ಸೋಮವಾರ, ಮೇ 23, 2022
30 °C

ಶ್ರೀರಂಗಪಟ್ಟಣ: ನಿಯಮ ಉಲ್ಲಂಘಿಸಿ ದೇಗುಲದಲ್ಲಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಲಾಕ್‌ಡೌನ್‌ನಿಂದಾಗಿ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿದ್ದರೂ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯದಲ್ಲಿ ಅಮಾವಾಸ್ಯೆ ನಿಮಿತ್ತ ನೂರಾರು ಭಕ್ತರು ಗುರುವಾರ ಪೂಜೆ ಸಲ್ಲಿಸಿದರು.

ಬೆಳಿಗ್ಗೆ 6 ಗಂಟೆಯಿಂದ ಪೂಜಾ ವಿಧಿ ವಿಧಾನಗಳು ನಡೆದವು. ಮೊಟ್ಟೆ ಒಡೆಯುವುದು, ತಡೆ ಒಡೆಯುವುದು, ಕಟ್ಟೆ ಒಡೆಯುವ ಆಚರಣೆ ವಾಡಿಕೆಯಂತೆ ನಡೆದವು. ಗರ್ಭ ಗುಡಿಯ ಬಾಗಿಲು ತೆರೆದು ಪೂಜೆ ನಡೆಸಿದ್ದಲ್ಲದೆ ಭಕ್ತರು ಗುಂಪಾಗಿ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ಪೊಲೀಸರ ಎದುರೇ ಜನರು ಗುಂಪಾಗಿ ಸೇರಿ ದೇವಿಗೆ ಪೂಜೆ ಸಲ್ಲಿಸಿದರು. ದೇಗುಲದ ಆಸುಪಾಸಿನಲ್ಲಿ ಕೆಲವರು ಕೋಳಿ ಬಲಿಯನ್ನೂ ನೀಡಿ ಹರಕೆ ತೀರಿಸಿದರು.

ಬೆಳಿಗ್ಗೆ 11 ಗಂಟೆಯ ಬಳಿಕ ಮುಖ್ಯ ದ್ವಾರ ಮತ್ತು ಹಿಂಬದಿಯ ಪ್ರವೇಶ ದ್ವಾರ ಬಂದ್‌ ಮಾಡಲಾಯಿತು. ನಂತರ ಭಕ್ತರು ಕಬ್ಬಿನ ಗದ್ದೆಯ ಕಡೆಯಿಂದ ನುಸುಳಿಕೊಂಡು ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಲು ಮುಂದಾದರು. ಮತ್ತೆ ಕೆಲವರು ಕಡತನಾಳು– ಕ್ಯಾತನಹಳ್ಳಿ ಸಂಪರ್ಕ ರಸ್ತೆಯಲ್ಲಿ, ದೇವಾಲಯದ ಮುಖ್ಯ ದ್ವಾರದ ಬಳಿಯೇ ಪೂಜೆ ಸಲ್ಲಿಸಿದರು.

ದೇವಾಲಯಕ್ಕೆ ಹೆಚ್ಚಿನ ಭಕ್ತರು ಬರುತ್ತಿರುವ ವಿಷಯ ತಿಳಿದು ದರಸಗುಪ್ಪೆ ಗ್ರಾ.ಪಂ.ಅಧ್ಯಕ್ಷ ಕೆ.ಸಿ.ಮಾದೇಶ್‌, ಕಡತನಾಳು ಜಯಶಂಕರ್‌ ದೇವಾ ಲಯಕ್ಕೆ ತೆರಳಿ ಪೂಜೆ ನಿಲ್ಲಿಸುವಂತೆ ಅರ್ಚಕರಿಗೆ ಹೇಳಿದರು. ದೇವಾಲಯಕ್ಕೆ ಬರುತ್ತಿದ್ದ ಭಕ್ತರನ್ನು ತಡೆದು ವಾಪಸ್‌ ಹೋಗುವಂತೆ ಸೂಚಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್‌ ಎಂ.ವಿ.ರೂಪಾ, ‘ಆರತಿಉಕ್ಕಡದ ಅಹಲ್ಯಾದೇವಿ ದೇವಾಲಯಕ್ಕೆ ಜನರು ಅಮಾಸ್ಯೆ ಪೂಜೆ ಸಲ್ಲಿಸಲು ಬರದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಮುಂಜಾನೆಯೇ ಸೂಚಿಸಲಾಗಿತ್ತು. ಒಳ ದಾರಿಗಳಿಂದ ನುಸುಳಿ ಬಂದು ಪೂಜೆ ಸಲ್ಲಿಸಿರುವ ಬಗ್ಗೆ ಮಾಹಿತಿ ಇಲ್ಲ. ವಿಚಾರಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು