21 ಕಾರ್ಮಿಕರ ಮರು ನೇಮಕಕ್ಕೆ ಪಟ್ಟು

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್ ಕೈಬಿಟ್ಟಿರುವ 21 ಮಂದಿ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ರೈತ ಸಂಘದ ಕಾರ್ಯಕರ್ತರು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಾರ್ಮಿಕರೊಡನೆ ಮುತ್ತಿಗೆ ಹಾಕಿದ ರೈತ ಸಂಘದ ಕಾರ್ಯಕರ್ತರು, ಕಳೆದ ಮಾರ್ಚ್ 30ರಂದು 21 ಮಂದಿ ಕಾರ್ಮಿಕರನ್ನು ಪಿಎಸ್‌ಎಸ್‌ಕೆ ಆಡಳಿತ ಮಂಡಳಿ ಬಿಡುಗಡೆ ಮಾಡಿದೆ ಎಂದು ನಿರಾಣಿ ಶುಗರ್ಸ್ ಮಾಲೀಕ ವಿಜಯ್ ನಿರಾಣಿ ಹೇಳಿದ್ದಾರೆ. ಆದರೆ ಮಾರ್ಚ್ 29ರಂದು ನಿರಾಣಿ ಶುಗರ್ಸ್ ಮುಖ್ಯ ಪ್ರಧಾನ ವ್ಯವಸ್ಥಾಪಕರು, 21ಮಂದಿ ಕಾರ್ಮಿಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಮತ್ತೆ ಪಿಎಸ್‌ಎಸ್‌ಕೆಗೆ ಹಸ್ತಾಂತರಿಸುವ ಪತ್ರವನ್ನು ನೀಡಿದ್ದಾರೆ ಎಂದು ವಿವರಿಸಿದರು.
ನಿರಾಣಿ ಶುಗರ್ಸ್, ಪಿಎಸ್‌ಎಸ್‌ಕೆ ಎಂ.ಡಿ ಮಾ.29, ಜ.30ರಂದು 21 ಕಾರ್ಮಿಕರನ್ನು ಬಿಡುಗಡೆ ಮಾಡಿರುವ ಆದೇಶಕ್ಕೆ ಹೈಕೋರ್ಟ್ ಜೂನ್ 2ರಂದು ತಡೆಯಾಜ್ಞೆ ನೀಡಿದ್ದರೂ ಕಾರ್ಮಿಕರಿಗೆ ಕೆಲಸ ನೀಡಿಲ್ಲ. ಇದು ಹೈಕೋರ್ಟ್ ಆದೇಶದ ಉಲ್ಲಂಘನೆ. ಕಾರ್ಖಾನೆಯ ಅಭಿವೃದ್ಧಿಗಾಗಿ 10 ವರ್ಷದಿಂದ ಕಡಿಮೆ ಸಂಬಳದಲ್ಲಿ ದುಡಿದ ಕಾರ್ಮಿಕರನ್ನು ಈ ರೀತಿ ನಡೆಸಿಕೊಂಡಿರುವುದು ಖಂಡನೀಯ ಎಂದರು.
ಕಾರ್ಮಿಕರಿಗೆ ಕೂಡಲೇ ಕೆಲಸ ನೀಡುವಂತೆ ನಿರಾಣಿ ಶುಗರ್ಸ್ ಸಿಜೆಎಂಗೆ ಪತ್ರ ಬರೆಯುವಂತೆ ರೈತ ಸಂಘದ ಜಿಲ್ಲಾ ಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡ ಕೆನ್ನಾಳು ನಾಗರಾಜು, ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್ ಆಗ್ರಹಿಸಿದರು.
ಪಿಎಸ್‌ಎಸ್‌ಕೆ ಎಂ.ಡಿ ವಿಕ್ರಮರಾಜೇ ಅರಸ್ ಮಾತನಾಡಿ, ನ್ಯಾಯಾಲಯದ ತಡೆಯಾಜ್ಞೆ ಬಂದ ನಂತರ ಕಾರ್ಮಿಕರಿಗೆ ಕೆಲಸ ನೀಡುವಂತೆ ನಿರಾಣಿ ಶುಗರ್ಸ್ ಸಿಜೆಎಂ ಅವರಿಗೆ 2 ಪತ್ರ ಬರೆದಿದ್ದರೂ ಉತ್ತರ ನೀಡಿಲ್ಲ. ಮತ್ತೆ ಪತ್ರ ಬರೆಯಲಾಗುವುದು ಎಂದರು.
ನಿರಾಣಿ ಶುಗರ್ಸ್ ಪರವಾಗಿ ಸುದ್ದಿಗೋಷ್ಠಿ ನಡೆಸಿರುವವರು ಕಬ್ಬು ಬೆಳೆಯುವ ರೈತರಲ್ಲ. ಅವರೆಲ್ಲರೂ ನಿರಾಣಿ ಶುಗರ್ಸ್ ಗುತ್ತಿಗೆದಾರರು ಎಂದು ಕಾರ್ಮಿಕ ಕೆ.ಜೆ.ಮಧು ಆರೋಪಿಸಿದರು.
ಪಿಎಸ್ಎಸ್‌ಕೆ ಗುತ್ತಿಗೆ ಕರಾರಿಗೆ ಆಕ್ಷೇಪ ವ್ಯಕ್ತಪಡಿಸಿರುವ ಡಾ.ಎಚ್.ಎನ್.ರವೀಂದ್ರ ಹೇಳಿಕೆಗೆ ವಿರುದ್ಧವಾಗಿ ನಿರಾಣಿ ಶುಗರ್ಸ್ ಮಾಲೀಕ ವಿಜಯ್ ನಿರಾಣಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾರ್ಖಾನೆಯಲ್ಲಿ ಕಾಮಗಾರಿ ನಡೆಸುತ್ತಿರುವ ಕೆಲ ಗುತ್ತಿಗೆದಾರರು, ಕಾರ್ಮಿಕರ ಹಿತ ಮರೆತು ಮಾತ ನಾಡುತ್ತಿದ್ದಾರೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಉಪಾ ಧ್ಯಕ್ಷ ಕಡತನಾಳು ಬಾಲಕೃಷ್ಣ, ತಾ.ಅಧ್ಯಕ್ಷ ಚಿಕ್ಕಾಡೆ ಹರೀಶ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ವೈ.ಪಿ.ಮಂಜುನಾಥ್, ಕಾರ್ಮಿಕರಾದ ಮಧು, ಆನಂದ್, ವೆಂಕಟೇಶ್, ಭೈರಸ್ವಾಮಿ, ಅರ್ಜುನ, ವೆಂಕಟರಾಮೇಗೌಡ, ರಾಜೇಶ್, ನಾಗರಾಜು, ಅಂಜನ್, ಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.