ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಬಿಂಬಿಸುವ ಮಂಡ್ಯ ರೈಲು ನಿಲ್ದಾಣ

ಕಬ್ಬು ಕಟಾವು, ಯಕ್ಷಗಾನ ಕುಣಿತ, ಪರಿಸರ ಕಾಳಜಿಯ ಚಿತ್ತಾರ
Last Updated 29 ಏಪ್ರಿಲ್ 2019, 11:08 IST
ಅಕ್ಷರ ಗಾತ್ರ

ಮಂಡ್ಯ: ಕೊಳಕು ಹಾಗೂ ದುರ್ವಾಸನೆಯ ತಾಣವಾಗಿದ್ದ ನಗರ ರೈಲು ನಿಲ್ದಾಣ, ಈಗ ಸ್ವಚ್ಛತೆ ಹಾಗೂ ವಿವಿಧ ಆಕರ್ಷಕ ಚಿತ್ರಗಳ ಮೂಲಕ ಜಿಲ್ಲೆಯ ಕೃಷಿ ಸಂಸ್ಕೃತಿ ಬಿಂಬಿಸುವ ತಾಣವಾಗಿ ಮಾರ್ಪಟ್ಟಿದೆ.

ಇಡೀ ರೈಲು ನಿಲ್ದಾಣ ಸ್ವಚ್ಛವಾಗಿದ್ದು, ನಿಲ್ದಾಣದ ತುಂಬೆಲ್ಲಾ ಜಿಲ್ಲೆಯ ಸಂಸ್ಕೃತಿ ಸಾರುವ ಚಿತ್ರಗಳನ್ನು ಬಿಡಿಸಲಾಗಿದೆ. ರೈಲು ನಿಲ್ದಾಣದಲ್ಲಿ 10 ನಿಮಿಷಗಳ ಕಾಲ ಕಳೆಯಲು ಹಿಂಸೆ ಅನುಭವಿಸುತ್ತಿದ್ದ ಪ್ರಯಾಣಿಕರು ಈಗ ರೈಲಿಗಾಗಿ ಗಂಟೆಗಟ್ಟಲೆ ಕಾಯುತ್ತಾ ಕುಳಿತುಕೊಳ್ಳುತ್ತಾರೆ.

ರೈಲು ನಿಲ್ದಾಣದ ಆವರಣಕ್ಕೆ ಕಾಲಿ ಡುತ್ತಿದ್ದಂತೆ ಹೊರಗೋಡೆ ಮೇಲೆ ‘ಸಕ್ಕರೆ ನಾಡು’ ಎಂಬ ಶೀರ್ಷಿಕೆ ಹೊಂದಿರುವ ಕಬ್ಬು ಕಟಾವು ಮಾಡುವ ಚಿತ್ರ ಕಾಣಿಸುತ್ತದೆ. ಇನ್ನೊಂದು ಬದಿಯಲ್ಲಿ ಯಕ್ಷಗಾನ ವೇಷಧಾರಿ ಚಿತ್ರ ಬಿಡಿಸುವ ಮೂಲಕ, ಮಂಡ್ಯ ಜಿಲ್ಲೆ ಕರಾವಳಿ,
ಮಲೆನಾಡಿನ ದ್ವಾರ ಬಾಗಿಲು ಎಂಬ ನಂಟನ್ನು ಚಿತ್ರದ ಮೂಲಕ ಬಿಂಬಿಸಲಾಗಿದೆ.

ನಿಲ್ದಾಣದ ಮುಖ್ಯ ಗೇಟ್ ಒಳಭಾಗದಲ್ಲಿ ಟಿಕೆಟ್ ಕೌಂಟರ್ ಬಳಿಯ ಗೋಡೆ ಮೇಲೆ ಕೆಸರು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ರೈತರ ಚಿತ್ರ ಗಮನ ಸೆಳೆಯುತ್ತದೆ. ಐತಿಹಾಸಿಕ ಹಾಗೂ ಧಾರ್ಮಿಕ ಶ್ರೀಮಂತಿಕೆ ಸಾರುವ ದೇವಾಲಯ ಮತ್ತು ಬೆಳಿಗ್ಗೆ ರೈತನೊಬ್ಬ ಉಳಿಮೆ ಮಾಡುವಚಿತ್ರಗಳು ಕೃಷಿ ಸಂಸ್ಕೃತಿಯನ್ನು ತೋರಿಸುತ್ತವೆ.

ರೈಲ್ವೆ ಪ್ಲಾಟ್‌ಫಾರಂನಲ್ಲಿ ನಿಂತರೆ ರೈಲ್ವೆ ಕಚೇರಿಗಳು ಹಾಗೂ ಕ್ಯಾಂಟೀನ್‌ಗಳ ಗೋಡೆಗಳ ಮೇಲೆ ತೆಂಗಿನ ಗರಿಯ ತೋರಣವಿದೆ. ಅದರ ಮಧ್ಯದಲ್ಲಿ ಕಬ್ಬು ತಿನ್ನುವ ಹುಡುಗ, ಸ್ವಚ್ಛ ಭಾರತ ಅಭಿಯಾನ, ರೈತ ಮಹಿಳೆ ಮೊಬೈಲ್‌ ಬಳಕೆ ಮಾಡುವ ಚಿತ್ರಣ ಗಮನ ಸೆಳೆಯುತ್ತದೆ. ಎಳನೀರು ಕೊಚ್ಚುವ ರೈತ ಹಾಗೂ ಹಸಿರು ಟವೆಲ್ ಹಾಕಿಕೊಂಡು ದೇಶದ ಧ್ವಜ ಪ್ರದರ್ಶನ ಮಾಡುವ ಮೂಲಕ ದೇಶಾಭಿಮಾನ ಮೂಡಿಸುವ ದೃಶ್ಯಗಳು ಆಕರ್ಷಣೀಯವಾಗಿವೆ.

ಪರಿಸರ ಉಳಿವಿಗಾಗಿ ನಾವೆಲ್ಲರೂ ಕೈ ಜೋಡಿಸೋಣ ಎಂಬ ಸಂದೇಶ ತಿಳಿಸುವ ಮನುಷ್ಯನ ಕೈಯಲ್ಲಿ ಬಳ್ಳಿಯ ಬೆಳವಣಿಗೆ ಚಿತ್ರ ಅನಾವರಣವಾಗಿದೆ. ಪ್ರಯಾಣಿಕರ ಮೇಲ್ಸೇತುವೆ ಮೆಟ್ಟಿಲು ಗಳಿಗೆ ವಿವಿಧ ಬಣ್ಣ ಹಚ್ಚುವ ಮೂಲಕ ಕಾಮನಬಿಲ್ಲಿನ ರೂಪ ಕೊಡಲಾಗಿದೆ. ಪ್ರಯಾಣಿಕರು ರೈಲಿಗಾಗಿ ಕಾಯುತ್ತಾ ಕುಳಿತರೂ ಬೇಸರವಾಗದಂತೆ ಚಿತ್ರಗಳು ಮನಸ್ಸಿಗೆ ಮುದ ನೀಡುತ್ತವೆ. ಗೋಡೆ ಮೇಲಿನ ಚಿತ್ರಗಳು ರಾತ್ರಿ ವೇಳೆಯೂ ಆಕರ್ಷಕವಾಗಿ ಕಾಣುವಂತೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯ ಪರಂಪರೆಗೆ ಆದ್ಯತೆ

ರಾಜ್ಯದ ರೈಲು ನಿಲ್ದಾಣವನ್ನು ಆಕರ್ಷಣೀಯಗೊಳಿಸುವ ಉದ್ದೇಶದಿಂದ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಿಂದ ಚಿತ್ರ ಬರೆಯಲು ಟೆಂಡರ್ ನೀಡಲಾಗಿದ್ದು, ಸ್ಥಳೀಯ ಪರಂಪರೆ, ಸಂಸ್ಕೃತಿಗೆ ಆದ್ಯತೆ ಕೊಡಲಾಗಿದೆ. ಮಂಡ್ಯ ನಗರ, ಮದ್ದೂರು ಹಾಗೂ ಪಾಂಡವಪುರ ರೈಲು ನಿಲ್ದಾಣದಲ್ಲಿ ಚಿತ್ರಗಳನ್ನು ಆಕರ್ಷಣೀಯವಾಗಿ ಬಿಡಿಸಲಾಗಿದೆ ಎಂದು ಮಂಡ್ಯ ನಗರ ರೈಲು ನಿಲ್ದಾಣದ ವ್ಯವಸ್ಥಾಪಕ ಮನಿಯಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT