ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ: ಅಕ್ಷರ ಶತ್ರುಗಳಾಗುತ್ತಿರುವ ರಾಜಕಾರಣಿಗಳು

ಸಮ್ಮೇಳನಾಧ್ಯಕ್ಷ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಮತ, ಮಾತಿಗೆ ತಲೆದೂಗಿದ ಪ್ರೇಕ್ಷಕ
Last Updated 31 ಜನವರಿ 2020, 14:59 IST
ಅಕ್ಷರ ಗಾತ್ರ

ಮೇಲುಕೋಟೆ: ‘ಜನಪ್ರತಿನಿಧಿಗಳು ಸಾಹಿತ್ಯ, ಸಂಸ್ಕೃತಿ ಬಗ್ಗೆ ಪ್ರೀತಿ ಇಟ್ಟುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಅಕ್ಷರ ಶತ್ರುಗಳಾಗುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ’ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಇಲ್ಲಿಯ ಸರ್ಕಾರಿ ಆಸ್ಪತ್ರೆ ಎದುರಿನ ಮೈದಾನದ ಪು.ತಿ.ನ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ ಮಂಡ್ಯ ಜಿಲ್ಲಾ 17ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಹಿತಿಗೆ ಅಧಿಕಾರ ಇರುವುದಿಲ್ಲ. ಆದರೆ, ಅಧಿಕಾರವುಳ್ಳ ರಾಜಕಾರಣಿಗಳಿಗೆ ಸಾಹಿತ್ಯ, ಸಂಸ್ಕೃತಿಯ ಮೇಲೆ ಕಾಳಜಿ ಇಲ್ಲವಾಗುತ್ತಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸೇರಿ ಹಲವು ರಾಜಕಾರಣಗಳೂ ಸಾಹಿತಿಗಳಾಗಿದ್ದರು. ರಾಜಕಾರಣಿಗೆ ಸಾಹಿತ್ಯ, ಸಂಸ್ಕೃತಿಯ ಮೇಲೆ ಕಾಳಜಿ ಇಲ್ಲದಿದ್ದರೆ ಸಮಾಜ ಬೆಳವಣಿಗೆಯಾಗಲು ಸಾಧ್ಯವಿಲ್ಲ. ಅಧಿಕಾರ ಇದ್ದವರು ಸಮಾಜದ ಬೆಳವಣಿಗೆಗೆ ಕೊಡುಗೆ ನೀಡಿದರೆ ಬಂಗಾರದ ರಾಜ್ಯ ಸ್ಥಾಪಿಸಬಹುದು’ ಎಂದು ಹೇಳಿದರು.

‘ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸ್ವಾಯತ್ತ ಪ್ರಜ್ಞೆ ಇರಬೇಕು. ಹಾಗೆಯೇ ಸಾಹಿತಿ ಕೂಡ ಪ್ರಭುತ್ವದ, ರಾಜಕಾರಣಿಯ ಅಧೀನವಾಗಿ ನಡೆದುಕೊಳ್ಳಬೇಕಾಗಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಮೈಸೂರು ಅರಮನೆಗೆ ತೆರಳಿ ಯುವರಾಜರಿಗೆ ಕನ್ನಡದ ಪಾಠ ಹೇಳಿ ಕೊಡಲು ನಿರಾಕರಿಸಿದ್ದರು. ತನ್ನ ಕೊಠಡಿಗೆ ಬಂದು ಪಾಠ ಕೇಳುವಂತೆ ಹೇಳಿದ್ದರು. ಅವರ ಸ್ವಾಯತ್ತ ಪ್ರಜ್ಞೆ ಪ್ರತಿಯೊಬ್ಬ ಸಾಹಿತಿಯಲ್ಲೂ ಬರಬೇಕು’ ಎಂದರು.

‘ಜನಪ್ರತಿನಿಧಿಗಳೊಂದಿಗೆ ಸಾಹಿತಿ ಸ್ನೇಹಯುತವಾಗಿ ಇರಬೇಕು. ಹಾಗಂತ ಅವರಿಗೆ ಅಧೀನರಾಗಿ ಇರಬೇಕಾಗಿಲ್ಲ. ಪ್ರಭುತ್ವ ಎಂದಿಗೂ ಸ್ವಾಯತ್ತಕ್ಕೆ ಧಕ್ಕೆ ತರಬಾರದು. ಲೇಖಕ, ಯಾವ ಅಪೇಕ್ಷೆ ಇಲ್ಲದೆ ತನ್ನ ಅಭಿಪ್ರಾಯವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವಂತಹ ವಾತಾವರಣ ಇರಬೇಕು. ಸಾಹಿತ್ಯ ಮನೋಲ್ಲಾಸಕ್ಕಾಗಿ ಅಲ್ಲ, ಓದುಗನೊಳಗೆ ಚಿಂತನೆ ಹುಟ್ಟಿಸುವ, ಪ್ರಶ್ನೆ ಮಾಡುವ ಮನೋಭಾವ ಮೂಡಿಸುವಂತಿರಬೇಕು’ ಎಂದು ಹೇಳಿದರು.

‘ಯುವಪೀಳಿಗೆಯ ಮಕ್ಕಳಿಗೆ ಆಧುನಿಕತೆಯ ಅರಿವು ಇರಬೇಕು. ಪರಂಪರೆಯ ವಿವೇಕ ಇರಬೇಕು. ಎರಡೂ ಒಟ್ಟಿಗೆ ನಡೆದರೆ ಬದುಕು ಹಸನಾಗುತ್ತದೆ. ಮಂಡ್ಯ ಜಿಲ್ಲೆಗೆ ಶ್ರೀಮಂತ ಪರಂಪರೆ ಇದೆ. ರಾಜ್ಯದ ಬೇರೆ ಯಾವುದೇ ಜಿಲ್ಲೆಗೆ ಇಲ್ಲದ ಶ್ರೀಮಂತ ಪರಂಪರೆ ನಮ್ಮ ಜಿಲ್ಲೆಗಿದೆ. ಆದರೆ, ನಾವು ಅದನ್ನು ಗುರುತಿಸಿಲ್ಲ. ಬೇರೆಯವರೂ ನಮ್ಮ ಪರಂಪರೆಯನ್ನು ಗುರುತಿಸುವ ಕೆಲಸ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೇಲುಕೋಟೆಯ ಈ ನೆಲದಲ್ಲಿ ರಾಮಾನುಜಾಚಾರ್ಯರು ನಡೆದಾಡಿದ್ದಾರೆ. ಅವರು ಧರ್ಮಕ್ಕೆ ಚಲನಶೀಲತೆ ತಂದು ಕೊಟ್ಟವರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸ ಮಾರ್ಗ ಕಲ್ಪಿಸಿದ ಬಿ.ಎಂ.ಶ್ರೀ ನಮ್ಮ ಜಿಲ್ಲೆಯವರು. ನವೋದಯ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪು.ತಿ.ನ ಮೇಲುಕೋಟೆಯವರು. ಜಗತ್ತಿನ ಶ್ರೇಷ್ಠ ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿ ನಮ್ಮ ಜಿಲ್ಲೆಗೆ ಸೇರಿದವರು. ಜಾನಪದ ಕ್ಷೇತ್ರಕ್ಕೆ ನೆಲೆಗಟ್ಟು ಕಲ್ಪಿಸಿಕೊಟ್ಟ ಎಚ್‌.ಎಲ್‌.ನಾಗೇಗೌಡರು ನಮ್ಮ ಜಿಲ್ಲೆಯನ್ನು ಎತ್ತರಕ್ಕೆ ಕೊಂಡೊಯ್ದವರು. ಮಂಡ್ಯ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಪರಂಪರೆ ಬಲು ದೊಡ್ಡದು’ ಎಂದು ಹೇಳಿದರು.

‘ಮಣ್ಣಿನ ಪೂಜೆ ಮಾಡುವುದು ನಮ್ಮ ನೆಲ ಸಂಸ್ಕೃತಿ. ನಮ್ಮ ರೈತರಿಗೆ ಭೂಮಿ ತಾಯಿಯಾಗಿದ್ದಳು. ಸಗಣಿಗೆ ಗರಿಕೆ ಸಿಕ್ಕಿಸಿದರೆ ಗಣಪನಾಗುತ್ತಿದ್ದ. ನಮ್ಮ ಜಾನಪದ ಸಾಹಿತ್ಯದಲ್ಲಿ ನೆಲ ಸಂವೇದನೆಯೇ ಮೂಲದ್ರವ್ಯವಾಗಿತ್ತು. ಭೂಮಿ ಈಗ ಮಾರಾಟದ ವಸ್ತುವಾಗಿ ವಿಲಾಸಿನಿಯಾಗಿದ್ದಾಳೆ’ ಎಂದರು.

‘ಹಳ್ಳಿ ಜನವಸತಿಯ ಒಂದು ಪ್ರದೇಶ ಮಾತ್ರವೇ ಆಗಿರಲಿಲ್ಲ. ನಮ್ಮ ಬದುಕು ರೂಪಿಸುವ ಒಂದು ಪ್ರಜ್ಞೆಯಾಗಿತ್ತು. ಆದರೆ, ಆ ಪ್ರಜ್ಞೆಯನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಇದರ ಪರಿಣಾಮವನ್ನು ನಾವು ಈಗಾಗಲೇ ಎದುರಿಸುತ್ತಿದ್ದೇವೆ. ಜೀವನಾವಶ್ಯಕ ವಸ್ತುಗಳಾದ ಶುದ್ಧ ನೀರು, ಗಾಳಿ ಸಿಗದ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ನಮ್ಮ ಸಾಹಿತ್ಯ ಈ ಸಮಸ್ಯೆಗಳನ್ನು ಚಿಂತಿಸಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ಆಶಯ ನುಡಿಗಳನ್ನಾಡಿದ ಶಾಸಕ ಸಿ.ಎಸ್‌.ಪುಟ್ಟರಾಜು, ‘ಎಲ್ಲರ ಸಹಕಾರದಿಂದ ಅದ್ಧೂರಿಯಿಂದ ಕನ್ನಡ ಜಾತ್ರೆ ಆಯೋಜನೆ ಮಾಡಲಾಗಿದೆ. ಮುಂದೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇಲುಕೋಟೆಯಲ್ಲೇ ನಡೆಸಲು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ನೇತೃತ್ವ ವಹಿಸಬೇಕು’ ಎಂದು ಕೋರಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಪುರುಷೋತ್ತಮಾ ನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ತೈಲೂರು ವೆಂಕಟಕೃಷ್ಣ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ, ಉಪ ವಿಭಾಗಾಧಿಕಾರಿ ಶೈಲಜಾ ಇದ್ದರು.

ಸಮ್ಮೇಳನದ ಅಧ್ಯಕ್ಷರು ಸಂಪ್ರದಾಯದಂತೆ ಭಾಷಣ ಓದುತ್ತಾರೆ. ಆದರೆ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಹಜವಾಗಿ ಎಂದಿನಂತೆ ತಮ್ಮ ಇಂಪಾದ ಧ್ವನಿಯಲ್ಲಿ ಮಾತನಾಡಿದರು. ಇದು ಸಾಹಿತ್ಯಾಸಕ್ತರ ಮನಮುಟ್ಟಿತು.

3ನೇ ಮಹಾಯುದ್ಧದ ಸ್ಥಿತಿ
‘ಪ್ರಸ್ತುತ, ಜಗತ್ತಿನಾದ್ಯಂತ 3ನೇ ಮಹಾಯುದ್ಧದ ಪರಿಸ್ಥಿತಿ ಬಂದೊದಗಿದೆ. ಎಲ್ಲೆಲ್ಲೂ ಭೀತಿ, ಅಪಾಯದ ಪರಿಸ್ಥಿತಿ ತಲೆದೋರಿದೆ. ಅಣು ಬಾಂಬ್‌ ಹೆಸರಿನಲ್ಲಿ ಜಗತ್ತನ್ನೇ ತಲ್ಲಣಗೊಳಿಸುವ ವಾತಾವರಣ ಇದೆ. ನೈತಿಕ ನೆಲೆಗಟ್ಟಿನ ಚಿಂತನೆಗಳು ಇಲ್ಲದಿರುವಾಗ ಇಂತಹ ಭಯದ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

‘ವೈಜ್ಞಾನಿಕ ಚಿಂತನೆಗಳ ಆಧಾರದ ಮೇಲೆ ಸಮಾಜ ಮುನ್ನಡೆಯಬೇಕು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥರು ವಿಜ್ಞಾನಿಯೂ ಆಗಿದ್ದು, ಅವರ ಮಾರ್ಗದರ್ಶನಲ್ಲಿ ಮಂಡ್ಯ ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗಬೇಕು’ ಎಂದರು.

ಯಕ್ಷಗಾನ ಮಂಡ್ಯ ಜಿಲ್ಲೆಯದ್ದು
‘ದಕ್ಷಿಣ ಕನ್ನಡ ಜಿಲ್ಲೆಯ ಜನರು ಯಕ್ಷಗಾನ ಕಲೆಯನ್ನು ತಮ್ಮದು ಎಂದು ಪ್ರತಿಪಾದಿಸುತ್ತಾರೆ. ಆದರೆ, ಅವರಿಗೆ ಯಕ್ಷಗಾನ ಕಲಿಸಿದವರು ಮಂಡ್ಯ ಜಿಲ್ಲೆಯ ಜನರು. ಮಂಡ್ಯದ ಕೆಂಪಣ್ಣಗೌಡ ಮೊದಲ ಯಕ್ಷಗಾನ ಪ್ರಸಂಗವನ್ನು ಬರೆದರು’ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

‘ನಾಗಮಂಗಲ ತಾಲ್ಲೂಕಿನಲ್ಲಿ ಈಗಲೂ ಮೂಡಲಪಾಯ ಯಕ್ಷಗಾನದ ಬೇರುಗಳಿವೆ. ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ಪುನಾರಚನೆಗೆ ಇವೆಲ್ಲವೂ ಆಧಾರವಾಗಬೇಕು’ ಎಂದರು.

ಉತ್ಸಾಹಮೂರ್ತಿ ಆಗಲಾರೆ: ಸಮ್ಮೇಳನಾಧ್ಯಕ್ಷ

‘ಎರಡು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಕುಳಿತು ಉತ್ಸವಮೂರ್ತಿ ಆಗಲಾರೆ. ಎರಡು ದಿನಗಳ ನಂತರ ನೀವು ನನ್ನನ್ನು ಮರೆತು ಬಿಡುತ್ತೀರಿ. ಹಾಗಾಗಲು ನನಗೆ ಇಷ್ಟವಿಲ್ಲ. ಎಲ್ಲರೂ ಸಹಕಾರ ಕೊಟ್ಟರೆ ಮುಂದಿನ ಒಂದು ವರ್ಷ ಕಾಲ ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಯ ನೇತೃತ್ವ ವಹಿಸಲು ಸಿದ್ಧನಿದ್ದೇನೆ’ ಎಂದು ಅಧ್ಯಕ್ಷರು ಹೇಳಿದರು.‌

ಸಚಿವ, ಸಂಸದೆ, ಶಾಸಕರು ಗೈರು!
ಸ್ಮರಣ ಸಂಚಿಕೆ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಗೈರು ಹಾಜರಾಗಿದ್ದರು. ಜೊತೆಗೆ ಸಂಸದೆ ಎ.ಸುಮಲತಾ, ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಕೆ.ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಎಂ.ಶ್ರೀನಿವಾಸ್ ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT