ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕ್ವಾರಂಟೈನ್: ವಸತಿ, ಆಹಾರ ಪೂರೈಕೆಯದ್ದೇ ಸವಾಲು

Last Updated 16 ಮೇ 2020, 16:53 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಮುಂಬೈನಿಂದ ತಾಲ್ಲೂಕಿಗೆ ಬರುತ್ತಿರುವ ವಲಸಿಗರನ್ನು ನೇರವಾಗಿ ಕ್ವಾರಂಟೈನ್‌ ಮಾಡಲಾಗುತ್ತಿದ್ದು, ಅವರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸುವುದು ತಾಲ್ಲೂಕು ಆಡಳಿತಕ್ಕೆ ಸವಾಲಾಗಿದೆ.

ಮುಂಬೈ ಸೇರಿ ಹೊರರಾಜ್ಯಗಳಿಂದ ಈವರೆಗೆ ಸಾವಿರಾರು ಮಂದಿ ಬಂದಿದ್ದಾರೆ. ಕಾಲೇಜು, ವಸತಿ ಶಾಲೆಗಳು, ವಸತಿ ನಿಲಯಗಳು, ಹೋಟೆಲ್, ಲಾಡ್ಜ್‌ಗಳಲ್ಲಿ ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಮುಂಬೈನಿಂದ ಬಂದವರಲ್ಲೇ ಅತ್ಯಧಿಕ ಪಾಸಿಟಿವ್ ವರದಿಯಾಗಿದ್ದು, ಈವರೆವಿಗೆ 23 ಪ್ರಕರಣ ದೃಢಪಟ್ಟಿವೆ. ಶುಕ್ರವಾರ ಒಂದೇ ದಿನ 13 ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ತಾಲ್ಲೂಕಿನ ಜನ ಭಯಭೀತರಾಗಿದ್ದಾರೆ.

ಆನೆಗೊಳ ಚೆಕ್‌ಪೋಸ್ಟ್‌ ಮೂಲಕ ವಲಸಿಗರು ಹೆಚ್ಚಾಗಿ ಬರುತ್ತಿದ್ದು, ದಾಖಲಾತಿ ಪರಿಕ್ಷೆ ನಡೆಸಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಹಂತ-ಹಂತವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರತಿಯೊಬ್ಬರನ್ನೂ ಕೋವಿಡ್ ಪರಿಕ್ಷೆ ನಡೆಸಲಾಗುತ್ತಿದೆ. ಆನಂತರ ಪಟ್ಟಣದ ವಿವಿಧೆಡೆ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ.

ಆನೆಗೊಳ ಚೆಕ್ ಪೋಸ್ಟ್‌ಬಳಿ ಯಾವುದೇ ಸೌಲಭ್ಯವಿಲ್ಲ ಎಂದು ವಲಸಿಗರು ಆರೋಪಿಸಿದ್ದಾರೆ. ‘ನಮ್ಮನ್ನು ಕೂಡಲೇ ಪರಿಕ್ಷೆ ನಡೆಸಿ ಕ್ವಾರಂಟೈನ್ ಮಾಡಿ. ಚುನಾವಣೆ ಸಮಯದಲ್ಲಿ ನಮಗೆ ರಾಜಮರ್ಯಾದೆ ಇತ್ತು. ಈಗ ಯಾವ ರಾಜಕೀಯ ಪಕ್ಷದ ಮುಖಂಡರೂ ನಮ್ಮನ್ನು ಕ್ಯಾರೆ ಎನ್ನುತ್ತಿಲ್ಲ. ಕ್ವಾರಂಟೈನ್ ಸ್ಥಳದಲ್ಲಿ ಕುಡಿಯುವ ನೀರು, ಆಹಾರ ಪೂರೈಕೆ ಸರಿಯಾಗಿಲ್ಲ, ಮೂಲ ಸೌಕರ್ಯವಿಲ್ಲದೆಡೆ ಇರಿಸಲಾಗಿದೆ’ ವಲಸಿಗರೊಬ್ಬರು ತಿಳಿಸಿದರು.

‘ಮುಂಬೈನಿಂದ ಬರುತ್ತಿರುವವರು ನಮ್ಮ ಅಣ್ಣ ತಮ್ಮಂದಿರೇ ಆಗಿದ್ದಾರೆ. ಈಗ ಮುಂಬೈನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಿರುವದರಿಂದ ಜೀವನ ನಡೆಸಲು ಸಾಧ್ಯವಾಗದೆ ಗ್ರಾಮಕ್ಕೆ ಬರುತಿದ್ದಾರೆ. ಬಂದವರು ಯಾರೇ ಆಗಿರಲಿ, ನಿಯಮ ಪಾಲಿಸಬೇಕು. ಬರುತ್ತಿರುವವರು ಒಮ್ಮೆಗೆ ಗುಂಪಾಗಿ ಬಂದರೆ ವ್ಯವಸ್ಥೆ ಮಾಡಿಕೊಳ್ಳುವದು ಕಷ್ಟವಾಗುತ್ತದೆ. ಆದ್ದರಿಂದ ಹಂತ-ಹಂತವಾಗಿ ಬನ್ನಿ ಎಂದು ಮನವಿ ಮಾಡಿದ್ದೇನೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವರ ನಾರಾಯಣಗೌಡ ಹೇಳಿದರು.

‘ಮುಂಬೈನಿಂದ ಈವರೆವಿಗೆ 854 ಮಂದಿ ಬಂದಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಬಂದವರನ್ನು ಕ್ವಾರಂಟೈನ್ ಮಾಡಲಾಗಿರುವುದರಿಂದ ಹಳ್ಳಿಗಳಿಗೆ ರೋಗ ಹರಡುತ್ತಿಲ್ಲ’ ಎಂದು ತಹಶೀಲ್ದಾರ್‌ ಎಂ.ಶಿವಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT