ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಶಾಲೆಗಳಿಗೆ ಶೇ 72ರಷ್ಟು ಪಠ್ಯಪುಸ್ತಕ ವಿತರಣೆ

ಗೊಂದಲಗಳ ನಡುವೆಯೂ ಮಕ್ಕಳ ಕೈಗೆ ಬಂದ ಪುಸ್ತಕ, ಕನ್ನಡ, ಸಮಾಜ ಪಠ್ಯದಲ್ಲಿ ಬದಲಾವಣೆ
Last Updated 14 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಗೊಂದಲ, ವಿತರಣೆಯಲ್ಲಿ ವಿಳಂಬ ಮುಂತಾದ ಸಮಸ್ಯೆಗಳ ನಡುವೆಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಕೈಗೆ ಪುಸ್ತಕ ಕೊಟ್ಟಿದೆ. ಜಿಲ್ಲೆಗೆ ಈಗಾಗಲೇ ಶೇ 72.2ರಷ್ಟು ಪಠ್ಯಪುಸ್ತಕಗಳು ಸರಬರಾಜಾಗಿದ್ದು ಶೇ 71.94ರಷ್ಟನ್ನು ಮಕ್ಕಳಿಗೆ ವಿತರಣೆ ಮಾಡಲಾಗಿದೆ.

ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಬೇಕು ಎಂಬ ಹೋರಾಟ ಈಗಲೂ ನಡೆಯುತ್ತಿದೆ. ವಿವಿಧ ಸಂಘಟನೆಗಳು ಪರಿಷ್ಕರಣೆಯನ್ನು ವಿರೋಧಿಸಿದ್ದಾರೆ. ಇದರ ನಡುವೆಯೂ ಶಿಕ್ಷಣ ಇಲಾಖೆ ಅಧಿಕಾರಿಗಳು ಬಹಳ ಶೀಘ್ರಗತಿಯಲ್ಲಿ ಪುಸ್ತಕಗಳನ್ನು ಶಾಲೆಗಳಿಗೆ ವಿತರಣೆ ಮಾಡಿದ್ದಾರೆ. ಪುಸ್ತಕ ಸರಬರಾಜು ಪ್ರಕ್ರಿಯೆ ಈಗಲೂ ಬಹಳ ಚುರುಕಾಗಿ ನಡೆಯುತ್ತಿದ್ದು ಮಕ್ಕಳು ನಿರಾಳರಾಗಿದ್ದಾರೆ.‌‌

ಶೈಕ್ಷಣಿಕ ವರ್ಷ ಆರಂಭಗೊಂಡು 1 ತಿಂಗಳು ಈಗಾಗಲೇ ಪೂರ್ಣಗೊಂಡಿದೆ. ಇಷ್ಟಾದರೂ ಶಾಲೆಗಳಿಗೆ ಪಠ್ಯಪುಸ್ತಕ ಬಂದಿರಲಿಲ್ಲ. ಕಾಗದದ ಅಭಾವದಿಂದ ಪುಸ್ತಕಗಳ ಮುದ್ರಣಕಾರರು ಪಠ್ಯಪುಸ್ತಕ ಮುದ್ರಣಕ್ಕೆ ಹಿಂದೇಟು ಹಾಕಿದ್ದರು. ಬೆಲೆ ಏರಿಕೆ ಕೂಡ ಮುದ್ರಣಕಾರರನ್ನು ಕಾಡಿತ್ತು. ಆದರೆ ಸರ್ಕಾರ ತ್ವರಿತಗತಿಯಲ್ಲಿ ಮುದ್ರಣವಾಗಬೇಕು ಎಂಬ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಪುಸ್ತಕ ಮುದ್ರಣಗೊಂಡು ಶಾಲೆಯತ್ತ ಸರಬರಾಜಾಗಿವೆ.

ಸದ್ಯದ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ತರಗತಿವರೆಗೆ 2 ವಿಷಯದ ಪಠ್ಯಗಳ ಪರಿಷ್ಕರಣೆ ಮಾಡಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದ ಗೂಡಾಗಿದ್ದು ಕೂಡ ಪುಸ್ತಕ ಮುದ್ರಣ ತಡವಾಗಲು ಕಾರಣವಾಗಿತ್ತು. ಸರ್ಕಾರ ಸದ್ಯ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ ಮಾಡಿದೆ. ಅವರು ಪರಿಷ್ಕರಣೆ ಮಾಡಿರುವ ಪಠ್ಯವನ್ನು ಮುದ್ರಿಸಿ ಈಗ ವಿತರಣೆ ಮಾಡಲಾಗಿದೆ.

1ರಿಂದ 10ನೇ ತರಗತಿವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯವನ್ನಷ್ಟೇ ಪರಿಷ್ಕರಣೆ ಮಾಡಲಾಗಿದ್ದು ಉಳಿದ ಇಂಗ್ಲಿಷ್‌, ಹಿಂದಿ, ಗಣಿತ, ವಿಜ್ಞಾನ ಮುಂತಾದ ವಿಷಯವನ್ನು ಹಳೆಯ ಪಠ್ಯಗಳನ್ನೇ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 14,19,462 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದರಲ್ಲಿ ಈಗ 9,04,719 ಪುಸ್ತಕಗಳು(ಶೇ 72.2ರಷ್ಟು) ಜಿಲ್ಲೆಗೆ ಬಂದಿವೆ.844026 ಪುಸ್ತಕಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗಿದೆ.

ಆಯಾ ಶೈಕ್ಷಣಿಕ ಬ್ಲಾಕ್‌ಗಳಿಗೆ ನೇರವಾಗಿ ಪುಸ್ತಕಗಳು ಸರಬರಾಜಾಗಿದ್ದು ತಾಲ್ಲೂಕು ಮಟ್ಟದಲ್ಲಿ ನೇಮಕ ಮಾಡಲಾಗಿರುವ ನೋಡೆಲ್‌ ಅಧಿಕಾರಿಗಳ ನೇತೃತ್ವದಲ್ಲಿ ಶಾಲೆಗಳಿಗೆ ವಿತರಣೆ ಮಾಡಲಾಗಿದೆ. ಕೆಲವು ತಾಲ್ಲೂಕುಗಳಿಗೆ ಹೆಚ್ಚಿನ ಪುಸ್ತಕ ಸರಬರಾಜಾಗಿದ್ದರೆ ಕೆಲ ತಾಲ್ಲೂಕುಗಳಿಗೆ ಕಡಿಮೆ ಆಗಿದೆ. ಜಿಲ್ಲಾ ಮಟ್ಟದಲ್ಲಿ ನೇಮಕವಾಗಿರುವ ಜಿಲ್ಲಾ ನೋಡೆಲ್‌ ಅಧಿಕಾರಿ ಪಠ್ಯಪುಸ್ತಕ ವಿತರಣೆ ಪ್ರಕ್ರಿಯೆ ಮೇಲೆ ನಿಗಾ ವಹಿಸಿದ್ದಾರೆ.

ಈಗ ವಿತರಣೆ ಮಾಡಿರುವ ಪಠ್ಯಪುಸ್ತಕವನ್ನು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ. ಖಾಸಗಿ ಶಾಲೆಗಳು ನಿಗದಿತ ಹಣ ಕಟ್ಟಿ ಪಠ್ಯಪುಸ್ತಕ ಖರೀದಿ ಮಾಡಿವೆ. ಶಾಲೆಗಳು ಮಕ್ಕಳಿಗೆ ಶುಲ್ಕದ ಮೂಲಕ ಪಠ್ಯಪುಸ್ತಕದ ಹಣವನ್ನು ವಸೂಲಿ ಮಾಡುತ್ತವೆ.

‘ಇಲ್ಲಿಯವರೆಗೂ ಪಠ್ಯಪುಸ್ತಕ ನೀಡಿಲ್ಲ ಎಂದು ಮಕ್ಕಳು ಮನೆಯಲ್ಲಿ ದೂರು ಹೇಳುತ್ತಿದ್ದರು. ಪಾಠಗಳೂ ಬದಲಾಗಿರುವ ಬಗ್ಗೆಯೂ ಹೇಳುತ್ತಿದ್ದರು. ಪುಸ್ತಕಗಳು ಇಲ್ಲದೇ ಮಕ್ಕಳು ಶಾಲೆಗಳಿಗೆ ಹೋಗಿ ಬರುತ್ತಿದ್ದರು. ಈಗ ಪುಸ್ತಕ ಸಿಕ್ಕಿರುವುದು ಮಕ್ಕಳಿಗೆ ಖುಷಿಯಾಗಿದೆ’ ಎಂದು ಮಳವಳ್ಳಿಯ ಪೋಷಕ ತಮ್ಮಣ್ಣಗೌಡ ತಿಳಿಸಿದರು.

****

ಬಹಳ ಶೀಘ್ರಗತಿಯಲ್ಲಿ ಶಾಲೆಗಳಿಗೆ ಪಠ್ಯಪುಸ್ತಕವನ್ನು ತಲುಪಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದ ಕೂಡಲೇ ಸ್ವೀಕರಿಸಿ ಅವುಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಗುತ್ತಿದೆ.

–ಎಚ್‌.ಎಂ.ನಾಗೇಂದ್ರ ಮೂರ್ತಿ, ನೋಡೆಲ್‌ ಅಧಿಕಾರಿ

****

ಬಾರದ ಕಲಿಕಾ ಹಾಳೆ

ಕಳೆದೆರಡು ವರ್ಷ ಕೋವಿಡ್‌ ಕಾಲದಲ್ಲಿ ಮಕ್ಕಳ ಜ್ಞಾನಮಟ್ಟದಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ತಗ್ಗಿಸಲು ಶಿಕ್ಷಕರಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ(ಡಯಟ್‌) ವತಿಯಿಂದ ‘ಕಲಿತಾ ಚೇತರಿಕೆ’ ತರಬೇತಿ ನೀಡಲಾಗಿದೆ. ಕೆಲವು ಅಭ್ಯಾಸಗಳ ಮೂಲಕ ಮಕ್ಕಳನ್ನು ಸದೃಢಗೊಳಿಸಲು ಕಲಿಕಾ ಹಾಳೆಗಳನ್ನು ರೂಪಿಸಲಾಗಿದೆ. ಈ ಹಾಳೆಗಳು ಮುದ್ರಣಗೊಂಡು ಇನ್ನೂ ಮಕ್ಕಳ ಕೈ ಸೇರಬೇಕಾಗಿದೆ.

‘ತರಗತಿವಾರು ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸುವ ಪ್ರಕ್ರಿಯೆ ಈಗಷ್ಟೇ ಪೂರ್ಣಗೊಂಡಿದೆ. ನಂತರ ಕಲಿಕಾ ಹಾಳೆ ಮುದ್ರಣವಾಗಿ ಬರಲಿದೆ’ ಎಂದು ಡಯಟ್‌ ಪ್ರಾಚಾರ್ಯ ಶಿವಮಾದಪ್ಪ ತಿಳಿಸಿದರು.

----

ಬ್ಲಾಕ್‌ವಾರು ಪಠ್ಯ ಪುಸ್ತಕ ವಿತರಣೆ

ಬ್ಲಾಕ್‌; ಬೇಡಿಕೆ; ಪೂರೈಕೆ; ವಿತರಣೆ
ಮಂಡ್ಯ ದಕ್ಷಿಣ; 210061; 143167; 130500
ಮಂಡ್ಯ ಉತ್ತರ; 100975; 76585; 70502
ಮದ್ದೂರು; 152569; 106653; 106653
ಮಳವಳ್ಳಿ; 172125; 117123; 116568
ಕೆ.ಆರ್‌.ಪೇಟೆ; 294229; 101912;101912
ನಾಗಮಂಗಲ; 206068; 160989; 138062
ಶ್ರೀರಂಗಪಟ್ಟಣ;130141; 86037; 78500
ಪಾಂಡವಪುರ;153294; 112253; 101329
ಒಟ್ಟು; 1419462; 904719;844026

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT