ಭಾನುವಾರ, ಸೆಪ್ಟೆಂಬರ್ 22, 2019
25 °C
ಅಧಿಕಾರಿಗಳಿಗೆ ಹಂತಹಂತವಾಗಿ ಕೊಡಬೇಕು ಲಂಚ, ಟೇಬಲ್‌ ಕೆಳಗೆ ಹಣ ಪಡೆಯುವ ಸಿಬ್ಬಂದಿ

ಆರ್‌ಟಿಒ: 200ಕ್ಕೂ ಹೆಚ್ಚು ಮಧ್ಯವರ್ತಿಗಳ ಕಾಟ

Published:
Updated:
Prajavani

ಮಂಡ್ಯ: ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಯಲ್ಲಿ ಯಾವ ಸೇವೆಗಳೂ ನೇರವಾಗಿ ದೊರೆಯುತ್ತಿಲ್ಲ. ಕಚೇರಿ ಆವರಣದಲ್ಲಿ 200ಕ್ಕೂ ಹೆಚ್ಚು ಮಧ್ಯವರ್ತಿಗಳು ಗ್ರಾಹಕರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಜನರು ಅವರಿಗೆ ಹಣ ಸುರಿದು ಹೈರಾಣಾಗುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ನೂರು ಮೀಟರ್‌ ದೂರದಲ್ಲಿರುವ ಆರ್‌ಟಿಒ ಕಚೇರಿ ಆವರಣ ಪ್ರವೇಶಿಸುತ್ತಿದ್ದಂತೆ ಮಧ್ಯವರ್ತಿಗಳು ನೊಣಗಳಂತೆ ಮುತ್ತಿಕೊಳ್ಳುತ್ತಾರೆ. ಕಚೇರಿಯೊಳಗೆ ಪ್ರವೇಶಿಸಲೂ ಬಿಡದ ಏಜೆಂಟರು, ಅಲ್ಲಿರುವ ಮರಗಳ ಕೆಳಗೆ ಎಲ್ಲವನ್ನೂ ಮುಗಿಸುತ್ತಾರೆ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಸುಳ್ಳು ಹೇಳಿ ಅವರ ಹಾದಿ ತಪ್ಪಿಸುತ್ತಾರೆ. ‘ಒಳಗೆ ತೆರಳಿದರೆ ಕಚೇರಿಯಿಂದ ಕಚೇರಿಗೆ ಸುತ್ತಬೇಕು. ಇಲ್ಲಿ ನಾವೇ ಎಲ್ಲವನ್ನೂ ಮಾಡಿಕೊಡುತ್ತೇವೆ’ ಎಂದು ಹೇಳಿ ಜನರ ದಾರಿ ತಪ್ಪಿಸುತ್ತಾರೆ.

ಕೆಲ ಮಧ್ಯವರ್ತಿಗಳು, ತಾವೇ ಆರ್‌ಟಿಒ ಕಚೇರಿ ಸಿಬ್ಬಂದಿ ಎಂದು ಸುಳ್ಳು ಹೇಳಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಜನರು ಏಕಾಂಗಿಯಾಗಿ ಆರ್‌ಟಿಒ ಕಚೇರಿಗೆ ತೆರಳಿ ಸೇವೆ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಒಬ್ಬ ಮುಖ್ಯ ಮಧ್ಯವರ್ತಿ ಏಳೆಂಟು ಜನ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದು, ಅವರು ಕಚೇರಿಗೆ ಬಂದ ಜನರನ್ನು ಸೆಳೆಯುತ್ತಾರೆ. ಮುಖ್ಯಸ್ಥ ಸಮೀಪದಲ್ಲೇ ಇರುವ ಕಚೇರಿಯಲ್ಲಿ ಫೈಲ್‌ಗಳೊಂದಿಗೆ ಮುಳುಗಿರುತ್ತಾರೆ.

ಕಚೇರಿ ಆವರಣದಲ್ಲಿ ನಡೆ ಯುತ್ತಿರುವ ಅಕ್ರಮ ಎಲ್ಲಾ ಹಂತದ ಸಿಬ್ಬಂದಿಗೆ ಗೊತ್ತಿದೆ. ಆದರೆ, ಪುಡಿ ಗಾಸಿನ ಆಸೆಗೆ ಬಿದ್ದಿರುವ ಸಿಬ್ಬಂದಿ ಪರೋಕ್ಷವಾಗಿ ಮಧ್ಯವರ್ತಿಗಳ ಹಾವಳಿಗೆ ಕುಮ್ಮಕ್ಕು ನೀಡಿದ್ದಾರೆ. ಅವರ ನೇತೃತ್ವದಲ್ಲೇ ಅಕ್ರಮ ನಡೆಯುತ್ತಿ ರುವುದು ಗುಟ್ಟಾಗಿ ಉಳಿದಿಲ್ಲ. ಕಚೇರಿ ಆವರಣದಲ್ಲಿ ಜನರಿಗಿಂತಲೂ ಏಜೆಂಟರೇ ಇರುತ್ತಾರೆ.

ನೆಪಕ್ಕೆ ಆನ್‌ಲೈನ್‌ ಪ್ರಕ್ರಿಯೆ: ಕಳೆದ ವರ್ಷ ಮೋಟರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಆರ್‌ಟಿಒ ಕಚೇರಿಯ 25ಕ್ಕೂ ಹೆಚ್ಚು ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಯಿತು. ಅದಕ್ಕಾಗಿ ‘ಸಾರಥಿ’ ವೆಬ್‌ತಾಣ ರೂಪಿಸಲಾಯಿತು. ಪ್ರತಿ ಸೇವೆಗೂ ‘ಸಕಾಲ’ ನಿಗದಿ ಮಾಡಲಾಗಿದ್ದರೂ ಆರ್‌ಟಿಒ ಕಚೇರಿ ಆವರಣದಲ್ಲಿರುವ ಮಧ್ಯವರ್ತಿಗಳನ್ನು ನೇರವಾಗಿ ಸೇವೆ ಪಡೆಯಲು ಬಿಡುತ್ತಿಲ್ಲ.

‘ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳ ಪ್ರಿಂಟ್‌ಔಟ್‌ಗಳನ್ನು ಮಧ್ಯವರ್ತಿಗಳೇ ಪಡೆಯುತ್ತಿದ್ದಾರೆ. ಜನರಿಂದ ನಿಗದಿಗಿಂತ ನಾಲ್ಕುಪಟ್ಟು ಹೆಚ್ಚಿನ ಹಣ ಪಡೆದು ವಂಚನೆ ಮಾಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಇನ್ನೊಂದು ಹಂತ ಪೂರೈಸಿದರೆ ಅನಾಯಾಸವಾಗಿ ಸೇವೆ ದೊರೆಯುತ್ತದೆ. ಆರ್‌ಟಿಒ ಸಿಬ್ಬಂದಿ ಈ ಬಗ್ಗೆ ಅರಿವು ಮೂಡಿಸುವಲ್ಲಿ ವಿಫಲ ರಾಗಿದ್ದಾರೆ. ಆ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ವಕೀಲ ಜೆ.ರಾಮಯ್ಯ ಆರೋಪಿಸಿದರು.

ಶೋಷಣೆ: ಹೊಸದಾಗಿ ಎಲ್‌ಎಲ್‌, ಡಿಎಲ್‌ ಮಾಡಿಸಿಕೊಳ್ಳುವವರು ಹೆಚ್ಚಾಗಿ ಮಧ್ಯವರ್ತಿಗಳ ಶೋಷಣೆಗೆ ಒಳಗಾಗುತ್ತಾರೆ. ಆದರೆ, ಆಟೊ, ನಾಲ್ಕು ಚಕ್ರ, ಇತರ ಭಾರಿ ವಾಹನಗಳ ಮಾಲೀಕರು ಹಾಗೂ ಚಾಲಕರು ಆರ್‌ಟಿಒ ಕಚೇರಿಯೊಳಗಿನ ಅಧಿಕಾರಿಗಳ ಶೋಷಣೆಗೆ ಒಳಗಾಗುತ್ತಿ ದ್ದಾರೆ. ವಾಹನ ನೋಂದಣಿ, ತೆರಿಗೆ ಪಾವತಿ, ಅನುಮತಿ ಮುಂದುವರಿಕೆ ಮುಂತಾದ ಸೇವೆಗೆ ಬರುವ ಚಾಲಕರು ಅಧಿಕಾರಿಗಳ ನಡೆಯಿಂದ ಹೈರಾಣಾಗಿದ್ದಾರೆ.

‘ಆರ್‌ಟಿಒ ಕಚೇರಿ ಅಧಿಕಾರಿಗಳು ಆಟೊ ಚಾಲಕರನ್ನು ಸುಲಿಗೆ ಮಾಡುತ್ತಿ ದ್ದಾರೆ. ಸಣ್ಣಪುಟ್ಟ ಸೇವೆ ನೀಡಲೂ ತಿಂಗಳಗಟ್ಟಲೆ ಸವೆಸುತ್ತಾರೆ. ವಾಹನ ಹಾಗೂ ಅರ್ಜಿಯಲ್ಲಿ ತಪ್ಪಿದ್ದರೆ ಅದನ್ನು ಸರಿಪಡಿಸಲಿ. ಆದರೆ, ಹಣ ಕೊಟ್ಟರೆ ಎಲ್ಲಾ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ. ಹಣ ಕೊಡುವುದನ್ನೇ ಕಾಯುತ್ತಾರೆ. ಇದರ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಭ್ರಷ್ಟಾಚಾರ ನಿಂತಿಲ್ಲ’ ಎಂದು ಆಟೊ ಚಾಲಕ ಸಿ.ಬಾಲರಾಜು ದೂರಿದರು.

ಮಧ್ಯವರ್ತಿ, ಅಧಿಕಾರಿಗಳಿಗೆ ಲಂಚ

ಕಚೇರಿ ಹೊರಗೆ ಮಧ್ಯವರ್ತಿಗಳು ಹಣ ಕೀಳುವುದು ಒಂದೆಡೆಯಾದರೆ, ಕಚೇರಿಯ ಒಳಗಿನ ಸಿಬ್ಬಂದಿಯೂ ಹಣ ಕೀಳುತ್ತಾರೆ. ಲಂಚ ₹10ರಿಂದ ಆರಂಭವಾಗುತ್ತದೆ. ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್‌ ಪಡೆಯುವ ಕೌಂಟರ್‌ ಸಿಬ್ಬಂದಿಗೆ ಕಡ್ಡಾಯವಾಗಿ ₹10 ಕೊಡಬೇಕು.

ಎಲ್‌ಎಲ್‌, ಡಿಎಲ್‌ ಪಡೆಯಲು ಆನ್‌ಲೈನ್‌ ಪರೀಕ್ಷೆ ಎದುರಿಸಬೇಕು. ಅದಕ್ಕೆ ಅಗತ್ಯ ಶುಲ್ಕ ಪಾವತಿಸಿದ ನಂತರ ಅರ್ಜಿದಾರನ ಭಾವಚಿತ್ರ ತೆಗೆಯ ಲಾಗುತ್ತದೆ. ಭಾವಚಿತ್ರ ತೆಗೆಯುವ ಮಹಿಳೆಗೂ ₹10 ಕೊಡುವುದು ಕಡ್ಡಾಯ.

ಅರ್ಜಿಯನ್ನು ನೋಂದಣಿ ಪುಸ್ತಕಕ್ಕೆ ನಮೂದು ಮಾಡುವ ವ್ಯಕ್ತಿಗೆ ₹50 ಲಂಚ ಕೊಡಬೇಕಾಗಿದೆ. ಮುಂದಿನ ಹಂತದಲ್ಲಿ ಅರ್ಜಿಯನ್ನು ಪರಿಶೀಲಿಸಿ, ಪರೀಕ್ಷೆಗೆ ಕ್ರಮ ಸಂಖ್ಯೆ ನೀಡುವ ಇನ್‌ಸ್ಪೆಕ್ಟರ್‌ ಹಂತದ ಅಧಿಕಾರಿಗೆ ₹200 ಲಂಚ ಕೊಡಬೇಕಾಗಿದೆ. ಹಣ ನೀಡಲು ನಿರಾಕರಿಸಿದರೆ, ಅರ್ಜಿಯಲ್ಲಿ ತಪ್ಪಿದೆ, ದಾಖಲಾತಿಯಲ್ಲಿ ತಪ್ಪುಗಳಿವೆ, ಆಧಾರ್‌ ಅಥವಾ ಇತರ ದಾಖಲಾತಿಗಳಲ್ಲಿ ತಪ್ಪಿದ್ದರೆ ಅದನ್ನೇ ನೆಪ ಮಾಡಿಕೊಂಡು ಅರ್ಜಿ ನಿರಾಕರಿಸುತ್ತಾರೆ. ₹200 ಕೊಟ್ಟರೆ ಎಲ್ಲಾ ತಪ್ಪುಗಳು ಕ್ಷಣಮಾತ್ರದಲ್ಲಿ ಸರಿಯಾಗುತ್ತವೆ!

ಮುಂದಿನ ಪರೀಕ್ಷಾ ಹಂತದಲ್ಲಿ ಆನ್‌ಲೈನ್‌ ಪರೀಕ್ಷೆ ನೀಡುವ ಅಧಿಕಾರಿಗೆ ₹100 ಕೊಡಬೇಕು. ಹಣ ಕೊಟ್ಟರೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದರೂ ಉತ್ತೀರ್ಣಗೊಳಿಸಿ ಮುಂದಕ್ಕೆ ಕಳುಹಿಸುತ್ತಾರೆ. ನಂತರ, ವಾಹನ ಚಾಲನಾ ಪರೀಕ್ಷೆ ಪಡೆಯುವ ಅಧಿಕಾರಿಗೂ ₹50 ಕೊಡಬೇಕಾಗಿದೆ.

ಡಕೋಟ ಬಸ್‌ಗಳಿಗೆ ಕಡಿವಾಣ ಇಲ್ಲ

ಆರ್‌ಟಿಒ ಅಧಿಕಾರಿಗಳ ನಿರಾಸಕ್ತಿಯಿಂದ ನಗರದಿಂದ ಜಿಲ್ಲೆಯಾದ್ಯಂತ ಸಂಚರಿಸುವ ಹಳೆಯ ಡಕೋಟ ಎಕ್ಸ್‌ಪ್ರೆಸ್‌ಗಳಿಗೆ ಕಡಿವಾಣ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ 465 ಅನುಮತಿ ಪಡೆದ ಬಸ್‌ಗಳಿವೆ. ಆದರೆ, ನಿಯಮ ಪಾಲಿಸದೆ, ರಸ್ತೆ ತೆರಿಗೆ ಕಟ್ಟದೆ, ವಿಮೆ ಪಾವತಿಸದೆ ಓಡುತ್ತಿರುವ 100ಕ್ಕೂ ಹೆಚ್ಚು ಬಸ್‌ ಗಳು ನಗರದಲ್ಲಿವೆ. ಇಂತಹ ಬಸ್‌ಗಳಿಂದ ಅಪಘಾತಗಳು ನಡೆಯುತ್ತಲೇ ಇವೆ.

ಕಳೆದ ವರ್ಷ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿ ಖಾಸಗಿ ಬಸ್‌ ನಾಲೆಗೆ ಉರುಳಿ 30 ಮುಗ್ಧ ಜೀವಗಳು ಬಲಿಯಾದವು. ಇಷ್ಟಾದರೂ ಹಳೆಯ ಖಾಸಗಿ ಬಸ್‌ಗಳಿಗೆ ಕಡಿವಾಣ ಇಲ್ಲದಂತಾಗಿದೆ.

‘ಮಂಗಳೂರು ಕಡೆಯಿಂದ ನೂರಾರು ಹಳೆಯ ಬಸ್‌ಗಳು ಮಂಡ್ಯ ಜಿಲ್ಲೆಯಾದ್ಯಂತ ಓಡಾಡುತ್ತಿವೆ. ಇವುಗಳಿಗೆ ಯಾವುದೇ ಅನುಮತಿ ಇಲ್ಲ. ಈ ವಿಚಾರ ಆರ್‌ಟಿಒ ಸಿಬ್ಬಂದಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬಸ್‌ ಚಾಲಕರೊಬ್ಬರು ದೂರಿದರು.

ಒಂದೇ ನಂಬರ್‌, ಎರಡು ಬಸ್‌!

ಈಚೆಗೆ ಮಳವಳ್ಳಿಯಲ್ಲಿ ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡು ಬಸ್‌ ಓಡಾಡುವುದು ಪತ್ತೆಯಾಗಿತ್ತು. ಆರ್‌ಟಿಒ ಸಿಬ್ಬಂದಿಯೇ ಇದನ್ನು ಪತ್ತೆ ಮಾಡಿ ಪ್ರಕರಣ ದಾಖಲು ಮಾಡಿದ್ದರು. ಮಳವಳ್ಳಿಯಲ್ಲಿ ಮಾತ್ರವಲ್ಲದೇ ಜಿಲ್ಲೆಯ ವಿವಿಧೆಡೆ ಇಂತಹ ಬಸ್‌ಗಳು ಓಡಾಡುತ್ತಿವೆ. ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಬಸ್‌ಗಳ ಮಾಲೀಕರಾಗಿದ್ದು, ತಮ್ಮ ಪ್ರಭಾವ ಬಳಿಸಿ ಯಾವುದೇ ಕ್ರಮವಿಲ್ಲದೇ ರಾಜಾರೋಷವಾಗಿ ಓಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಟನೆಗೂ ಮಣಿಯದ ಅಧಿಕಾರಿಗಳು

ಆಮ್‌ ಆದ್ಮಿ ಪಕ್ಷದ ನೇತೃತ್ವದಲ್ಲಿ ಕಳೆದ ವರ್ಷ ಪ್ರತಿಭಟನೆ ನಡೆಸ ಲಾಗಿತ್ತು. ಬೃಹತ್‌ ಹೋರಾಟ ನಡೆಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸು ವಂತೆ ಮನವಿ ಸಲ್ಲಿಸಲಾಗಿತ್ತು. ಇದಾಗಿ ವರ್ಷ ಕಳೆದರೂ ಪರಿಸ್ಥಿತಿ ಇನ್ನೂ ಬದಲಾಗಿಲ್ಲ.

‘ಆರ್‌ಟಿಒ ಕಚೇರಿ ಆವರಣದಲ್ಲಿ ಮಧ್ಯವರ್ತಿಗಳು ಯಾರು, ಅಧಿಕಾರಿಗಳು ಯಾರು ಎಂಬ ವ್ಯತ್ಯಾಸವೇ ತಿಳಿಯುವುದಿಲ್ಲ. ಕಚೇರಿ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುವಾಗ ಗುರುತಿನ ಚೀಟಿ ಧರಿಸಬೇಕೆಂದು ನಾವು ಒತ್ತಾಯ ಮಾಡಿದ್ದೆವು. 100 ಮೀಟರ್‌ ಅಂತರದಲ್ಲೇ ಇರುವ ಜಿಲ್ಲಾಧಿಕಾರಿ ಇತ್ತ ಗಮನಿಸಿ, ಮಧ್ಯಪ್ರವೇಶ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕಾರ್ಮಿಕ ಮುಖಂಡ ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದರು.

 

ಲಂಚ ಕೊಡಗಿದ್ದರೆ ಆಗದು ಕೆಲಸ

ಲಂಚ ಕೊಡದಿದ್ದರೆ ಕೆಲಸವೇ ಆಗುವುದಿಲ್ಲ. ಡಿಎಲ್‌ ಮುಂದುವರಿಸಲು ಕೊಟ್ಟರೆ 2 ತಿಂಗಳಾದರೂ ಕೈಗೇ ಸಿಗುವುದಿಲ್ಲ. ಇನ್ನು ಎಫ್‌ಸಿ ವರ್ಷವಾದರೂ ಸಿಗುವುದಿಲ್ಲ. ಮಧ್ಯವರ್ತಿಗಳ ಬಳಿಯೇ ಇರುತ್ತೆ. ಅದನ್ನೇ ಮುಂದಿನ ವರ್ಷ ರಿನಿವಲ್‌ ಮಾಡಿಸುತ್ತಾರೆ.

–ಆರ್‌.ಮಲ್ಲೇಶ್‌ ರಾವ್‌

 

ಏಜೆಂಟ್‌ಮುಕ್ತ ಆರ್‌ಟಿಒ ಆಗಲಿ

ಏಜೆಂಟ್‌ಮುಕ್ತ ಆರ್‌ಟಿಒ ಆದರೆ ಜನರಿಗೆ ತುಂಬಾ ಉಪಕಾರಿಯಾಗುತ್ತದೆ. ಅವರನ್ನು ಮೊದಲು ಕಚೇರಿಗೆ ಕಾಲಿಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

–ನಾಗೇಂದ್ರ

ಪವಾಡ ನಡೆಯಬೇಕಷ್ಟೆ‌

ಸರ್ಕಾರಿ ಶುಲ್ಕಕ್ಕಿಂತ ಐದಾರು ಪಟ್ಟು ಹೆಚ್ಚಿಗೆ ದುಡ್ಡು ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ. ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳಿಲ್ಲದಿರುವುದು ಕನಸಿನ ಮಾತು. ಏನಾದರೂ ಪವಾಡ ನಡೆಯಬೇಕಷ್ಟೇ.

–ದೇವರಾಜು

Post Comments (+)