ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕಂದಾಯ ಇಲಾಖೆ ಬಂದ್‌ಗೆ ಅನುಮತಿ ಕೊಟ್ಟವರಾರು?

ಮಿನಿ ವಿಧಾನಸೌಧ, ನಾಡಕಚೇರಿಗೆ ಬೀಗ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಸಾರ್ವಜನಿಕರು
Last Updated 31 ಜನವರಿ 2022, 16:03 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾಧಿಕಾರಿ ಅನುಮತಿ ಪಡೆಯದೇ ಸೋಮವಾರ ಜಿಲ್ಲೆಯಾದ್ಯಂತ ಕಂದಾಯ ಇಲಾಖೆ ಕಚೇರಿಗಳನ್ನು ಬಂದ್‌ ಮಾಡಿದ್ದ ಕ್ರಮವನ್ನು ಸಾರ್ವಜನಿಕರು ಖಂಡಿಸಿದ್ದಾರೆ. ಮಿನಿವಿಧಾನಸೌಧ ಸೇರಿ ಹಲವು ಕಚೇರಿಗಳಿಗೆ ಬೀಗ ಹಾಕಿದ್ದ ಕಾರಣ ಸಾವಿರಾರು ರೈತರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.

ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಸದಸ್ಯರು ಪಾಂಡವಪುರ ತಾಲ್ಲೂಕು ಕಚೇರಿಗೆ ನುಗ್ಗಿ ದುಂಡಾವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಎಲ್ಲಾ ಕಂದಾಯ ಇಲಾಖೆ ಕಚೇರಿಗಳನ್ನು ಬಂದ್‌ ಮಾಡಲಾಗಿತ್ತು. ಸರ್ಕಾರಿ ನೌಕರರ ಸಂಘ ನೀಡಿದ್ದ ಬಂದ್‌ ಕರೆಗೆ ಕಂದಾಯ ಇಲಾಖೆಯ ಅಧಿಕಾರಿಗಳೆಲ್ಲರೂ ಸಾಮೂಹಿಕವಾಗಿ ರಜೆ ಹಾಕಿದ್ದರು.

ಬಂದ್‌ ಅಂಗವಾಘಿ ಮಿನಿವಿಧಾನಸೌಧ, ನಾಡಕಚೇರಿಗಳಿಗೆ ಬೀಗ ಹಾಕಲಾಗಿತ್ತು. ಯಾವುದೇ ಮುನ್ಸೂಚನೆಯನ್ನೂ ನೀಡದೆ ಕಚೇರಿ ಬಂದ್‌ ಮಾಡಿದ್ದ ಕಾರಣ ಸಾವಿರಾರು ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಪರದಾಡಬೇಕಾಯಿತು. ಕಚೇರಿಗೆ ಬಂದು ಯಾವುದೇ ಕೆಲಸಗಳಾಗದ ಕಾರಣ ಬರಿಗೈಯಲ್ಲಿ ಹಿಂದಿರುಗಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಡಿ ದರ್ಜೆ ನೌಕರರೂ ಕಚೇರಿ ಕಡೆ ಬರಲಿಲ್ಲ. ವಾರದ ಮೊದಲ ದಿನ ಕಚೇರಿಗಳು ಬಂದ್‌ ಆಗಿದ್ದ ಕಾರಣ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕಿದರು. ಕೆಆರ್‌ಎಸ್‌ ಪಕ್ಷದವರು ನಡೆಸುತ್ತಿರುವ ಹೋರಾಟಕ್ಕೆ ಸಾರ್ವಜನಿಕರನ್ನು ಬಲಿಪಶು ಮಾಡುತ್ತಿರುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸಿದರು.

ಉಪ ವಿಭಾಗಾಧಿಕಾರಿ, ಉಪ ನೋಂದಣಾಧಿಕಾರಿಗಳು, ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಬಂದ್‌ ಬೆಂಬಲಿಸಿ ಕಚೇರಿಯಿಂದ ದೂರು ಉಳಿದಿರು. ಹೀಗಾಗಿ ಜಿಲ್ಲೆಯಾದ್ಯಂತ ಕಂದಾಯ ಇಲಾಖೆಯ ಯಂತ್ರ ಸ್ಥಗಿತಗೊಂಡಿತ್ತು. ಎಲ್ಲರಿಗೂ ಸಾಮೂಹಿಕವಾಗಿ ರಜೆ ನೀಡಿದವರು ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದರು.

‘ಸಹಕಾರಿ ಸಂಘದಲ್ಲಿ ಸಾಲ ಪಡೆಯಲು ಜಮೀನು ದಾಖಲಾತಿ ಪಡೆಯಲು ತಾಲ್ಲೂಕು ಕಚೇರಿಗೆ ಬಂದಿದ್ದೆ. ಕಳೆದ ಶುಕ್ರವಾರ, ಶನಿವಾರವೂ ಬಂದಿದ್ದೆ. ಆದರೆ ಆಗ ಕೆಲಸ ಆಗಿರಲಿಲ್ಲ. ಸೋಮವಾರ ಕಚೇರಿ ಬಂದ್‌ ವಿಚಾರ ಗೊತ್ತಿರಲಿಲ್ಲ, ತಾಲ್ಲೂಕು ಕಚೇರಿ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರಂತೆ. ಕಚೇರಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾ’ ಎಂದು ಪಾಂಡವಪುರ ತಾಲ್ಲೂಕು ಬನ್ನಂಗಾಡಿ ಗ್ರಾಮದ ರೈತರೊಬ್ಬರು ಪ್ರಶ್ನಿಸಿದರು.

ಕೇಸ್‌ ಹಾಕಲಿ: ಕೆಆರ್‌ಎಸ್‌ ಪಕ್ಷದ ಸದಸ್ಯರು ಹೋರಾಟ, ದುಂಡಾವರ್ತನೆ ಕುರಿತಂತೆ ಈಗಾಗಲೇ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಹಾಗೂ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದು ಪೊಲೀಸ್‌ ಪ್ರಕರಣ ದಾಖಲಾಗಿದೆ. ಕೆಲ ಕೆಆರ್‌ಎಸ್‌ ಕಾರ್ಯಕರ್ತರ ಬಂಧನವೂ ಆಗಿದೆ. ಪ್ರಕರಣದ ತನಿಖೆ ನಡೆಯುತ್ತಿದ್ದರೂ ಅಧಿಕಾರಿಗಳು ಕಚೇರಿ ಬಂದ್‌ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಯಿತು.

‘ಅಧಿಕಾರಿಗಳು ಸಾರ್ವಜನಿಕರ ಸೇವಕರು, ಕಚೇರಿ ಬಂದ್‌ ಮಾಡಿ ಪ್ರತಿಭಟನೆ ಮಾಡುವ ಹಕ್ಕು ಅವರಿಗಿಲ್ಲ. ಸಾಮೂಹಿಕ ರಜೆ ಹಾಕಿ ಕಚೇರಿ ಬಂದ್‌ ಮಾಡಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು. ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ತಿಳಿಸಿದರು.

ಅನುಮತಿ ಕೊಟ್ಟಿಲ್ಲ: ಡಿ.ಸಿ

‘ಪ್ರತಿಭಟನೆ ನಡೆಸುವ ಬಗ್ಗೆ ತಹಶೀಲ್ದಾರ್‌ ಸೇರಿ ಯಾವುದೇ ಅಧಿಕಾರಿ ನಮ್ಮಿಂದ ಅನುಮತಿ ಪಡೆದಿಲ್ಲ, ರಜೆಹೋರಾಟದ ಉದ್ದೇಶಕ್ಕೆ ಕಚೇರಿ ಬಂದ್‌ ಮಾಡಬಹುದೇ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಅಧಿಕಾರಿಗಳು ತಪ್ಪೆಸೆಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

ಬೀಗ ತೆಗೆಯುವವರು ಬಂದಿಲ್ಲ: ಎ.ಸಿ

‘ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳು ಕರ್ತವ್ಯ ಮಾಡಿದ್ದೇವೆ, ಸಭೆಗಳಲ್ಲಿ ಭಾಗವಹಿಸಿದ್ದೇವೆ. ತಾಲ್ಲೂಕು ಕಚೇರಿಗಳ ಬೀಗ ತೆರೆಯುವ ಸಿಬ್ಬಂದಿಯೇ ಬಾರದ ಕಾರಣ ಕಚೇರಿಗಳಿಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ನಾವು ಕರ್ತವ್ಯ ಮಾಡಿದ್ದೇವೆ. ಸರ್ಕಾರಿ ಅಧಿಕಾರಿಗಳ ಸಂಘದ ಕರೆಗೆ ಓಗೊಟ್ಟು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ’ ಎಂದು ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಾನಂದ ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT