ಭಾನುವಾರ, ಸೆಪ್ಟೆಂಬರ್ 27, 2020
27 °C
ನಿರಾಣಿ ಉದ್ಯಮ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುರುಗೇಶ್‌ ಆರ್‌. ನಿರಾಣಿ ಮಾಹಿತಿ

ಆ.11ರಂದು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಚಾಲನೆ: ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಪಿಎಸ್‌ಎಸ್‌ಕೆ) ಆ. 11ರ ಕೃಷ್ಣ ಜನ್ಮಾಷ್ಠಮಿ ದಿನದಂದು ಬಾಯ್ಲರ್‌ಗೆ ಬೆಂಕಿ ನೀಡುವ ಮೂಲಕ ಆರಂಭ ಮಾಡಲಾಗುವುದು’ ಎಂದು ಶಾಸಕ ಮುರುಗೇಶ್‌ ಆರ್‌. ನಿರಾಣಿ ತಿಳಿಸಿದರು.

‘ಅಂದು ಬೆಳಿಗ್ಗೆ 11 ಗಂಟೆಗೆ ಪಿಎಸ್‌ಎಸ್‌ಕೆ ಸಾಮರ್ಥ್ಯವನ್ನು 5,000 ಟನ್‌ಗೆ ವಿಸ್ತರಣೆ ಮಾಡಲು ಭೂಮಿ ಪೂಜೆ ಮಾಡಲಾಗುವುದು. ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್‌, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ, ಸಚಿವ ಎಸ್‌.ಟಿ. ಸೋಮಶೇಖರ್‌, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ರಾಜ್ಯದ ಹಲವಾರು ಮಠಾಧೀಶರು, ಜನಪ್ರತಿನಿಧಿಗಳು, ಮೈಸೂರು ರಾಜ ವಂಶಸ್ಥರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

‘ನಾಲ್ಕು ವರ್ಷಗಳಿಂದ ನಿಂತಿದ್ದ ಕಾರ್ಖಾನೆಯನ್ನು ಅತೀ ಹೆಚ್ಚು ಬಿಡ್‌ ಮೂಲಕ ಗುತ್ತಿಗೆ ಪಡೆಯಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪರಿಣತ ಎಂಜಿನಿಯರ್‌ಗಳನ್ನು ಕರೆಸಿ ಯಂತ್ರೋಪಕರಣಗಳನ್ನು ರಿಪೇರಿ ಮಾಡಿಸಲಾಗಿದೆ. 5 ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದರು. 

20 ರೊಳಗೆ ಕಬ್ಬು ಕ್ರಷಿಂಗ್‌: ‘ಕಬ್ಬು ಅರೆಯಲು ಯಂತ್ರಗಳು ಸಜ್ಜುಗೊಂಡಿದ್ದರೂ, ಮಧ್ಯೆ ತೊಂದರೆಯಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವ ಸಲುವಾಗಿ ಎರಡು ದಿನ ಟ್ರಯಲ್‌ ನೋಡಿ, ಆ. 20ರೊಳಗೆ ಕಬ್ಬು ಅರೆಯಲು ಪ್ರಾರಂಭಿಸಲಾಗುವುದು. ಕಾರ್ಖಾನೆ ಯಂತ್ರೋಪಕರಣಗಳನ್ನು ಸಂಪೂರ್ಣ ಉನ್ನತೀಕರಣಗೊಳಿಸಿ ಸಕ್ಕರೆ ಮಾತ್ರವಲ್ಲದೆ ವಿದ್ಯುತ್‌, ಡಿಸ್ಟಲರಿ, ಸ್ಯಾನಿಟೈಸರ್‌, ಇಥೆನಾಲ್‌ ಉತ್ಪಾದನೆಗೆ ಒತ್ತು ನೀಡಲಾಗುವುದು. ಆದಾಯದ ಶೇ 70 ರಷ್ಟನ್ನು ರೈತರಿಗೆ ನೀಡಲು ಶ್ರಮಿಸಲಾಗುವುದು‌’ ಎಂದು ಹೇಳಿದರು.

‘ಪಿಎಸ್‌ಎಸ್‌ಕೆಯಲ್ಲಿ ಉದ್ಯೋಗಕ್ಕಾಗಿ ಒಂದೇ ದಿನ 6,500 ಅರ್ಜಿ ಸಲ್ಲಿಕೆಯಾಗಿದ್ದು, ಕಾರ್ಮಿಕರ ಲಭ್ಯತೆಯನ್ನು ಆಧರಿಸಿ ಅಗತ್ಯವಿದ್ದರೆ ಸ್ಥಳೀಯರನ್ನು ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಪಿಎಸ್‌ಎಸ್‌ಕೆ ಸಿಬ್ಬಂದಿ ಸರ್ವೇ ಮಾಡಿದ್ದು, ಸುಮಾರು 7 ಲಕ್ಷ ಟನ್‌ ಕಬ್ಬು ಸಿಗಬಹುದು ಎಂದು ಅಂದಾಜಿಸಿದ್ದಾರೆ. ಅಲ್ಲದೆ ಮಂಡ್ಯ ವ್ಯಾಪ್ತಿಯ ಶೇ 50 ರಷ್ಟು ಕಬ್ಬು ನಮಗೆ ಸಿಗಲಿದೆ. ಈಗಾಗಲೇ ನಮ್ಮ ವ್ಯಾಪ್ತಿಯ ಕಬ್ಬು ಬೇರೆಡೆಗೆ ಹೋಗುವುದು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರ ಮೂಲಕ ಸೂಚನೆ ಕೊಡಿಸಿ, ಕಬ್ಬು ಹೊರ ಹೋಗುವುದನ್ನು ತಡೆಯಲಾಗುವುದು’ ಎಂದು ಹೇಳಿದರು.

‘ಶಾಸಕ ಸಿ.ಎಸ್‌.ಪುಟ್ಟರಾಜು, ಸಂಸದರಾದ ಸುಮಲತಾ, ಪ್ರತಾಪ ಸಿಂಹ ಕೂಡ ಕಾರ್ಖಾನೆ ಆರಂಭಕ್ಕೆ ಸಹಕಾರ ನೀಡಲಿದ್ದಾರೆ’ ಎಂದು ತಿಳಿಸಿದರು.

‘ರಾಜಕಾರಣ ಮಾಡಲು ಬಂದಿಲ್ಲ’

‘ನಾನು ಶಾಸಕ, ಸಂಸದ ಆಕಾಂಕ್ಷಿಯಾಗಿ ರಾಜಕಾರಣ ಮಾಡಲು ಬಂದಿಲ್ಲ. ಮೊದಲು ಕೈಗಾರಿಕೋದ್ಯಮಿ. ನಂತರ ರಾಜಕಾರಣಿ. ರೈತರ ಪರವಾಗಿ ಹಾಗೂ ಬಡವರ ಪರವಾಗಿ ಕೆಲಸ ಮಾಡಲು ಇಲ್ಲಿಗೆ ಬಂದಿದ್ದೇನೆ. ಮೈಷುಗರ್‌ ಸಕ್ಕರೆ ಕಾರ್ಖಾನೆ ಸಂಬಂಧಿಸಿದಂತೆ ಬಿಡ್‌ ಕೂಗುವ ಸಂದರ್ಭ ಬಂದರೆ, ನನ್ನ ಹಣಕಾಸಿನ ವಹಿವಾಟು ನೋಡಿಕೊಂಡು ಭಾಗವಹಿಸುತ್ತೇನೆ’ ಎಂದು ಮುರುಗೇಶ್‌ ಆರ್‌. ನಿರಾಣಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕಿನ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ನೀಡಲು ಟೆಂಡರ್‌ ಕರೆಯಲಾಗಿದ್ದು, ₹125 ಕೋಟಿಗೆ ಸಿಂಗಲ್‌ ಬಿಡ್‌ ಮಾಡಲಾಗಿದೆ. ಸಂಪುಟದ ಅನುಮತಿ ಸಿಕ್ಕರೆ ಆ ಕಾರ್ಖಾನೆಯನ್ನೂ ಗುತ್ತಿಗೆ ಪಡೆದು ಮುನ್ನಡೆಸಲಾಗುವುದು’ ಎಂದು ಹೇಳಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು