ಬುಧವಾರ, ಫೆಬ್ರವರಿ 19, 2020
28 °C

ಕನ್ನಡ ಸಮಸ್ಯೆಗಿಲ್ಲ ಪರಿಹಾರ: ನರಹಳ್ಳಿ ಬಾಲಸುಬ್ರಹ್ಮಣ್ಯ ಬೇಸರ

ಪ್ರಜಾವಾಣಿ ವಾ‌ರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ (ಮೇಲುಕೋಟೆ, ಪು.ತಿ.ನ ವೇದಿಕೆ): ಆಧುನಿಕ ಸಂದರ್ಭ ದಲ್ಲಿ ಕನ್ನಡಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸುವ ಅಗತ್ಯವಿದೆ. ರಾಜಕಾರಣಿಗಳಿಗೆ ಇಚ್ಛಾಶಕ್ತಿ ಕೊರತೆ ಇರುವುದರಿಂದ ಬಹುಪಾಲು ಕನ್ನಡದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಸಮ್ಮೇನಾಧ್ಯಕ್ಷರೊಂದಿಗೆ ಸಂವಾದ’ ದಲ್ಲಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

‘ನಮ್ಮಿಂದ ಆಯ್ಕೆಯಾದ ಜನಪ್ರತಿ ನಿಧಿಗಳಿಗೆ ಯಾವುದೇ ಸಮಸ್ಯೆಯ ಅರಿವಿರುವುದಿಲ್ಲ. ರಾಜಕಾರಣದಲ್ಲಿ ಮುಳುಗಿ ಹೋಗಿದ್ದಾರೆ. ಕನಿಷ್ಠ ಇಂತಹ ಸಮ್ಮೇಳನಗಳಲ್ಲಾದರೂ ಪಾಲ್ಗೊಳ್ಳ ಬೇಕು. ಇಂತಹ ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡರೂ ಕೇಳಿಸಿಕೊಳ್ಳುವ ಮನಸ್ಥಿತಿ ಇಲ್ಲ. ಕನ್ನಡ ಭಾಷೆ, ರೈತ ಸಮಸ್ಯೆಗಳನ್ನು ಸಮರ್ಥವಾಗಿ ಸದನದಲ್ಲಿ ಮಾತನಾಡುವ ಸಾಮರ್ಥ್ಯವೂ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಜನರಿಗೆ ಅಗತ್ಯವಾಗಿ ಬೇಕಾಗಿರುವ ಶಿಕ್ಷಣ ಹಾಗೂ ಆರೋಗ್ಯವೂ ಖಾಸಗೀಕರಣವಾಗುತ್ತಿದೆ. ರಾಜಕಾರಣಿ ಗಳ ಕೈಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಇವೆ. ಇವು ವ್ಯಾಪಾರೀಕರಣಗೊಂಡಿವೆ. ಶಿಕ್ಷಣ ರಾಷ್ಟ್ರೀಕರಣವಾಗಬೇಕಿದೆ. ಶಿಕ್ಷಣ ಕನಿಷ್ಠ ಪ್ರಾಥಮಿಕ ಹಂತದಲ್ಲಾದರೂ ಕನ್ನಡ ಮಾಧ್ಯಮವಾಗುವವರೆಗೂ ಕನ್ನಡ ಭಾಷೆಗೆ ಕಷ್ಟ. ಕನ್ನಡ ಸಾಹಿತ್ಯಕ್ಕೆ ಸಂಕಷ್ಟ ಎದುರಾಗಿಲ್ಲ. ಆದರೆ, ಭಾಷೆಗೆ ಸಂಕಷ್ಟ ಎದುರಾಗಿದೆ ಎಂದು ಹೇಳಿದರು.

ಸಾಹಿತಿಯಾದವನು ಯಾವುದಕ್ಕೂ ಅಧೀನನಾಗಬಾರದು. ಕನ್ನಡ ಸಾಹಿತ್ಯ ಪರಿಷತ್ತಿಗೂ ಅಧೀನ ನಾಗಿರಬಾರದು. ಆದರೆ, ಪರಿಷತ್ತಿನಿಂದ ದೂರವಿರಬಾರದು. ಅದರೊಳ ಗಿದ್ದುಕೊಂಡೇ ದನಿ ಎತ್ತಬೇಕು. ವ್ಯವಸ್ಥೆಯಿಂದ ದೂರ ಉಳಿಯುವ ಬದಲು ಒಳಗಿದ್ದುಕೊಂಡು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕಿದೆ. ಸಾಹಿತಿಗೆ ಸ್ವಾಯತ್ತತೆ ಇರಬೇಕು. ಯಾರ ಹಂಗೂ ಇರಬಾರದು ಎಂದರು.

‘ಕುವೆಂಪು ಅವರನ್ನು ಬಿಟ್ಟರೇ ‌ಇನ್ಯಾವ ಸಾಹಿತಿಯೂ ರೈತರ ಬಗ್ಗೆ ಬರೆಯಲಿಲ್ಲ. ಇಂತಹ ಸಮ್ಮೇಳನಗಳಲ್ಲಿ ರೈತರ ಸಮಸ್ಯೆಗಳು ಚರ್ಚೆಯಾಗುವುದಿಲ್ಲ. ರಾಷ್ಟ್ರಗೀತೆ, ನಾಡಗೀತೆಗೆ ಎದ್ದುನಿಂತು ಗೌರವ ತೋರಿಸುತ್ತೇವೆ. ಆದರೆ, ರೈತ ಗೀತೆ ಹಾಡಿದಾಗ ಸುಮ್ಮನೆ ಕುಳಿತಿರುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತನ ಕೃಷಿ ಭೂಮಿ ಮಾರಾಟವಾಗುತ್ತಿವೆ. ಬಂಡವಾಳ ಶಾಹಿಗಳ ಕೈ ಸೇರುತ್ತಿವೆ. ಕೃಷಿ ಚಟುವಟಿಕೆ ಕ್ಷೀಣಿಸುತ್ತಿದೆ. ನಗರ ಕೇಂದ್ರಿತ ಚಿಂತನೆಯಾಗುತ್ತಿದೆ. ಗ್ರಾಮೀಣ ಕೇಂದ್ರಿತ ಚಿಂತನೆ ಇಲ್ಲವಾಗಿದೆ. ಹಳ್ಳಿಯ ಸಂಸ್ಕೃತಿ, ಸಂವೇದನೆ ನಾಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪನ್ಯಾಸಕ ಸಿ.ಎಸ್.ಮಂಜುನಾಥ್ ಚಿನಕುರಳಿ ನಿರ್ವಹಣೆ ಮಾಡಿದರು. 20 ಲೇಖಕರು, ಉಪನ್ಯಾಸಕರು, ಶಿಕ್ಷಕರು, ಪ್ರಾಧ್ಯಾಪಕರು, ಚಿಂತಕರು ಸಂವಾದದಲ್ಲಿ ಭಾಗವಹಿಸಿದ್ದರು.

‘ಕನ್ನಡ ಸಾಹಿತ್ಯಕ್ಕೆ ಕಪ್ಪುಚುಕ್ಕಿ’

ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಹಾಗೂ ಸಮ್ಮೇಳನದಲ್ಲಿ ಅಲ್ಲಿನ ಆಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ನಡೆದುಕೊಂಡು ರೀತಿ, ಧೋರಣೆಗಳು ಕನ್ನಡ ಸಾಹಿತ್ಯಕ್ಕೆ ಕಪ್ಪು ಚುಕ್ಕಿ ಎಂದು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಮತ ಮತ್ತು ಧರ್ಮದ ನೆಲೆಯಲ್ಲಿಯೇ ಇಂದಿನ ವಿದ್ಯಮಾನಗಳು ದಮನಕಾರಿ ಪ್ರವೃತ್ತಿಯನ್ನು ಮೆರೆಯುತ್ತಿವೆ. ಇದಕ್ಕೆ ರಾಜಕಾರಣಿಗಳು ಹೊರತಲ್ಲ. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯೇ ಸಹಿಷ್ಣುತೆಯನ್ನು ಹೊಂದಿವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು