ಎಲ್ಲೆಡೆ ರಸ್ತೆ ಅಗೆತ: ಚುರುಕುಗೊಂಡ ಕಾಮಗಾರಿ

7
ಚುನಾವಣೆ ನೀತಿಸಂಹಿತೆಯಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪ್ರಗತಿಯಲ್ಲಿ, ರಸ್ತೆ ದುರಸ್ತಿಗೆ ಆದ್ಯತೆ

ಎಲ್ಲೆಡೆ ರಸ್ತೆ ಅಗೆತ: ಚುರುಕುಗೊಂಡ ಕಾಮಗಾರಿ

Published:
Updated:
ಮಂಡ್ಯದ ಕಾರಿಮನೆಗೇಟ್‌ ಬಳಿ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದಿರುವುದು

ಮಂಡ್ಯ: ವಿಧಾನಸಭೆ, ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಈಗ ಚುರುಕು ಪಡೆದುಕೊಂಡಿವೆ. ಏಕಕಾಲದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳು ಆರಂಭಗೊಂಡಿದ್ದು ಜನಪ್ರತಿನಿಧಿಗಳು ಮೂರು ತಿಂಗಳ ನಂತರ ಭೂಮಿಪೂಜೆಯಲ್ಲಿ ತೊಡಗಿದ್ದಾರೆ.

ರಸ್ತೆ, ಚರಂಡಿ, ಸಿ.ಸಿ ರಸ್ತೆ, ನೀರು ಸರಬರಾಜು ಕಾಮಗಾರಿಗಳು ಆರಂಭವಾಗಿರುವ ಕಾರಣ ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆ ಅಗೆಯಲಾಗಿದೆ. ಜೆಸಿಬಿ ಯಂತ್ರಗಳು ಸದ್ದು ಮಾಡುತ್ತಿದ್ದು ಕಾರ್ಮಿಕರಿಗೆ ಕೈತುಂಬಾ ಕೆಲಸ ಸಿಕ್ಕಿದೆ. ವಿವಿಧ ವಾರ್ಡ್‌ಗಳ ನಗರಸಭಾ ಸದಸ್ಯರು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವೆಡೆ ರಸ್ತೆಗಳನ್ನು ಅಗೆದಿರುವ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಜನರಿಗೆ ಓಡಾಡಲು ಕಿರಿಕಿರಿಯಾಗಿದೆ. ಜಲಮಂಡಳಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ವೇಳೆ ಚರಂಡಿ ಪೈಪ್‌ ಒಡೆದು ಕೊಳಚೆ ನೀರು ರಸ್ತೆಯಲ್ಲೇ ಹರಿದಿದೆ. ಕೆಲವೆಡೆ ವಿದ್ಯುತ್‌ ವೈರ್‌ಗಳು ತುಂಡಾಗಿವೆ. ಆದರೆ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಕಾರಣ ಜನರು ಕಿರಿಕಿರಿ ಸಹಿಸಿಕೊಂಡಿದ್ದಾರೆ.

ನಗರೋತ್ಥಾನ ಯೋಜನೆ ಅಡಿಯಲ್ಲಿ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಗಾಂಧಿ ನಗರದ ವಿವಿಧ ರಸ್ತೆಗಳಲ್ಲಿ ಡಾಂಬರೀಕರಣ ನಡೆಯುತ್ತಿದೆ. ಸುಭಾಷ್‌ನಗರದ ಶಿವನಂಜಪ್ಪ ಪಾರ್ಕ್‌ ಸುತ್ತಲೂ ಚರಂಡಿ ಅಭಿವೃದ್ಧಿಗೊಳಿಸುವ ಕಾಮಗಾರಿ ಮೂರು ದಿನಗಳಿಂದಲೂ ಭರದಿಂದ ಸಾಗಿದೆ. ತಾವರೆಗೆರೆಯ 2, 3 ಹಾಗೂ 6ನೇ ಕ್ರಾಸ್‌ನಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ನಡೆಯುತ್ತಿದೆ. ವಿವಿಧ ಬಡಾವಣೆಯಲ್ಲಿ ಉದ್ಯಾನ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡಿವೆ.

‘14ನೇ ಹಣಕಾಸು ಯೋಜನೆಯಡಿ ₹ 3 ಲಕ್ಷ ವೆಚ್ಚದಲ್ಲಿ ಗುತ್ತಲು ಬಡಾವಣೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿ ಸೋಮವಾರ ಆರಂಭಗೊಳ್ಳಲಿದೆ. ಅದೇ ರೀತಿ ರಾಜ್ಯ ಹಣಕಾಸು ನಿಧಿಯಿಂದ ಉಳಿತಾಯವಾಗಿರುವ ₹ 4 ಲಕ್ಷ ಹಣದಿಂದ ಗುತ್ತಲು ಬಡಾವಣೆಯ ಆಂಜನೇಯಸ್ವಾಮಿ ದೇವಾಲಯದ ಬಳಿ ಚರಂಡಿ ಅಭಿವೃದ್ಧಿ ಕಾಮಗಾರಿಯೂ ಆರಂಭಗೊಳ್ಳಲಿದೆ. ಚುನಾವಣೆಯ ಕಾರಣದಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಎಲ್ಲ ಕಾಮಗಾರಿಗಳು ಆರಂಭಗೊಳ್ಳಲಿವೆ’ ಎಂದು ನಗರಸಭೆ ಸದಸ್ಯ ಅನಿಲ್‌ ಹೇಳಿದರು.

ಅಮೃತ್‌ ಕಾಮಗಾರಿ ಚುರುಕು: ಅಮೃತ್ ‌(ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ) ಯೋಜನೆ ಅಡಿ ನಗರದ ವಿವಿಧೆಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಇಡೀ ನಗರವನ್ನು ಸಂಪೂರ್ಣ ಒಳಚರಂಡಿ ವ್ಯವಸ್ಥೆಗೆ ಒಳಪಡಿಸುವ ಕಾಮಗಾರಿ ಭರದಿಂದ ಸಾಗಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾಮಗಾರಿಯ ಜವಾಬ್ದಾರಿ ಹೊತ್ತಿದೆ. ನೂರಡಿ ರಸ್ತೆಯ ಎರಡೂ ಕಡೆ ಇರುವ ಹಳೆಯ ಚರಂಡಿಯನ್ನು ಕಿತ್ತು ಹೊಸದಾಗಿ ಚರಂಡಿ ನಿರ್ಮಿಸಲಾಗಿದೆ. ಮೇಲೆ ಕಲ್ಲು ಚಪ್ಪಡಿ ಹಾಕಿ ಜನರು ಓಡಾಡಲು ಫುಟ್‌ಪಾತ್‌ ನಿರ್ಮಿಸಲಾಗಿದೆ. ₹ 8 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ತಾವರೆಗೆರೆ, ಅಶೋಕ್‌ನಗರ, ಗುತ್ತಲು, ಇಂದಿರಾ ಕಾಲೊನಿ ಮುಂತಾದೆಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದೆ.

ಅಮೃತ್‌ ಯೋಜನೆ ಅಡಿ ಮಂಡ್ಯ ನಗರಕ್ಕೆ 24X7 ಕುಡಿಯುವ ನೀರು ಪೂರೈಸುವ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದ್ದು ಪೈಪ್‌ಲೈನ್‌ ಅಳವಡಿಕೆ ಈಗಾಗಲೇ ತೂಬಿನಕೆರೆವರೆಗೆ ಬಂದಿದೆ. ನಗರದ ಎಲ್ಲ ಬಡಾವಣೆಗಳಿಗೆ ನೀರು ಪೂರೈಸುವ ಈ ಮಹತ್ವಾಕಾಂಕ್ಷಿ ಯೋಜನೆ ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಶ್ರೀರಂಗಪಟ್ಟಣ ಕಾವೇರಿ ನದಿ ತಟದಿಂದ ಕಾಮಗಾರಿ ಆರಂಭಗೊಂಡಿದೆ. ಗಣಂಗೂರು ಬಾರೆ ನೀರು ಶುದ್ಧೀಕರಣ ಕೇಂದ್ರದ ಮೂಲಕ ಹರಿದು ಬರುವ ನೀರನ್ನು ಪಂಪ್‌ಹೌಸ್‌ ಮೂಲಕ ನಗರಕ್ಕೆ ಸರಬರಾಜು ಮಾಡುವ ಯೋಜನೆ ಇದಾಗಿದೆ.

‘ನಗರದ ಹಲವು ಯೋಜನೆಗಳ ಕಾಮಗಾರಿಗಳು ಏಕಕಾಲದಲ್ಲಿ ನಡೆಯುತ್ತಿವೆ. ಹೀಗಾಗಿ ಜನರಿಗೆ ಸ್ವಲ್ಪ ಕಿರಿಕಿರಿಯಾಗಿರಬಹುದು. ಬೀದಿಯಲ್ಲಿ ರಸ್ತೆ ಅಗೆದರೆ ಶೀಘ್ರದಲ್ಲೇ ಕಾಮಗಾರಿ ಮುಗಿಸಿ ಕಾಲುವೆ ಮುಚ್ಚುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಅಭಿವೃದ್ಧಿ ಕೆಲಸ ನಡೆಯುತ್ತಿರುವ ಕಾರಣ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ನಗರಸಭೆ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ಮನವಿ ಮಾಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !