ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಮೈಷುಗರ್ ಸ್ವಚ್ಛತೆಗೆ ಮುಂದಾಗಿದ್ದವರು ವಶಕ್ಕೆ

ನೀತಿ ಸಂಹಿತೆ ಹಿನ್ನೆಲೆ; ಪೊಲೀಸ್‌, ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ
Last Updated 16 ಮೇ 2022, 3:56 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್ ಸ್ವಚ್ಛತೆಗೆ ಮುಂದಾಗಿದ್ದ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಸಂಬಂಧ ಪೊಲೀಸರು ಭಾನುವಾರ ವಶಕ್ಕೆ ತೆಗೆದುಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನ್ಮದಿನದ ಅಂಗವಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಮೈಷುಗರ್ ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ಅವರನ್ನು ಕಾರ್ಖಾನೆಯ ಗೇಟ್‌ ಬಳಿ ತಡೆದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದರ ಪರಿಣಾಮ ಪೊಲೀಸರು ಮಹಮ್ಮದ್ ನಲಪಾಡ್,ಪ್ರಧಾನ ಕಾರ್ಯದರ್ಶಿ ಐಶ್ವರ್ಯ, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ, ರವಿಕುಮಾರ್ ಗಣಿಗ, ಎಂ.ಎಸ್‌.ಚಿದಂಬರ್‌, ರಶ್ಮಿ ಶಿವಕುಮಾರ್, ವಿಜಯ್‌ಕುಮಾರ್, ರುದ್ರಪ್ಪ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಕರೆದೊಯ್ದರು.

ಪೊಲೀಸರ ವಿರುದ್ಧ ಘೋಷಣೆ ಕೂಗುವ ಮೂಲಕ ಬ್ಯಾರಿಕೇಡ್‌ ತೆರವು ಮಾಡಿ ಕಾರ್ಖಾನೆ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಮಹಿಳಾ ಕಾರ್ಯಕರ್ತರು ಮತ್ತು ಪೊಲೀಸರ ನಡೆವೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ವಶಕ್ಕೆ ತೆಗೆದುಕೊಂಡವರನ್ನು ನಗರದ ಕವಾಯತು ಮೈದಾನದ ಬಳಿ ಕರೆದೊಯ್ಯಲಾಯಿತು. ದಾರಿ ಉದ್ದಕ್ಕೂ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಹಮ್ಮದ್‌ ನಲಪಾಡ್‌ ಮಾತನಾಡಿ, ಸರ್ಕಾರವು ಶೇ 40ರಷ್ಟು ಕಮಿಷನ್‌ ಪಡೆಯಲು ಈ ರೀತಿ ತಡೆಯೊಡ್ಡುತ್ತಿದೆ. ನಾವು ಈಗಲೇ ಆ ಪರ್ಸಂಟೇಜ್‌ ಹಣ ನೀಡಲು ಸಿದ್ಧರಿದ್ದೇವೆ. ಕಾರ್ಖಾನೆ ರೈತರದ್ದು, ಅದನ್ನು ಸ್ವಚ್ಛ ಮಾಡಲು ಬಿಡಬೇಕು. ಇಂಥ ರಾಜಕಾರಣ ಮಾಡುವುದು ಬಿಜೆಪಿ ಸರ್ಕಾರಕ್ಕೆ ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹಿತದೃಷ್ಟಿಯಿಂದ ಸ್ವಚ್ಛತೆ ಮಾಡಲು ಮುಂದಾದರೆ ಸರ್ಕಾರ ಪೊಲೀಸರ ಮೂಲಕ ರಾಜಕೀಯ ಮಾಡಲು ಮುಂದಾಗಿದೆ. ಮೂರು ದಿನಗಳ ಹಿಂದೆಯೇ ಪೊಲೀಸರಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ನಾನೂ ಅರ್ಜಿ ಸಲ್ಲಿಸಿದ್ದೆ. ಪೊಲೀಸರು ಅನುಮತಿ ನೀಡಿಲ್ಲ. ಅನುಮತಿ ನೀಡದಂತೆ ಸರ್ಕಾರ ಪೊಲೀಸರ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಮೈಷುಗರ್ ಕಾರ್ಖಾನೆ ಸ್ವಚ್ಛತೆಗಾಗಿ ₹10 ಲಕ್ಷ ಗುತ್ತಿಗೆ ನೀಡಲಾಗಿದೆ.ಕಾರ್ಖಾನೆ ಆರಂಭವಾಗುತ್ತಿರುವ ಕಾರಣ ಜೆಸಿಬಿ, ಟ್ರಾಕ್ಟರ್‌ಗಳು ಹಾಗೂ ಕೆಲಸಗಾರರನ್ನು ಕರೆತಂದು ಸ್ವಚ್ಛಗೊಳಿಸಲು ಮುಂದಾಗಿದ್ದೆವು. ಆದರೆ, ಪೊಲೀಸರು ಇದಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಧರ್, ಗೌರೀಶ, ರಾಮಲಿಂಗಯ್ಯ, ಸಿದ್ದರಾಮು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT