ಶುಕ್ರವಾರ, ನವೆಂಬರ್ 22, 2019
26 °C

ರಾಯಸಮುದ್ರ ದಂಪತಿ ಕೊಲೆಗೆ ಬೇರೆ ಸ್ವರೂಪ: ಚುರುಕುಗೊಂಡ ತನಿಖೆ

Published:
Updated:
Prajavani

ಕೆ.ಆರ್.ಪೇಟೆ: ತಾಲ್ಲೂಕಿನ ರಾಯಸಮುದ್ರ ಗ್ರಾಮದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಂಗಪಟ್ಟಣ ಡಿ.ವೈ.ಎಸ್.ಪಿ ಯೋಗೇಂದ್ರನಾಥ್ ನೇತೃತ್ವದಲ್ಲಿ ಆರೋಪಿಗಳಾದ ವೆಂಕಟೇಶ್ ಮತ್ತು ಅರ್ಪಿತಾ ದಂಪತಿಯನ್ನು ಕರೆತಂದು ಸ್ಥಳ ಪರಿಶೀಲಿಸಿದರು.

ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮತ್ತೊಂದು ದಂಪತಿ ಕೊಲೆ ಪ್ರಕರಣದ ಆರೋಪಿಗಳು ರಾಯಸಮುದ್ರ ದಂಪತಿಯನ್ನು ತಾವೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ಬೇರೆ ಸ್ವರೂಪ ಪಡೆದುಕೊಂಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹಿನ್ನೆಲೆ: ಜುಲೈ 8ರಂದು ರಾಯಸಮುದ್ರ ಗ್ರಾಮದ ದಂಪತಿ ಗುಂಡೇಗೌಡ ಮತ್ತು ಲಲಿತಮ್ಮ ತಮ್ಮ ಮನೆಯಲ್ಲೇ ಹತ್ಯೆಗೀಡಾಗಿದ್ದರು. ಅವರ ಮನೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಮನೆ ಒಳಗಿನಿಂದ ದುರ್ವಾಸನೆ ಬಂದಾಗ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಬೀಗ ಒಡೆದು ನೋಡಿದಾಗ ದಂಪತಿ ಹತ್ಯೆಗೀಡಾಗಿರುವುದು ಬೆಳಕಿಗೆ ಬಂದಿತ್ತು. ಮೃತದೇಹಗಳು ಕೊಳೆಯಲಾರಂಭಿಸಿದ್ದವು. ಈ ಪ್ರಕರಣದಲ್ಲಿ ಈ ದಂಪತಿಯ ಪಕ್ಕದ ಮನೆ ನಿವಾಸಿ ಯೋಗೇಶ್ ಎಂಬಾತನನ್ನು ಆ. 4ರಂದು ಪೊಲೀಸರು ಬಂಧಿಸಿದ್ದರು. ನಂತರ ಆತನ ಪತ್ನಿ ಸುಜಾತಾಳನ್ನು ಸಹ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಅವರಿಬ್ಬರು ಇನ್ನೂ ಜೈಲಿನಲ್ಲೇ ಇದ್ದಾರೆ.

ಈ ನಡುವೆ ಅ. 28ರಂದು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರೇಗೌಡ ಹಾಗೂ ಅವರ ಪತ್ನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೆಂಕಟೇಶ್ ಮತ್ತು ಅರ್ಪಿತಾ ದಂಪತಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಇವರಿಬ್ಬರು ಕಳೆದ ಜುಲೈನಲ್ಲಿ ರಾಯಸಮುದ್ರ ದಂಪತಿ ಗುಂಡೇಗೌಡ ಮತ್ತು ಲಲಿತಮ್ಮ ಅವರನ್ನು ಸಹ ತಾವೇ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿಜವಾದ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಶುಕ್ರವಾರ ಗುಂಡೇಗೌಡ ಮತ್ತು ಲಲಿತಮ್ಮ ಜೋಡಿ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಡಿ.ವೈ.ಎಸ್.ಪಿ ಯೋಗೇಂದ್ರನಾಥ್ ನೇತೃತ್ವದ ತನಿಖಾ ತಂಡವು ಕೊಲೆ ಆರೋಪಿಗಳಾದ ವೆಂಕಟೇಶ್ ಮತ್ತು ಅರ್ಪಿತಾ ಅವರನ್ನು ರಾಯಸಮುದ್ರ ಗ್ರಾಮಕ್ಕೆ ಕರೆತಂದು ಮಹಜರು ನಡೆಸಿದರು.

ಕೊಲೆಗೆ ಬಳಸಲಾದ ಕಬ್ಬಿಣದ ರಾಡ್ ಅನ್ನು ರಾಯಸಮುದ್ರ ಸಮುದಾಯಭವನದ ಎದುರು ಸಣ್ಣ ಕಟ್ಟೆಯೊಳಕ್ಕೆ ಬಿಸಾಕಿರುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಕಟ್ಟೆಯ ನೀರು ಬಸಿದು ರಾಡ್ ವಶಕ್ಕೆ ಪಡೆಯಲು ಕ್ರಮ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಿ ತನಿಖೆ ಮುಂದುವರಿಸಿದ್ದಾರೆ. ಸಿಪಿಐ ಕೆ.ಎನ್.ಸುಧಾಕರ್ ಇದ್ದರು.

ಪ್ರತಿಕ್ರಿಯಿಸಿ (+)