ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ; ತಿಂಗಳ ಅವಕಾಶ

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೈಕಲ್‌ ಜಾಥಾ, ಹೆಸರು ಪರಿಶೀಲನೆಗೆ ಸೂಚನೆ
Last Updated 9 ನವೆಂಬರ್ 2022, 13:10 IST
ಅಕ್ಷರ ಗಾತ್ರ

ಮಂಡ್ಯ: ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಒಂದು ತಿಂಗಳ ಅವಕಾಶ ನೀಡಲಾಗಿದ್ದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಮತದಾರರು ತಪ್ಪದೇ ತಮ್ಮ ಹೆಸರು ಪರಿಶೀಲನೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬುಧವಾರ ಹಮ್ಮಿಕೊಳ್ಳಲಾಗಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮತದಾರರು ಮತದಾರರ ಯಾದಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದಲ್ಲಿ ಮತ್ತೆ ಸೇರ್ಪಡೆ ಮಾಡಿಸಿಕೊಳ್ಳಬಹುದು. ಮೊಬೈಲ್ ಸಂಖ್ಯೆ ಬದಲಾವಣೆ, ವಿಳಾಸ ಬದಲಾವಣೆ, ತಿದ್ದುಪಡಿಗೆ 1 ತಿಂಗಳ ಅವಕಾಶ ನೀಡಲಾಗಿದೆ. ಈ ಕುರಿತು ಬಿಎಲ್‌ಒ ಗಳಿಗೆ ನಿಗದಿತ ಅರ್ಜಿ ಸಲ್ಲಿಸಬೇಕು’ ಎಂದರು.

‘ಮಂಡ್ಯ ಜಿಲ್ಲೆಯಲ್ಲಿ 14,77, 951 ಮತದಾರರಿದ್ದಾರೆ, ಅವರಲ್ಲಿ 7.35,082 ಪುರುಷ, 7,42,869 ಮಹಿಳಾ ಮತದಾರರಿದ್ದಾರೆ. ಜ.1, 2023ಕ್ಕೆ ಅನ್ವಯವಾಗುವಂತೆ ಅರ್ಹ ಮತದಾರರನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ಹೊಸ ಮತದಾರರು ನಿಗದಿತ ಅರ್ಜಿ ನಮೂನೆ ಸಲ್ಲಿಸಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಬೇಕು. ಚುನಾವಣಾ ಆಯೋಗ, ಜಿಲ್ಲಾಡಳಿತ ನೀಡಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್ ಹುಲ್ಮನಿ ಮಾತನಾಡಿ ‘ಪ್ರತಿ‌ ಮತವು ಅಮೂಲ್ಯವಾದುದು. ಯಾವುದೇ ಮತದಾರರು ಮತದಾನದ ಪ್ರಕ್ರಿಯೆಯಿಂದ ಹೊರಗೆ ಉಳಿಯಬಾರದು. ಈ ಉದ್ದೇಶದಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಅವಕಾಶ ನಿಡಲಾಗಿದೆ. ಜೊತೆಗೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

‘ಕಸ ಸಂಗ್ರಹಣೆಯ ಸ್ವಚ್ಛತಾ ವಾಹನಗಳ ಮೂಲಕ ಜಿಲ್ಲೆಯಾದ್ಯಂತ ಗ್ರಾಮ, ನಗರ, ಪಟ್ಟಣ ಪ್ರದೇಶಗಳಲ್ಲಿ ವಾರ್ಡ್‌ಗಳ ಮನೆಮನೆಗೂ ಮತದಾನ ಮಹತ್ವದ ಮಾಹಿತಿಯನ್ನು ತಲುಪಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಅಭಿಯಾನ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ‌ಜಿಲ್ಲಾ ಪೊಲೀಸ್ ‌ವರಿಷ್ಠಾಧಿಕಾರಿ ಎನ್‌.ಯತೀಶ್, ಉಪ ವಿಭಾಗಾಧಿಕಾರಿ ಎಚ್‌.ಎಸ್‌.ಕೀರ್ತನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ತಹಶೀಲ್ದಾರ್ ಕುಞ ಅಹಮದ್ , ತಾ.ಪಂ ಇಒ ವೇಣುಗೋಪಾಲ್ ಇದ್ದರು.

***

17 ವರ್ಷ ತುಂಬಿದವರೂ ಅರ್ಜಿ ಸಲ್ಲಿಸಿ

‘ಚುನಾವಣಾ ಆಯೋಗದ ನಿರ್ದೇಶನದಂತೆ 17 ವರ್ಷ ತುಂಬಿರುವ ಯುವಜನರು ಕೂಡ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು. ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದೆ’ ಎಂದು ಎಚ್‌.ಎನ್‌.ಗೋಪಾಲಕೃಷ್ಣ ತಿಳಿಸಿದರು.

‘ಯುವಕರು 18 ವರ್ಷ ತುಂಬುವವರೆಗೂ ಕಾಯಬೇಕಾಗಿಲ್ಲ. 17 ವರ್ಷ ತುಂಬಿದವರು ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿದರೆ 18 ವರ್ಷ ತುಂಬಿದ ನಂತರ ಮತದಾನ ಮಾಡಲು ಸಹಾಯಕವಾಗುತ್ತದೆ. ವರ್ಷದಲ್ಲಿ 3 ಬಾರಿ ‌ಪರಿಷ್ಕರಣೆ ನಡೆಯುತ್ತದೆ, ಅಂತಹ ಸಂದರ್ಭದಲ್ಲಿ ಅರ್ಜಿಗಳನ್ನು‌ ಪರಿಶೀಲಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT