ಶುಕ್ರವಾರ, ಆಗಸ್ಟ್ 19, 2022
25 °C
ಕುಡಿಯುವ ನೀರು ಸರಬರಾಜು ಕಾರ್ಯದ ಪ್ರಗತಿ ಪರಿಶೀಲಿಸಿದ ಸಂಸದೆ ಸುಮಲತಾ

ಬೇಸಿಗೆ ಬೆಳೆಗೆ ನೀರು ಕೊಡಿಸಿ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಜಲಾಶಯದಲ್ಲಿ 118 ಅಡಿಗಳಷ್ಟು ನೀರಿನ ಸಂಗ್ರಹ ಇದ್ದು, ಬೇಸಿಗೆ ಬೆಳೆಗೆ ನೀರು ಕೊಡಿಸಬೇಕು’ ಎಂದು ರೈತರು ಸಂಸದೆ ಸುಮಲತಾ ಅಂಬರೀಶ್‌ ಅವರನ್ನು ಆಗ್ರಹಿಸಿದರು.

ಪಟ್ಟಣದಲ್ಲಿ ಕೇಂದ್ರ ಪುರಸ್ಕೃತ ಅಮೃತ ಯೋಜನೆಯಡಿ ಪ್ರಗತಿಯ ಲ್ಲಿರುವ ಕುಡಿಯುವ ನೀರು ಸರಬರಾಜು ಕಾರ್ಯದ ಪ್ರಗತಿ ಪರಿಶೀಲನೆಗೆ ಬಂದಿದ್ದ ಅವರನ್ನು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ, ದೊಡ್ಡಪಾಳ್ಯ ಜಯರಾಮೇಗೌಡ, ನೆಲಮನೆ ಕಾಳೇ ಗೌಡ, ದರಸಗುಪ್ಪೆ ನಾಗೇಂದ್ರು ಒತ್ತಾಯಿಸಿದರು.

ಕಾವೇರಿ ನ್ಯಾಯಾಧಿಕರಣದ ಆದೇಶದ ನೆಪ ಇಟ್ಟುಕೊಂಡು ರೈತರಿಗೆ ಸರ್ಕಾರ ದ್ರೋಹ ಮಾಡುತ್ತಿದೆ. ನಿಂತಿರುವ ಬೆಳೆ ಉಳಿಸಿಕೊಳ್ಳಲೂ ನೀರು ಕೊಡದೆ ಸತಾಯಿಸುತ್ತಿದೆ. ಕಳೆದ ಬಾರಿ ಬೇಸಿಗೆಯಲ್ಲಿ ತಡವಾಗಿ ನಾಲೆಗಳಿಗೆ ನೀರು ಹರಿಸಿದ ಕಾರಣ ರೈತರು ಬೆಳೆ ಕಳೆದುಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೀರಿನ ಸಮಸ್ಯೆ ಬಗ್ಗೆ ನೀವು ಇದುವರೆಗೆ ಏಕೆ ಚಕಾರ ಎತ್ತಿಲ್ಲ?’ ಎಂದು ದೊಡ್ಡಪಾಳ್ಯ ಜಯರಾಮೇಗೌಡ ಪ್ರಶ್ನಿಸಿದರು.

‘ನೀರಿನ ವಿಷಯ ಸರ್ಕಾರಕ್ಕೆ ಬರುತ್ತದೋ ನ್ಯಾಯಾಧಿಕರಣ ವ್ಯಾಪ್ತಿಗೆ ಬರುತ್ತದೋ ತಿಳಿದು ಹೇಳುತ್ತೇನೆ’ ಎಂದು ಸುಮಲತಾ ಹೇಳಿದರು.

‘ನೀವು ಸಂಸದರು. ನಿಮಗೆ ನ್ಯಾಯಾಧಿಕರಣದ ಆದೇಶದ ಬಗ್ಗೆ ಮಾಹಿತಿ ಇಲ್ಲವೆ’ ಎಂದು ರೈತರು ಮತ್ತೆ ಪ್ರಶ್ನೆ ಹಾಕಿದರು. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಸಿಕೊಡುತ್ತೇನೆ ಎಂದು ಸಮಲತಾ ಹೇಳಿದರು.

ಮೈಷುಗರ್‌ ಶೀಘ್ರ ಆರಂಭ: ಮಂಡ್ಯದ ಮೈಷುಗರ್‌ ಕಾರ್ಖಾನೆಯನ್ನು ಗುತ್ತಿಗೆ ನೀಡುವ ಸಂಬಂಧ ಸಚಿವ ಸಂಪುಟದ ಅನುಮೋದನೆ ಕೂಡ ಸಿಕ್ಕಿದೆ. ಟೆಂಡರ್‌ ಪ್ರಕ್ರಿಯೆಯೂ ಮುಗಿದಿದೆ. ಈ ಕುರಿತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌ ಅವರ ಜತೆಗೂ ಮಾತನಾಡಿದ್ದೇನೆ. ಆದಷ್ಟು ಶೀಘ್ರ ಕಾರ್ಖಾನೆ ಆರಂಭವಾಗಲಿದೆ ಎಂದು ಸುಮಲತಾ ಭರವಸೆ ನೀಡಿದರು.

ರೈಲು ನಿಲ್ಲಿಸಿ: ಶ್ರೀರಂಗಪಟ್ಟಣ ಐತಿಹಾಸಿಕ, ಪ್ರವಾಸಿ ತಾಣ. ಆದರೆ ಈ ಊರಲ್ಲಿ ಸಾಕಷ್ಟು ರೈಲುಗಳು ನಿಲ್ಲಿಸುತ್ತಿಲ್ಲ. ಇದರಿಂದ ಪ್ರವಾಸಿಗರು ಮತ್ತು ಸ್ಥಳೀಯರಿಗೆ ತೊಂದರೆಯಾಗಿದೆ. ರೈಲು ನಿಲ್ಲುವಂತೆ ಮಾಡಬೇಕು ಎಂದು ಪುರಸಭೆ ಸದಸ್ಯರಾದ ಎಂ.ಎಲ್‌.ದಿನೇಶ್‌, ವಸಂತಕುಮಾರಿ ಲೋಕೇಶ್‌ ಇತರರು ಮನವಿ ಮಾಡಿದರು.

ಕಾವೇರಿ ನದಿಗೆ ಮೈಸೂರು ಕಡೆಯಿಂದ ಕಲುಷಿತ ನೀರು ಸೇರುತ್ತಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ ಎಂದು ಜನರು ತಿಳಿಸಿದ್ದಾರೆ. ಗಂಗಾ ನದಿಯ ಮಾದರಿಯಲ್ಲಿ ಈ ನದಿಯ ಸ್ವಚ್ಛತೆಗೂ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇನೆ. ಸಾಧ್ಯವಾದರೆ ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಸುಮಲತಾ ಪ್ರತಿಕ್ರಿಯಿಸಿದರು.

₹ 123 ಕೋಟಿ ಮೊತ್ತದ ಯೋಜನೆ: ಶ್ರೀರಂಗಪಟ್ಟಣದ ಕಾವೇರಿ ನದಿಯಿಂದ ಮಂಡ್ಯನಗರ ಮತ್ತು ಆಸುಪಾಸಿನ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ₹ 123 ಕೋಟಿ ವೆಚ್ಚದ ಅಮೃತ್‌ ಯೋಜನೆ ಇದಾಗಿದೆ. ಅಟಲ್‌ ಮಿಷನ್‌ ರಿಜುವಿನೇಷನ್‌ ಅಂಡ್‌ ಟ್ರಾನ್ಸಿಷನ್‌ ಫೇಸ್‌ ಹೆಸರಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 51 ಎಂಎಲ್‌ಡಿ (ಮಿಲಿಯನ್‌ ಲೀಟರ್‌ ಪರ್‌ ಡೇ) ಸಾಮರ್ಥ್ಯ ಯೋಜನೆಯ ಕಾಮಗಾರಿ ಶೇ 90ರಷ್ಟು ಮುಗಿದಿದೆ. 2022ರ ಜೂನ್‌ ತಿಂಗಳಿಗೆ ಕಾಮಗಾರಿ ಸಂಪೂರ್ಣ ಮುಗಿಯಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಎನ್‌.ಎಂ.ಪ್ರಕಾಶ್‌ ತಿಳಿಸಿದರು.

ಮಂಡಳಿಯ ಇಇ ಡಿ.ಮಂಜುನಾಥ್‌, ಎಇಗಳಾದ ವಿಜಯಾ, ಆದರ್ಶ, ಮಂಡ್ಯ ನಗರಸಭೆ ಆಯುಕ್ತ ಲೋಕೇಶ್‌, ತಹಶೀಲ್ದಾರ್‌ ಎಂ.ವಿ.ರೂಪಾ, ತಾ.ಪಂ. ಇಒ ಭೈರಪ್ಪ, ಮುಖಂಡರಾದ ದರ್ಶನ್‌ ಲಿಂಗರಾಜು, ಮಧು ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು