ಭಾನುವಾರ, ಜನವರಿ 26, 2020
29 °C
ರೈತ ದಿನಾಚರಣೆ: 101 ರೈತ ಮಹಿಳೆಯರಿಗೆ ಕಾಯಕ ಪ್ರಶಸ್ತಿ ಪ್ರದಾನ

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್‌ ಪ್ರಧಾನಿ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತೀನಗರ (ಮಂಡ್ಯ ಜಿಲ್ಲೆ): ‘ಭಾರತದ ಕಬ್ಬು ಬೆಳೆಗಾರರ ವಿರೋಧಿಯಾಗಿರುವ ಬ್ರೆಜಿಲ್‌ ಪ್ರಧಾನಿ ಬೋಲ್ಸೆನಾರೋ ಅವರನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ’ ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ವಿಶ್ವ ರೈತ ದಿನಾಚರಣೆ ಅಂಗವಾಗಿ ಸೋಮವಾರ ನಡೆದ ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು ‘ನಮ್ಮ ದೇಶದ ಹಲವು ರಾಜ್ಯಗಳಲ್ಲಿ ರೈತರು ಕಬ್ಬು ಬೆಳೆಯುತ್ತಾರೆ. ಕಬ್ಬು ಬೆಳೆಗಾರರನ್ನು ಪ್ರೋತ್ಸಾಹಿಸಲು ಸರ್ಕಾರ ನ್ಯಾಯಯುತ ದರ (ಎಫ್‌ಆರ್‌ಪಿ) ನಿಗದಿ ಮಾಡಿದೆ. ಆದರೆ ಈ ದರ ವಿಶ್ವ ವಾಣಿಜ್ಯ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಬ್ರೆಜಿಲ್‌ ಪ್ರಧಾನಿ ಬೋಲ್ಸೆನಾರೋ ವಾದಿಸಿದ್ದಾರೆ. ರೈತರ ವಿರುದ್ಧ ಮಾತನಾಡಿರುವ ಅವರು ಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗುವುದು ಬೇಡ’ ಎಂದು ಒತ್ತಾಯಿಸಿದರು.

ಸಮಾವೇಶ ಉದ್ಘಾಟಿಸಿದ ಸಾಹಿತಿ ದೇವನೂರ ಮಹಾದೇವ ಮಾತನಾಡಿ ‘ಕಡಿಮೆ ನೀರು ಬಳಸಿ ಬೆಳೆಯುವ ಬೆಳೆಗಳ ಬಗ್ಗೆ ರೈತರಲ್ಲಿ ಬೃಹತ್‌ ಜಾಗೃತಿ ಮೂಡಬೇಕು. ನೀರಿನ ಅಪವ್ಯಯ ತಡೆಯಬೇಕು. ರಾಸಾಯನಿಕ ಬಳಸಿ ಕಬ್ಬು ಬೆಳೆಯುತ್ತಿರುವ ಕಾರಣ ಭೂಮಿ ಮುಂದೊಂದು ದಿನ ಬರಡಾಗುವ ಅಪಾಯವಿದೆ. ತಂಬಾಕು ಬೆಳೆಯಿಂದ ಕ್ಯಾನ್ಸರ್‌ ಬರುತ್ತದೆ, ಕ್ಯಾನ್ಸರ್‌ ಬಂದು ಸತ್ತಾಗ ಪರಿಹಾರ ಕೇಳುವ ಬದಲು ಈಗಲೇ ಪರ್ಯಾಯ ಬೆಳೆ ಬೆಳೆಯಬೇಕು’ ಎಂದರು.

‘ಮನೆ ಮುಂದೆ ನುಗ್ಗೆ ಗಿಡ, ಮನೆ ಹಿಂದೆ ಈರುಳ್ಳಿ ಗಿಡ ಬೆಳೆಯುವ ಆಂದೋಲನವನ್ನು ರೈತ ಸಂಘ ನೂತನವಾಗಿ ಹಮ್ಮಿಕೊಂಡಿದೆ. ಎಲ್ಲರೂ ಮನೆಯಲ್ಲಿಯೇ ಅಗತ್ಯ ತರಕಾರಿ ಬೆಳೆದು ಉಪಯೋಗಿಸಬೇಕು’ ಎಂದರು.

ರೈತ ಮಹಿಳೆಯರಿಗೆ ಕಾಯಕ ಪ್ರಶಸ್ತಿ: ಸಮಾವೇಶದ ಅಂಗವಾಗಿ ರೈತ ನಾಯಕರಾದ ದಿವಂಗತ ಕೆ.ಎಸ್‌.ಪುಟ್ಟಣ್ಣಯ್ಯ, ಎನ್‌.ಡಿ.ಸುಂದರೇಶ್‌ ಅವರನ್ನು ಸ್ಮರಿಸಲಾಯಿತು. ರಾಜ್ಯದ 27 ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ರೈತರು ಸಮಾವೇಶದಲ್ಲಿ ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳಿಂದ ಆಯ್ಕೆ ಮಾಡಿದ್ದ 101 ರೈತ ಮಹಿಳೆಯರಿಗೆ ‘ಕಾಯಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಿಂದ ಭಾರತಿ ಕಾಲೇಜಿನವರೆಗೆ ರೈತರ ಮೆರವಣಿಗೆ ನಡೆಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು