ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಪಾಲಹಳ್ಳಿ ಪಿಡಿಒ ವಿರುದ್ಧ ಪ್ರತಿಭಟನೆ

ಕೊರೊನಾ ಸಂದರ್ಭದಲ್ಲಿ ಕರ್ತವ್ಯ ಲೋಪ ಎಸಗಿರುವ, ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ
Last Updated 8 ಜೂನ್ 2021, 1:56 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುವರ್ಣ ಧರೆಣ್ಣವರ್‌ ಭ್ರಷ್ಟಾಚಾರ ನಡೆಸಿದ್ದು ಸಮಗ್ರ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾ.ಪಂ.ಸದಸ್ಯರು ಹಾಗೂ ಗ್ರಾಮದ ಮುಖಂಡರು ಸೋಮವಾರ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಮೂರು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಪಿಡಿಒ ಸುವರ್ಣ ಅವರ ವಿರುದ್ಧ ಘೋಷಣೆ ಕೂಗಿದರು. ಕೊರೊನಾ ಸಂದರ್ಭದಲ್ಲಿ ಅಧ್ಯಕ್ಷರು, ಸದಸ್ಯರಿಗೆ ಹೇಳದೆ ದೀರ್ಘ ರಜೆ ಹಾಕಿರುವ, ಕರ್ತವ್ಯ ಲೋಪ ಎಸಗಿರುವ, ಲಂಚಕ್ಕೆ
ಬೇಡಿಕೆ ಇಟ್ಟಿರುವ ಸುವರ್ಣ ಅವರನ್ನು ತಕ್ಷಣ ಅಮಾನತು ಮಾಡಿ ದಕ್ಷ
ಪಿಡಿಒ ಅವರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ತಾ.ಪಂ. ಇಒ ಭೈರಪ್ಪ ಅವರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಮೂರ್ನಾಲ್ಕು ತಿಂಗಳುಗಳಿಂದ ಪಿಡಿಒ ವಿರುದ್ಧ ದಾಖಲೆ ಸಹಿತ ದೂರು ನೀಡಿದರೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

‘ಅಭಿವೃದ್ಧಿ ಅಧಿಕಾರಿ ಸುವರ್ಣ ಧರೆಣ್ಣವರ್‌ ಪಾಲಹಳ್ಳಿಗೆ ಬಂದ ಬಳಿಕ ಸಮಸ್ಯೆಗಳು ಹೆಚ್ಚಾಗಿವೆ. ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಜಾಸ್ತಿಯಾಗಿದೆ. ಕೊರೊನಾ ಪ್ರಕರಣಗಳು ಉಲ್ಬಣಿಸಿದರೂ ಆಸಕ್ತಿ ವಹಿಸಿ ಕೆಲಸ ಮಾಡುತ್ತಿಲ್ಲ. ಪಾಲಹಳ್ಳಿ ಪಂಚಾಯಿತಿಗೆ ಅವರು ಬೇಡವೇ ಬೇಡ’ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮುಕುಂದ ಹೇಳಿದರು.

‘ಸುವರ್ಣ ಅವರನ್ನು ಪಾಲಹಳ್ಳಿ ಗ್ರಾ.ಪಂ.ನಿಂದ ವರ್ಗಾಯಿಸಬೇಕು. ಜನರ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಕಳುಹಿಸಿದರೆ ಪರಿಣಾಮ ನೆಟ್ಟಗಿ ರುವುದಿಲ್ಲ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರೇಗೌಡ ಎಚ್ಚರಿಸಿದರು.

ಮುಖಂಡ ರಮೇಶ್‌ ಬಾಬು ಮಾತನಾಡಿ, ‘ಸುವರ್ಣ ಅವರ ವಿರುದ್ಧ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಇಒಗೆ ಹಲವು ಬಾರಿ ದೂರು ನೀಡಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು. ‘ಸುವರ್ಣ ಅವರ ಲಂಚಗುಳಿತನ, ಅಸಡ್ಡೆ, ಜನಪ್ರತಿನಿಧಿಗಳ ಜತೆ ದುರ್ವರ್ತನೆ ಕುರಿತು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಗಮನಕ್ಕೂ ತಂದಿದ್ದೇವೆ’ ಎಂದು ಸದಸ್ಯ ಟೆಂಪೋ ಪ್ರಕಾಶ್‌ ಹೇಳಿದರು.

‘ಪಿಡಿಒ ಸುವರ್ಣ ಅವರು ಗ್ರಾ.ಪಂ.ನ ಎಲ್ಲ ಸೀಲುಗಳು ಹಾಗೂಮುಖ್ಯ ದಾಖಲೆಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ’ ಎಂದು ಸದಸ್ಯೆ ರೇಖಾ ಹೇಳಿದರು. ‘ನಮ್ಮ ಮನೆಯ ಖಾತೆ ಬದಲಾವಣೆಗೆ₹ 10 ಸಾವಿರ ಲಂಚ ಕೇಳಿದ್ದರು. ಹಣ ಕೊಡದ ಕಾರಣಕ್ಕೆ ಸತಾಯಿಸಿದರು’ ಎಂದು ಗ್ರಾಮದವರೇ ಹಿರಿಯ ಆದ ವಕೀಲ ಸುರೇಂದ್ರ ಆರೋಪಿಸಿದರು.

ತಹಶೀಲ್ದಾರ್‌ ರೂಪಾ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಗ್ರಾ.ಪಂ. ಸದಸ್ಯರಾದ ದಿನೇಶ್‌, ಜಯಲಕ್ಷ್ಮೀ, ವಿನೋದ, ರಾಜೇಶ್ವರಿ, ಅಕ್ಷತಾ, ಕಮಲಾ, ಆಶಾ, ರಘು, ರಾಮಕೃಷ್ಣ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಪಿ.ಎಂ. ಪ್ರಭಾಕರ್‌, ನಾಗರಾಜು, ಯಜಮಾನ್‌ ಶ್ರೀಧರ್‌, ಟೆಂಪೋ ಕೃಷ್ಣಪ್ಪ, ಮರಳಾಗಾಲ ಮಂಜುನಾಥ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT