ಮಂಗಳವಾರ, ಜುಲೈ 5, 2022
25 °C
ಜೆಡಿಎಸ್ ಬೆಂಬಲಿತರ ಅಭಿನಂದನಾ ಸಮಾರಂಭ

ರಾಮನಗರ, ಮಂಡ್ಯ ನನ್ನ ಕಣ್ಣುಗಳು: ನಿಖಿಲ್‌ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ‘ಜಿಲ್ಲೆಯನ್ನು ಕೈಬಿಡುವ ಪ್ರಶ್ನೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ರಾಮನಗರ ಮತ್ತು ಮಂಡ್ಯ ನನ್ನ ಕಣ್ಣುಗಳಂತೆ’ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಬೆಂಬಲಿತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣದಲ್ಲಿ ಹಣ ಹಾಗೂ ಅದೃಷ್ಟದಿಂದ ಅಧಿಕಾರ ಸಿಗುವುದಿಲ್ಲ. ಅಧಿಕಾರ ಸಿಗಬೇಕಾದರೆ ಯೋಗ್ಯತೆ ಇರಬೇಕು. ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವ ಉದ್ದೇಶ ಇರಲಿಲ್ಲ. ಆದರೆ ಕೆ.ಆರ್.ನಗರ ಹಾಗೂ ಜಿಲ್ಲೆಯ ಏಳು ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯದಿಂದ ಸ್ಪರ್ಧೆ ಮಾಡಿದ್ದೆ. ನನಗೆ ಚುನಾವಣೆ ಹೊಸ ಅನುಭವ. ಗೆಲುವು ಸಾಧಿಸಲು ಅದೃಷ್ಟ ಇರಲಿಲ್ಲ. ಆದರೆ, ಜಿಲ್ಲೆಯ ಕಾರ್ಯಕರ್ತರು ತೋರಿಸುತ್ತಿರುವ ಅಭಿಮಾನ ನೋಡಿದ್ದರೆ ಕುಮಾರಣ್ಣನ ಮಗನಾಗಿ ಹುಟ್ಟಿದ್ದು ನನ್ನ ಅದೃಷ್ಟ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಜಿಲ್ಲೆಯ ಶೇ 70ರಷ್ಟು ಜೆಡಿಎಸ್ ಬೆಂಬಲಿತರು ನನ್ನ ಸೋಲನ್ನು ಮರೆಯಾಗಿಸಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಅವಶ್ಯಕತೆ ಇದೆ. ಯುವಕರಿಗೆ ಪಕ್ಷದ ಹಿರಿಯರ ಆಶಿರ್ವಾದ ಬೇಕು. ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಮನವಿ ಮಾಡಿದರು. ಜಿಲ್ಲೆಯನ್ನು ಕೈಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದರು.

ಭಾವುಕರಾದ ನಿಖಿಲ್: ‘ಚುನಾವಣೆಯಲ್ಲಿ ಸೋತಿರಬಹುದು ನನಗೆ ಚಿಂತೆ ಇಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ ಎಂದು ನೀವು ಕೋಟ್ಯಂತರ ರೂಪಾಯಿಯನ್ನು ನನ್ನ ಪರ ಬೆಟ್ಟಿಂಗ್ ಕಟ್ಟಿದ್ದಿರಿ. ಹಲವು ಜನರು ನನ್ನ ಸೋಲಿನಿಂದ ಮನೆ-ಮಠ ಕಳೆದುಕೊಂಡಿದ್ದು, ಇದು ನನಗೆ ನೋವು ತರಿಸಿದೆ ಎಂದರು.

ನನ್ನ ಎದುರಾಗಿ ಸ್ಪರ್ಧೆ ಮಾಡಿದ್ದವರಿಗೆ ಅಷ್ಟಾಗಿ ಜಿಲ್ಲೆಯ ಜನರ ಸಂಪರ್ಕ ಇರಲಿಲ್ಲ. ಕುಮಾರಣ್ಣ ಅವರ ಶಕ್ತಿ ಕುಗ್ಗಿಸಲು ಕೆಲವು ವಿರೋಧಿಗಳು ಬಣವೊಂದನ್ನು ಸೃಷ್ಟಿಸಿದರು ಎಂದು ಸಂಸದೆ ಸುಮಲತಾ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಎಚ್.ಡಿ.ದೇವೇಗೌಡ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಿ ಹಿಂದುಳಿದ ಹಾಗೂ ಮಹಿಳೆಯರಿಗೆ ರಾಜಕೀಯವಾಗಿ ಅಧಿಕಾರ ಸಿಗುವಂತೆ ಮಾಡಿದ್ದಾರೆ. ಗೆದ್ದಿರುವ ಅಭ್ಯರ್ಥಿಗಳು ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ತಾಲ್ಲೂಕಿನಲ್ಲಿ ಈ ಬಾರಿ ಅತಿಹೆಚ್ಚು ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದು, ನೂತನ ಸದಸ್ಯರು ಭ್ರಷ್ಟಾಚಾರ ರಹಿತವಾಗಿ ಒಳ್ಳೆಯ ಆಡಳಿತ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿ ಎಂದರು.

ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಡಿ.ರಮೇಶ್ ಮಾತನಾಡಿದರು.

ಜಿ.ಪಂ.ಸದಸ್ಯ ರವಿ ಕಂಸಾಗರ, ತಾ.ಪಂ.ವಿರೋಧ ಪಕ್ಷದ ನಾಯಕ ಸೋಮಶೇಖರ್, ಸದಸ್ಯ ಪುಟ್ಟಸ್ವಾಮಿ, ಪುರಸಭೆ ಉಪಾಧ್ಯಕ್ಷ ಟಿ.ನಂದಕುಮಾರ್, ಸದಸ್ಯರಾದ ವಡ್ಡರಹಳಿ ಸಿದ್ದರಾಜು, ಬಸವರಾಜು, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಮಲ್ಲೇಗೌಡ, ಯುವ ಘಟಕದ ಅಧ್ಯಕ್ಷ ಚಂದಹಳ್ಳಿ ಶ್ರೀಧರ್ ಯುವ ಮುಖಂಡರಾದ ಸುಹಾಸ್ ಮಹದೇವಯ್ಯ, ಕುಂದೂರು ಭರತ್ ಸೇರಿದಂತೆ ಹಲವು ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು