ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಕ್ಟರ್‌ ಚಾಲಕರಿಂದಲೇ ರಸ್ತೆ ದುರಸ್ತಿ; ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ

ಸಕ್ಕರೆ ಕಾರ್ಖಾನೆ, ತಾಲ್ಲೂಕು ಆಡಳಿತ
Last Updated 31 ಆಗಸ್ಟ್ 2020, 8:39 IST
ಅಕ್ಷರ ಗಾತ್ರ

ಕೆ.ಆರ್. ಪೇಟೆ: ತಾಲ್ಲೂಕಿನ ಮಾಕವಳ್ಳಿಯ ಸಮೀಪದ ಕೋರಮಂಡಲ ಸಕ್ಕರೆ ಕಾರ್ಖಾನೆಗೆ ಹೋಗುವ ರಸ್ತೆಯನ್ನು ಟ್ರಾಕ್ಟರ್‌ ಚಾಲಕರು ಸ್ವಂತ ಹಣ ಹಾಕಿ ದುರಸ್ತಿ ಮಾಡಿಕೊಂಡಿದ್ದಾರೆ.

ಹೊಂಡ –ಗುಂಡಿಗಳಿಂದ ತುಂಬಿದ್ದ ರಸ್ತೆಗೆ ಮಣ್ಣು ತುಂಬಿಸುವ ಮೂಲಕ ರಸ್ತೆಗೆ ಹೊಸ ರೂಪ ಕೊಟ್ಟಿದ್ದಾರೆ. ಕಾರ್ಖಾನೆಯ ಆಡಳಿತ ಮಂಡಳಿ, ಜನಪ್ರತಿನಿಧಿಗಳು ಹಾಗೂ ತಾಲ್ಲೂಕು ಆಡಳಿತಕ್ಕೆ ಎಷ್ಟೇ ಬಾರಿ ಮನವಿ ಕೊಟ್ಟರೂ ರಸ್ತೆ ದುರಸ್ತಿಗೆ ಮನಸ್ಸು ಮಾಡಲಿಲ್ಲ. ರಸ್ತೆ ಹದಗೆಟ್ಟ ಕಾರಣ ಟ್ರಾಕ್ಟರ್‌ ಓಡಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ತಾವೇ ರಸ್ತೆ ದುರಸ್ತಿ ಮಾಡುವ ನಿರ್ಧಾರಕ್ಕೆ
ಬಂದರು.

ಈ ರಸ್ತೆಯಲ್ಲಿ ಕಬ್ಬಿನ ಟ್ರಾಕ್ಟರ್‌ ಮಾತ್ರವಲ್ಲದೇ ಎಲ್ಲಾ ರೀತಿಯ ವಾಹನಗಳು ಓಡಾಡುತ್ತವೆ. ಇದರಿಂದ ಈ ಭಾಗದ ರೈತರಿಗೂ ಅನುಕೂಲವಾಗಿದೆ. ಚಾಲಕರು ಮಾಡಿದ ಸೇವೆಗೆ ಅಕ್ಕಪಕ್ಕದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಲಕರ ಮನವಿಗೆ ಸ್ಪಂದಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋರಮಂಡಲ ಸಕ್ಕರೆ ಕಾರ್ಖಾನೆಯಿಂದ ಪಟ್ಟಣಕ್ಕೆ ಹೋಗುವ ಈ ಮುಖ್ಯರಸ್ತೆಯಲ್ಲಿ ಸಾವಿರಾರು ಸಂಖ್ಯೆಯ ಗುಂಡಿಗಳು ಇದ್ದವು. ಇದರಿಂದ ಪ್ರತಿನಿತ್ಯ ಅಪಘಾತವಾಗುತ್ತಿತ್ತು. ಆ ರಸ್ತೆಯಲ್ಲಿ ವಾಹನಗಳು ಒಮ್ಮೆ ಹೋಗಿಬಂದರೆ ರಿಪೇರಿಗೆ ಬರುತ್ತಿದ್ದವು. ‘ರಸ್ತೆ ಕಾಮಗಾರಿಗೆ ₹25 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗಿದೆ. 10 ಕಿಲೋ ಮೀಟರ್‌ವರೆವಿಗಿನ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದೇವೆ’ ಎಂದು ಚಾಲಕರ ಸಂಘದ ಅಧ್ಯಕ್ಷ ರವಿ ಹೇಳುತ್ತಾರೆ.

‘ರೈತರ ಜೀವನಾಡಿ ಎಂದು ಬೊಗಳೆ ಬಿಡುವ ಕೋರಮಂಡಲ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ರೈತರು ಬೆವರು ಸುರಿಸಿ ಬೆಳೆದ ಕಬ್ಬಿನ ಫಸಲನ್ನು ಪಡೆದು ತಾವು ಅಭಿವೃದ್ಧಿಯಾಗುತ್ತಿದ್ದಾರೆ. ಸಮಾಜಮುಖಿ ಕೆಲಸ ಮಾಡುತ್ತಿಲ್ಲ. ಇವರಿಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ’ ಎಂದುಶಿವರಾಜು, ಪ್ರಭಾಕರ್ ಪ್ರಶ್ನಿಸಿದರು.

‘ಈ ಕ್ಷೇತ್ರವನ್ನು ಪೌರಾಡಳಿತ ಸಚಿವರಾದ ನಾರಾಯಣಗೌಡ ಪ್ರತಿನಿಧಿಸುತ್ತಾರೆ, ಅವರು ಈ ಕಡೆ ಗಮನಹರಿಸುತ್ತಿಲ್ಲ. ಪ್ರತಿನಿತ್ಯ ಗುಂಡಿಗಳ ನಡುವೆಯೇ ಕಬ್ಬು ಹೊಡೆಯಲು ಹರಸಾಹಸ ಪಡಬೇಕಾಗುತ್ತಿತ್ತು’ ಎಂದು ಚಾಲಕರು ಬೇಸರವ್ಯಕ್ತಪಡಿಸಿದರು.

ಕಾಮಗಾರಿ ಮಾಡುವಾಗ ವಾಹನದಲ್ಲಿ ಬಂದ ಕಬ್ಬು ವಿಭಾಗದ ಅಧಿಕಾರಿ ಬಾಬುರಾಜ್ ಅವರನ್ನು ಚಾಲಕರು ಪ್ರಶ್ನಿಸಿದರು. ಇದಕ್ಕೆ ಹಾರಿಕೆ ಉತ್ತರ ಕೊಟ್ಟು ಅವರು ಸ್ಥಳದಿಂದ ಕಾಲ್ಕಿತ್ತರು. ಚಾಲಕರು ಹಾಗೂ ಬಾಬುರಾಜ್‌ ನಡುವಿನ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೊತೆಗೆ ಚಾಲಕರ ಸೇವೆಗೆ ಮೆಚ್ಚುಗೆಯ ಮಹಾಪೂರವೇ ಹರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT