ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಜಲಾಶಯಕ್ಕೆ ಮುತ್ತಿಗೆ ಯತ್ನ: ಬಂಧನ

ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಿ: ಮುಖ್ಯಮಂತ್ರಿ ಹೇಳಿಕೆಗೆ ಆಕ್ರೋಶ
Last Updated 28 ಜೂನ್ 2019, 12:56 IST
ಅಕ್ಷರ ಗಾತ್ರ

ಮಂಡ್ಯ: ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕೆಆರ್‌ಎಸ್‌ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರನ್ನು ಶುಕ್ರವಾರ ಪೊಲೀಸರು ಬಂಧಿಸಿದರು.

ಬೆಳೆದು ನಿಂತಿರುವ ಬೆಳೆಗಳ ರಕ್ಷಣೆ ಹಾಗೂ ಕುಡಿಯುವ ಉದ್ದೇಶಕ್ಕಾಗಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಕಳೆದ ಎಂಟು ದಿನಗಳಿಂದ ನಗರದ ಕಾವೇರಿ ನೀರಾವರಿ ನಿಗಮದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆಯೊಳಗೆ ಮುಖ್ಯಮಂತ್ರಿಗಳು ನೀರು ಬಿಡಲು ಸೂಚನೆ ನೀಡದಿದ್ದರೆ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಬೆಳಿಗ್ಗೆ 11.30ಕ್ಕೆ ನೂರಾರು ರೈತರು ಪ್ರತಿಭಟನಾ ಸ್ಥಳದಿಂದ ಕೆಆರ್‌ಎಸ್‌ ಜಲಾಶಯದತ್ತ ರ್‍ಯಾಲಿಯಲ್ಲಿ ತೆರಳಿದರು.

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ತೂಬಿನಕೆರೆ, ಇಂಡುವಾಳು, ಚಿಕ್ಕಬ್ಯಾಡರಹಳ್ಳಿ, ಪಾಂಡವಪುರ, ಹಾರೋಹಳ್ಳಿ, ಹರವು, ಸೀತಾಪುರ ಗೇಟ್‌, ಕಟ್ಟೇರಿ ಮೂಲಕ ಕೆಆರ್‌ಎಸ್‌ ತಲುಪಿದರು. ಮಾರ್ಗದುದ್ದಕ್ಕೂ ರೈತರು ರ್‍ಯಾಲಿಗೆ ಸೇರ್ಪಡೆಗೊಂಡರು. ಮಧ್ಯಾಹ್ನ 2.30ಕ್ಕೆ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು. ನಂತರ ಜಲಾಶಯದ ಮುಖ್ಯದ್ವಾರ (ದಕ್ಷಿಣ ದ್ವಾರ)ದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಬೆಳೆ ರಕ್ಷಣೆ ಮಾಡಲು ವಿಫಲವಾಗಿದೆ ಎಂದು ಆರೋಪಿಸಿ ಘೋಷಣೆ ಕೂಗಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ನೀರಾವರಿ ನಿಗಮದ ಎಂಜಿನಿಯರ್‌ಗಳು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆ ಇಲ್ಲದೆ ನೀರು ಬಿಡಲು ಸಾಧ್ಯವಿಲ್ಲ ಎಂದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಜಲಾಶಯಕ್ಕೆ ಮುತ್ತಿಗೆ ಹಾಕಲು ಮುಂದಾದರು. ತಕ್ಷಣ ಪೊಲೀಸರು ರೈತರನ್ನು ಬಂಧಿಸಿದರು.

ಮುಖ್ಯಮಂತ್ರಿ ಹೇಳಿಕೆಗೆ ಆಕ್ರೋಶ: ರೈತರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಲಿ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸುವುದಾದರೆ ಮುಖ್ಯಮಂತ್ರಿ ಏಕೆ ಇರಬೇಕು. 60 ಅಡಿ ನೀರು ಇದ್ದಾಗಲೂ ನೀರು ಬಿಟ್ಟ ಉದಾಹರಣೆಗಳಿವೆ. ಸದ್ಯ ಜಲಾಶಯದಲ್ಲಿ 79 ಅಡಿ ನೀರಿದೆ. ಇರುವ ನೀರನ್ನು ಬಳಸಿಕೊಳ್ಳದಂತೆ ಪ್ರಾಧಿಕಾರ ಹೇಳಿಲ್ಲ. ನೀರು ಬಳಸಿಕೊಳ್ಳುವ ಕುರಿತು ಪ್ರಾಧಿಕಾರದ ಮುಂದೆ ಪ್ರಸ್ತಾವ ಸಲ್ಲಿಸಿಲ್ಲ. ಜಿಲ್ಲೆಯ ರೈತರು ಅನುಭವಿಸುತ್ತಿರುವ ಸಂಕಷ್ಟ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಮಗನ ಸೋಲಿನ ಸೇಡು: ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ‘ಎಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್‌ ಸೋಲಿನ ಸೇಡು ತೀರಿಸುಕೊಳ್ಳುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಅವರೇ ನೀರು ಬಿಡಿಸಿದ್ದಾರೆ. ಆದರೆ ಈಗ ಪ್ರಾಧಿಕಾರದ ಕಡೆ ಬೆರಳು ತೋರಿಸುತ್ತಿದ್ದಾರೆ. ರೈತರ ಮೇಲೆ ದ್ವೇಷ ಸಾಧಿಸುವುದರಲ್ಲಿ ಕುಮಾರಸ್ವಾಮಿ ನಂಬರ್‌ 1, ಅವರಿಗೆ ಪ್ರಶಸ್ತಿ ಕೊಡಬೇಕು. ವಿಧಾನಸೌಧ ಅವರಪ್ಪನ ಮನೆಯ ಆಸ್ತಿಯಲ್ಲ, ಮೂರನೇ ಮಹಡಿಯಲ್ಲಿ ಕತ್ತೆ ಕಾಯಲು ಕುಳಿತಿದ್ದಾರಾ. ವಿಧಾನಸೌಧದಲ್ಲಿ ಕೂರಲು ಯೋಗ್ಯತೆ ಇಲ್ಲದಿದ್ದರೆ ಮರ್ಯಾದೆಯಿಂದ ರಾಜೀನಾಮೆ ನೀಡಲಿ. ಜಿಲ್ಲೆಯ ಎಳೂ ಜನ ಶಾಸಕರು ಅಯೋಗ್ಯರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಕೈಗಾರಿಕೆ ಭದ್ರತಾ ಪಡೆ ಸಿಬ್ಬಂದಿ ಹಾಗೂ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

‘ಕಾನೂನು ಭಂಗ ಚಳವಳಿ’
‘ಕಳೆದ ಎಂಟು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ನಮ್ಮ ಬೆಳೆ ಉಳಿಸಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಪೊಲೀಸರನ್ನು ಬಿಟ್ಟು ನಮ್ಮನ್ನು ಬಂಧಿಸಿದೆ. ಶನಿವಾರದಿಂದ ಜಿಲ್ಲೆಯಾದ್ಯಂತ ಕಾನೂನು ಭಂಗ ಚಳವಳಿ ನಡೆಸುತ್ತೇವೆ. ಹೆದ್ದಾರಿಗಳನ್ನು ಬಂದ್‌ ಮಾಡುತ್ತೇವೆ, ಸರ್ಕಾರಿ ಕಚೇರಿಗಳನ್ನು ಕೆಲಸ ಮಾಡಲು ಬಿಡುವುದಿಲ್ಲ. ಬೆಳೆದು ನಿಂತಿರುವ ಬೆಳೆ ಉಳಿಸಿಕೊಳ್ಳಲು ನಮಗೆ ಬೇರೆ ದಾರಿ ಇಲ್ಲ’ ಎಂದು ರೈತಸಂಘ, ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT