ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳನ್ನು ಒನ್‌ವೇ ಮಾಡಿದ ಪೊಲೀಸರು

ಅನಗತ್ಯ ಸಂಚಾರ ತಡೆಯುವ ನಿಟ್ಟಿನಲ್ಲಿ ಮಂಡ್ಯ ನಗರದ ಅಲ್ಲಲ್ಲಿ ಕ್ರಮ; ಬಿಗಿಗೊಳಿಸಿದ ತಪಾಸಣೆ
Last Updated 1 ಮೇ 2021, 7:58 IST
ಅಕ್ಷರ ಗಾತ್ರ

ಮಂಡ್ಯ: ಸರ್ಕಾರ ನಿಯಮದನ್ವಯ ಲಾಕ್‌ಡೌನ್ ಜಾರಿಯಾಗಿದ್ದರೂ ನಗರದಲ್ಲಿ ಸಾರ್ವಜನಿಕರ ಅನಗತ್ಯ ಸಂಚಾರ ಸಾಮಾನ್ಯವಾಗಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಶುಕ್ರವಾರ ನಗರದ ಹಲವಾರು ಪ್ರಮುಖ ರಸ್ತೆಗಳ ಒಂದು ಬದಿಯನ್ನು ಬಂದ್‌ ಮಾಡುವ ಮೂಲಕ ಏಕಮುಖ ಸಂಚಾರ ಜಾರಿಗೊಳಿಸಿದರು.

ನಗರದ ಆರ್‌ಪಿ, ವಿವಿ ರಸ್ತೆಗೆ ಪ್ರವೇಶಿಸುವ ಜಾಗದಲ್ಲಿ ಬ್ಯಾರಿಕೇಡ್‌ ಮೂಲಕ ಸಂಪೂರ್ಣ ಬಂದ್‌ ಮಾಡಲಾಗಿದ್ದು, ಸಂಚಾರವನ್ನು ನಿಷೇಧಿಸಲಾಗಿದೆ.

ಅಲ್ಲದೆ ನೂರಡಿ ರಸ್ತೆ, ಗುತ್ತಲು ರಸ್ತೆಯ ಒಂದು ಬದಿಯನ್ನು ಬ್ಯಾರಿಕೇಡ್‌ ಹಾಕುವ ಮೂಲಕ ಬಂದ್‌ ಮಾಡಲಾಗಿದ್ದು, ಮತ್ತೊಂದು ಬದಿಯಲ್ಲಿ ಬಂದವರನ್ನು ತಪಾಸಣೆ ಮಾಡಿ ದಂಡ ವಿಧಿಸಲಾಯಿತು. ಸರ್ಕಾರಿ ಸಿಬ್ಬಂದಿ, ಆಸ್ಪತ್ರೆಗೆ ತೆರಳುವವರನ್ನು ಪರಿಶೀಲಿಸಿ ಬಿಡಲಾಗುತ್ತಿತ್ತು. ಇದರಿಂದ ಅನಗತ್ಯ ಸಂಚಾರ ಮಾಡುತ್ತಿದ್ದವರಿಗೆ ದಂಡಾಸ್ತ್ರ ಪ್ರಯೋಗಿಸಿ ಬಿಸಿ ಮುಟ್ಟಿಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಯ ಮಹಾವೀರ ವೃತ್ತದಲ್ಲಿ ಜಮಾಯಿಸಿದ 20ಕ್ಕೂ ಹೆಚ್ಚು ಪೊಲೀಸರು ಚಲಿಸುತ್ತಿದ್ದ ಕಾರು, ಬೈಕ್ ಸೇರಿದಂತೆ ಇತರೆ ವಾಹನಗಳ ತಪಾಸಣೆ ನಡೆಸಿದರು. ಹೆಲ್ಮೆಟ್, ವಾಹನಗಳ ದಾಖಲೆ ಪರಿಶೀಲನೆ, ಎಲ್ಲಿಗೆ ಹೋಗುತ್ತಿದ್ದಾರೆ, ಯಾತಕ್ಕಾಗಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ದಂಡ ವಿಧಿಸಿದರು.

ಉಳಿದಂತೆ ನಗರದಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ನಗರದ ಹೊಸಹಳ್ಳಿ ವೃತ್ತ, ನೂರಡಿ ರಸ್ತೆಯಲ್ಲಿನ ದಿನಸಿ ಅಂಗಡಿಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ವ್ಯಕ್ತಿಗತ ಅಂತರ ಇಲ್ಲದೆ ಸಾಮಗ್ರಿ ಖರೀದಿಯಲ್ಲಿ ನಿರತರಾಗಿದ್ದರು. ಬೆಳಿಗ್ಗೆ ಅಂಗಡಿಗಳಿಗೆ ಭೇಟಿ ನೀಡಿದ ಪೊಲೀಸರು ಮಾಸ್ಕ್‌ ಧರಿಸದೆ, ಅಂತರ ಕಾಯ್ದುಕೊಳ್ಳದವರಿಗೆ, ಅಂಗಡಿ ಮಾಲೀಕರಿಗೆ ಪೊಲೀಸರು ದಂಡ ಹಾಕಿದರು.

ನಗರದಾದ್ಯಂತ ದ್ರಾವಣ ಸಿಂಪಡಣೆ: ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ನಗರದ ವಿವಿಧೆಡೆ
ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು. ನಗರದ ವಿವಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ, ಪೇಟೆಬೀದಿ, ಹೊಸಹಳ್ಳಿ ವೃತ್ತ
ಸೇರಿದಂತೆ ವಿವಿಧೆಡೆ ದ್ರಾವಣ ಸಿಂಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT