲೆ ಮಲಗಿ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಹುಣಸೂರು ನಗರದ ಸಂವಿಧಾನ ವೃತ್ತದಲ್ಲಿ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಮಿನಿ ವಿಧಾನ ಸೌಧದ ಮುಂದೆಯೂ ಧರಣಿ ನಡೆಸಿದರು.
ಜಲಾಶಯಕ್ಕೆ ಮುತ್ತಿಗೆ ಯತ್ನ:
ಹಾಸನದ ಗೊರೂರಿನ ಹೇಮಾವತಿ ಜಲಾಶಯದ ಮುಂಭಾಗ ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಪೊಲೀಸರು ತಡೆದರು. ನಂತರ ಜಲಾಶಯದ ಗೇಟ್ ಬಳಿಯೇ ಧರಣಿ ಮುಂದುವರಿಯಿತು. ಬೇಲೂರಿನಲ್ಲಿ ಖಾಲಿ ಕೊಡಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಹೊಳೆನರಸೀಪುರದಲ್ಲಿ ಕರವೇ ಕಾರ್ಯಕರ್ತರು ಮತ್ತು ರೈತ ಸಂಘದ ಸದಸ್ಯರು ರಸ್ತೆ ತಡೆ ನಡೆಸಿದರು.
ಲೀಲಾವತಿ ವಿನೋದ್ ರಾಜ್ ಭಾಗಿ
ಹಿರಿಯ ನಟಿ ಲೀಲಾವತಿ ನಟ ವಿನೋದ್ ರಾಜ್ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ‘ಕಾವೇರಿ ಎಂದಿಗೂ ಕಣ್ಣೀರು ಆಗಬಾರದು ನೀರಿಗೆ ಬರ ಬರಬಾರದು. ಕಾವೇರಿ ನೀರು ರೈತರ ಆನಂದಭಾಷ್ಪವಾಗಬೇಕು’ ಎಂದು ಲೀಲಾವತಿ ಹೇಳಿದರು. ‘ನಾನೂ ಕೃಷಿಕನಾಗಿದ್ದು ನೀರಿನ ಮಹತ್ವ ಅರಿತಿದ್ದೇನೆ. ನಾವು ಕ್ಷೇಮವಾಗಿದ್ದರೆ ಇನ್ನೊಬ್ಬರ ಕ್ಷೇಮದ ಬಗ್ಗೆ ಯೋಚಿಸಬಹುದು. ಹೀಗಾಗಿ ಸಂಕಷ್ಟ ಸೂತ್ರ ರಚನೆಯಾಗಬೇಕು. ಪ್ರಾಧಿಕಾರ ಸುಪ್ರೀಂ ಕೋರ್ಟ್ ತಜ್ಞರ ಮೂಲಕ ವಾಸ್ತವ ಸ್ಥಿತಿ ಅಧ್ಯಯನ ಮಾಡಿಸಬೇಕು’ ಎಂದು ವಿನೋದ್ ರಾಜ್ ಹೇಳಿದರು. ಇದೇ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ಅವರ ಕುರಿತಾದ ಗೀತೆಯೊಂದನ್ನು ವಿನೋದ್ ರಾಜ್ ಹಾಡಿದರು.
ತಮಿಳುನಾಡಿಗೆ ನೀರಿನ ಹರಿವು ಹೆಚ್ಚಳ
ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸೆ.23ರಂದು ನದಿಗೆ ಹರಿಸುತ್ತಿದ್ದ ನೀರಿನ ಪ್ರಮಾಣ 2973 ಕ್ಯೂಸೆಕ್ ಇತ್ತು ಸೆ.24ರಂದು 3838 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದ್ದು ಸೆ.25ರಂದು 4015 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಸದ್ಯ ಜಲಾಶಯದ ನೀರಿನ ಮಟ್ಟ 96.70 ಅಡಿ ಇದೆ. 5993 ಕ್ಯೂಸೆಕ್ ಒಳಹರಿವು 6716 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
‘ನೀರು ಕೇಳಿದ್ರೆ ವಿಸ್ಕಿ ಬ್ರಾಂದಿ ಕೊಡ್ತಾರೆ’
ಮಂಡ್ಯ: ‘ಕಾವೇರಿ ನೀರು ಕೇಳಿದರೆ ವಿಸ್ಕಿ ಬ್ರಾಂಡಿ ರಮ್ ಕೊಟ್ಟು ಜನರನ್ನು ಹಾಳು ಮಾಡಲೆಂದೇ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂದು ಬಿಜೆಪಿ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೋಮವಾರ ವಾಗ್ದಾಳಿ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟಾಪಟಾ ಚಡ್ಡಿ ಧರಿಸಿ ಮೆರವಣಿಗೆ ನಡೆಸಿದ ವೇಳೆ ಅವರು ಮಾತನಾಡಿ ‘ತಮಿಳುನಾಡು ರೈತರು 3 ಬೆಳೆ ಬೆಳೆದರೆ ನಮ್ಮ ರೈತರಿಗೆ ಒಂದು ಬೆಳೆಗೇ ನೀರಿಲ್ಲದ ಸಂದರ್ಭದಲ್ಲಿ ಪ್ರತಿ ಹಳ್ಳಿಗೂ ಮದ್ಯ ತಲುಪಿಸಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್‌ನವರ ಚಡ್ಡಿ ಇಳಿಸಿ ಅಧಿಕಾರ ಕಿತ್ತುಕೊಳ್ಳುವ ಶಕ್ತಿ ರೈತರಿಗಿರುವುದರಿಂದಲೇ ಮಂಡ್ಯದ ಟ್ರೇಡ್ ಮಾರ್ಕ್ ಆಗಿರುವ ಪಟಾಪಟಾ ಚಡ್ಡಿ ಧರಿಸಿ ಪ್ರತಿಭಟಿಸಲಾಗುತ್ತಿದೆ’ ಎಂದರು. ‘ತಮಿಳುನಾಡು ಸರ್ಕಾರದ ಜೊತೆ ಮಾತನಾಡುವಂತೆ ಎಚ್.ಡಿ.ದೇವೇಗೌಡರು ನೀಡಿದ್ದ ಸಲಹೆಯನ್ನು ಸರ್ಕಾರ ಪರಿಗಣಿಸಲಿಲ್ಲ. ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದವರು ಈಗ ಮಾತನಾಡುತ್ತಿಲ್ಲ ಬಜೆಟ್‌ನಲ್ಲೂ ಯೋಜನೆ ಸೇರ್ಪಡೆಯಾಗಿಲ್ಲ. ಮೇಕೆಯನ್ನು ಈಗಾಗಲೇ ಗುಳುಂ ಮಾಡಿಯಾಗಿದೆ’ ಎಂದು ವ್ಯಂಗ್ಯವಾಡಿದರು. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ‘ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಲಾಗದೇ ಕಾಂಗ್ರೆಸ್ ಮುಖಂಡರು ಕೇಂದ್ರ ಸರ್ಕಾರ ಪ್ರಧಾನಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ರಾಜ್ಯದ ಅಧಿಕಾರಿಗಳು ಪ್ರಾಧಿಕಾರದ ಸಭೆಗೆ ಆನ್‌ಲೈನ್‌ನಲ್ಲಿ ಪಾಲ್ಗೊಂಡು ಸನ್ನಿವೇಶದ ಮಹತ್ವ ಮರೆತಿದ್ದರೆ ಕಾಂಗ್ರೆಸ್ ನಾಯಕರು ಅಧಿಕಾರದ ಅಮಲಿನಲ್ಲಿ ರೈತರನ್ನು ಮರೆತಿದ್ದಾರೆ’ ಎಂದು ಆರೋಪಿಸಿದರು. ‘ಕಾಂಗ್ರೆಸ್ ಸರ್ಕಾರ ಐಎನ್‌ಡಿಐಎ ಒಕ್ಕೂಟವನ್ನು ಖುಷಿಪಡಿಸಲು ತಮಿಳುನಾಡಿಗೆ ನೀರು ಹರಿಸುತ್ತಿರುವುದು ಅಕ್ಷಮ್ಯ ಅಪರಾಧ. ರೈತರ ಶಾಪಕ್ಕೆ ಸರ್ಕಾರ ಬಲಿಯಾಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.