ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯಕ್ಕೆ ‘ಪುಷ್ಪ ಪಾರಿಜಾತ’ ನಾಟಕ

Last Updated 7 ಡಿಸೆಂಬರ್ 2019, 9:53 IST
ಅಕ್ಷರ ಗಾತ್ರ

ನಗರದ ರಂಗಾಯಣದ ಭೂಮಿಗೀತದಲ್ಲಿ ವಾರಾಂತ್ಯ ನಾಟಕ ‘ಪುಷ್ಪ ಪಾರಿಜಾತ’ ಡಿ.8ರಂದು ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ. ರಂಗಕರ್ಮಿ ಶ್ರೀಕಾಂತ್ ಕಿಶೋರ್‌ ಅವರ ಹಿಂದಿ ನಾಟಕವನ್ನು ಮೂಲವಾಗಿಸಿ ಕನ್ನಡಕ್ಕೆ ಸದಾಶಿವ ಗರುಡ (ಅಣ್ಣಯ್ಯ) ಅವರು ‘ಪುಷ್ಪ ಪಾರಿಜಾತ’ವನ್ನು ಅನುವಾದಿಸಿದ್ದಾರೆ. ಪಾಟ್ನಾದ ನಿರ್ಮಾಣ್ ಕಲಾಮಂಚ್ ಸಂಸ್ಥೆಯ ನಿರ್ದೇಶಕ ಸಂಜಯ್ ಉಪಾಧ್ಯಾಯ ಈ ನಾಟಕಕ್ಕೆ ಸಂಗೀತ ಸಂಯೋಜಿಸಿ, ನಿರ್ದೇಶಿಸಿದ್ದಾರೆ. ಇದು ಇವರ ನಿರ್ದೇಶನದ ಮೂರನೇ ಕನ್ನಡ ನಾಟಕ.

ಪುಷ್ಪ ಪಾರಿಜಾತ ನಾಟಕ ಸಂಗೀತ ಹಾಗೂ ನೃತ್ಯಕ್ಕೆ ಹೆಚ್ಚು ಒತ್ತುಕೊಟ್ಟು ವರ್ಣರಂಜಿತವಾಗಿ ಕಟ್ಟಿರುವ ನಾಟಕ. ಹಿಂದಿ ನಾಟಕ ‘ಹರ್‌ಸಿಂಗಾರ್’ನ ಕನ್ನಡ ಅವತರಣಿಕೆ. ಉತ್ತರ ಹಾಗೂ ಈಶಾನ್ಯ ಭಾರತಗಳಲ್ಲಿ ಪ್ರಚಲಿತದಲ್ಲಿರುವ ‘ಡೊಮ್‍ಕಚ್’ ನೃತ್ಯ ಪ್ರಕಾರದಲ್ಲಿ ಬರುವ ಹರ್‍ಬಿಸನ ಹಾಗೂ ಹರ್‍ಬಿಸನಿಯ ಕಥನವಿದು. ಪಾರಿಜಾತ ಪಾರಂಪರಿಕ ಕಲೆಯಲ್ಲ. ಬದಲಾಗಿ ಪುಟ್ಟ ಹೂವು ಪಾರಿಜಾತ ಪುಷ್ಪದ ಸುಗಂಧ ಸೊಗಸು. ಆದರೆ, ಹೂವಿನ ಜೀವಿತ ಕಾಲ ಅತೀ ಕಡಿಮೆ. ಹಾಗೇ ಕಲಾತ್ಮಕವಾಗಿ ನಾಟಕವನ್ನು ಕಟ್ಟಿದ್ದಾರೆ ನಿರ್ದೇಶಕರು.

ನಿರಾಕರಿಸಲ್ಪಟ್ಟವರ ದನಿಯಂತೆ ಕಥನ ಭಾಸವಾದರೂ ಒಂದು ಅಂಶವನ್ನಷ್ಟೇ ಹೇಳಿ ಮುಗಿಸುವುದಿಲ್ಲ. ನಾಟಕದುದ್ದಕ್ಕೂ ಎಲ್ಲ ಸ್ವೀಕಾರಾರ್ಹ ವಿಚಾರಗಳನ್ನು ವ್ಯಕ್ತಪಡಿಸುತ್ತಾ ಜೀವಂತಿಕೆಯಿಂದ ಸಾಗುತ್ತದೆ. ಒಂದೆಡೆ ಔದ್ಯೋಗೀಕರಣ ಕಂಡರೆ ಮತ್ತೊಂದೆಡೆ ನಶಿಸಿ ಹೋಗುತ್ತಿರುವ ಮೌಲ್ಯಗಳು ಮಾತಾಡುತ್ತವೆ. ಹಣದ ಆಮಿಷದಿಂದ ಪಟ್ಟಣ- ನಗರಗಳ ನಡುವಿನ ಸಂಘರ್ಷ ಕಾಣಸಿಗುತ್ತದೆ. ಹೆಣ್ಣಿನ ಬಗೆಗೆ, ಬದುಕಿನ ಪಯಣದಲ್ಲಿ ಹೆಣ್ಣು- ಗಂಡಿನ ಸಂಬಂಧಗಳ ವೈಪರೀತ್ಯವನ್ನು ಪ್ರತಿಧ್ವನಿಸುತ್ತದೆ. ಇಂತಿಷ್ಟೆ ಕಥನ, ಇದೇ ಮೂಲ ಗುರಿಯಂತೆ ನಾಟಕ ಸಾಗುವುದಿಲ್ಲ. ಬರುವ ಎಲ್ಲವನ್ನೂ ತನ್ನೊಟ್ಟಿಗೆ ಕೂಡಿಸಿಕೊಳ್ಳುತ್ತ ಜನಪ್ರಿಯ ಮಾದರಿಯ ಕಥನವಾಗಿ ನಿಲ್ಲುತ್ತದೆ.

ಪಾರಿಜಾತದ ಹೂವಿನ ಹಾಗೆ ಕೆಲವೇ ನಿಮಿಷಗಳಲ್ಲಿ ಹುಟ್ಟಿ, ಸುಗಂಧ ಬೀರಿ ನಂತರ ಉದುರಿ ಹೋಗುವ ವರ್ಗದ ಕತೆ. ಅವಕಾಶ ವಂಚಿತರು ಹಾಗೂ ಸಮಾಜದ ಬೇರೆ ಬೇರೆ ಸ್ತರದಲ್ಲಿನ ಹೆಣ್ಣು ಮಕ್ಕಳ ಬಗ್ಗೆ ಈ ನಾಟಕ ಮಾತನಾಡುತ್ತದೆ. ಬದುಕಿನ ವೇಗದಲ್ಲಿ ಕಳೆದು ಹೋಗುತ್ತಿರುವ ಮನುಷ್ಯ ಸಂಬಂಧಗಳು ಜಾಲಕ್ಕೆ ಸಿಕ್ಕಿ ಹಾಕಿಕೊಂಡಂತಾಗಿವೆ. ವಸ್ತುಗಳು ಸ್ಥಳದಿಂದ ಸ್ಥಳಕ್ಕೆ ತಮ್ಮ ಉಮೇದನ್ನು ಪಡೆಯುವ ಪರಿ ಆಶ್ಚರ್ಯವೆನಿಸಿದರೂ ಆ ಬದಲಾವಣೆಯೊಳಗಿನ ಸಮಸ್ಯೆ ಕಾಣುವುದಿಲ್ಲ. ಊಳಿಗಮಾನ್ಯ ಪದ್ಧತಿಯಲ್ಲಿನ ಪಾತ್ರಗಳನ್ನು ಬಿಂಬಿಸುತ್ತಾ, ಚದುರಿ ಹೋಗುತ್ತಿರುವ ಹಾಗೂ ಕ್ಷೀಣಗೊಳ್ಳುತ್ತಿರುವ ಮೌಲ್ಯಗಳ ಅನ್ವೇಷಣೆಯನ್ನೂ ಮಾಡಲು ಪ್ರಯತ್ನಿಸುತ್ತದೆ. ಪಾಶ್ಚಿಮಾತ್ಯ ಧನದಾಹಿ ಪರಂಪರೆಯ ಆಸಕ್ತಿಗಳನ್ನು ಶಮನಗೊಳಿಸಲೆಂದೇ ಈ ಪಾರಂಪರಿಕ ರಂಗ ಪ್ರಯೋಗವನ್ನು ಆಯೋಜಿಸಲಾಗಿದೆ.

ವಿಶೇಷವೆಂದರೆ, ಕೆಲವೊಮ್ಮೆ ಪಾರಂಪರಿಕ ರಂಗ ಪದ್ಧತಿಯನ್ನೇ ನಾಟಕದ ವಿನ್ಯಾಸ ಅಲ್ಲಲ್ಲಿ ತಿರಸ್ಕರಿಸುತ್ತದೆ. ಮತ್ತೆ ತನ್ನನ್ನೇ ತಾನು ನಾಟಕವಾಗಿ ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಇದರ ನಾಟ್ಯ ಬಂಧವು ಒಂದೊಂದು ಕಡೆ ನಾಟಕ ಸರಣಿಯಂತೆ ಕಂಡರೂ ಕೆಲವೊಂದು ಕಡೆ ನಿಜದ ಬದುಕಿನಂತೆಯೇ ಬಂಧಮುಕ್ತವಾಗಿದೆ.

ವಸ್ತ್ರ ವಿನ್ಯಾಸವನ್ನು ಸಿಗ್ಮಾ ಉಪಾಧ್ಯಾಯ, ನೃತ್ಯ ಸಂಯೋಜನೆಯನ್ನು ಅಭಿಷೇಕ್ ಚೌಧರಿ, ಬೆಳಕಿನ ವಿನ್ಯಾಸವನ್ನು ಕೃಷ್ಣಕುಮಾರ್ ನಾರ್ಣಕಜೆ, ವಿನ್ಯಾಸವನ್ನು ಎಚ್.ಕೆ. ದ್ವಾರಕಾನಾಥ್, ಸಹ ನಿರ್ದೇಶನದ ಹೊಣೆಯನ್ನು ನಂದಿನಿ ಕೆ.ಆರ್. ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT