ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಗಾಳಿ’ ಗೀತೆಗೆ ಜೀವ ತುಂಬಿದ್ದ ಎಸ್‌ಪಿಬಿ!

ಯುವ ಸಂಗೀತ ನಿರ್ದೇಶಕ ಡೇವಿಡ್‌ ಪ್ರತಿಭಾಂಜಲಿ ಸಂಗೀತಕ್ಕೆ ಹಾಡಿದ್ದ ಗಾನಗಂಧರ್ವ
Last Updated 25 ಸೆಪ್ಟೆಂಬರ್ 2020, 16:05 IST
ಅಕ್ಷರ ಗಾತ್ರ

ಮಂಡ್ಯ: ಯುವ ಸಂಗೀತ ನಿರ್ದೇಶಕ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಡೇವಿಡ್‌ ಪ್ರತಿಭಾಂಜಲಿ ಸಂಗೀತ ಸಂಯೋಜನೆಯ ‘ಬಂದಿದೆ ಬಿರುಸಿನ ಕನ್ನಡ ಗಾಳಿ’ ಗೀತೆಗೆ ಗಾನಗಂಧರ್ವ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಜೀವ ತುಂಬಿದ್ದರು. ಈ ಗೀತೆ ಕನ್ನಡ ರಾಜ್ಯೋತ್ಸವದ ಹಲವು ಕಾರ್ಯಕ್ರಮಗಳಲ್ಲಿ ಮೊಳಗಿತ್ತು.

ಸಾಹಿತಿ ದಿ.ಎಂ.ಎನ್‌.ವ್ಯಾಸರಾವ್‌ ಅವರು ಬರೆದ ಕಡೆಯ ಗೀತೆ ಇದಾಗಿದ್ದು ಎಸ್‌ಪಿಬಿ ಅವರು ಬಹಳ ಪ್ರೀತಿಯಿಂದ ಹಾಡಿದ್ದರು. ಈ ವಿಡಿಯೊ ಗೀತೆಯನ್ನು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ, ಕಬ್ಬು, ಭತ್ತದ ಗದ್ದೆಗಳ ಬಯಲಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಡೇವಿಡ್‌ ಅವರು ಬಾಲಸುಬ್ರಹ್ಮಣ್ಯಂ ಅವರ ದಿನಾಂಕಕ್ಕೆ ಹಲವು ತಿಂಗಳು ಕಾದು, ಅವರ ಧ್ವನಿಯೇ ಬೇಕು ಎಂಬ ಹಠಕ್ಕೆ ಬಿದ್ದು ಹಾಡಿಸಿದ್ದರು.

‘ಬಾಲಸುಬ್ರಹ್ಮಣ್ಯಂ ಅವರು ಸ್ಟುಡಿಯೊದಲ್ಲಿ ಮೈಕ್‌ ಮುಂದೆ ನಿಂತು ನನಗೆ ಕರೆ ಮಾಡಿದ್ದರು, ನಾನಾಗ ಬಹಳ ರೋಮಾಂಚನಗೊಂಡಿದ್ದೆ. ತುಂಬಾ ಚೆನ್ನಾಗಿ ಸಂಗೀತ ಸಂಯೋಜನೆ ಮಾಡಿದ್ದೀರಿ ಎಂದು ಪ್ರೀತಿಯಿಂದ ಹಾರೈಸಿದ್ದರು. ಯಾವ ಜಾಗದಲ್ಲಿ ಎತ್ತರಿಸಿ ಹಾಡಬೇಕು, ಎಲ್ಲಿ ಗಟ್ಟಿ ಧ್ವನಿ ಬೇಕು ಎಂದು ಕೇಳಿದ್ದರು. ನನ್ನಂಥ ಸಣ್ಣ ಸಂಗೀತ ನಿರ್ದೇಶಕನಿಂದಲೂ ಕೇಳಿ ಹಾಡಿ ದೊಡ್ಡವರಾಗುತ್ತಿದ್ದರು. ಈಗ ಅವರು ಇಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಅವರ ಹಾಡುಗಳು ಸದಾ ನಮ್ಮ ಜೊತೆ ಇರುತ್ತವೆ’ ಎಂದು ಡೇವಿಡ್‌ ನೋವಿನಿಂದ ಹೇಳಿದರು.

ರಿಯಾಲಿಟಿ ಶೋನಲ್ಲಿ ಹಾಡು: ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಎಸ್‌ಪಿಬಿ ತೀರ್ಪುಗಾರರಾಗಿದ್ದ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋನಲ್ಲಿ ಡೇವಿಡ್‌ ಸ್ಪರ್ಧಿಯಾಗಿ ಭಾಗವಹಿಸಿ ಹಾಡಿದ್ದರು. ‘ಧ್ವನಿ ಚೆನ್ನಾಗಿದೆ, ಕಲಿಕೆ ಮುಂದುವರಿಸಿ ಎಂದು ಆಶೀರ್ವಾದ ಮಾಡಿದ್ದರು. ಅವರ ಮುಂದೆ ಮೂರು ಹಾಡುಗಳನ್ನು ಹಾಡುವ ಭಾಗ್ಯ ನನ್ನದಾಗಿತ್ತು’ ಎಂದು ಡೇವಿಡ್‌ ಹೇಳಿದರು.

ಸಕ್ಕರೆ ನಾಡು ಅವರ ಕಂಠಸಿರಿಗೆ ಮಾರು ಹೋಗಿತ್ತು. ಈಗ ಎಸ್‌ಪಿಬಿ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬುದು ಇಲ್ಲಿಯ ಸಂಗೀತ ಪ್ರೇಮಿಗಳಿಗೆ ಸಹಿಸಲು ಅಸಾಧ್ಯವಾದ ನೋವಾಗಿದೆ.

ಕನ್ನಡ ಜಾತ್ರೆಯಲ್ಲಿ ಹಾಡು: ಮೇಲುಕೋಟೆ ಶಾಸಕ ಸಿ.ಎಸ್‌.ಪುಟ್ಟರಾಜು ನೇತೃತ್ವದಲ್ಲಿ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ನಡೆದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಪಾಲ್ಗೊಂಡಿದ್ದರು. ಸಾವಿರಾರು ಜನರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಎಸ್‌ಪಿಬಿ ಹಾಡಿ ಜನರನ್ನು ರಂಜಿಸಿದ್ದರು.

‘ನಾನೂ ಒಬ್ಬ ಸಂಗೀತ ಪ್ರೇಮಿಯಾಗಿ ಎಸ್‌.ಪಿ.ಬಿ ಅವರ ಹಾಡುಗಳೆಂದರೆ ಬಲು ಇಷ್ಟ. ಆ ಪ್ರೀತಿಗಾಗಿ ನಾನು ಅವರನ್ನು ಪಾಂಡವಪುರಕ್ಕೆ ಆಹ್ವಾನ ಮಾಡಿದ್ದೆ. ಅವರನ್ನು ಬಹಳ ಸಂಭ್ರಮದಿಂದ ಸಸ್ಮಾನ ಮಾಡಿದ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಸದಾ ನಮ್ಮೊಂದಿಗೆ ಇರುತ್ತಾರೆ’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT