ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

"ಅಭಿವೃದ್ಧಿಗೆ ಪ್ರಕೃತಿ ಪ್ರತಿಕ್ರಿಯೆ ತಿಳಿಯುವುದೇ ಜ್ಞಾನ'

ಸಾಹಿತಿ ಲಕ್ಷ್ಮೀಶ್‌ ತೋಳ್ಪಾಡಿ ಅಭಿಪ್ರಾಯ
Last Updated 23 ಫೆಬ್ರುವರಿ 2019, 20:20 IST
ಅಕ್ಷರ ಗಾತ್ರ

ಪಾಂಡವಪುರ: ‘ಅಭಿವೃದ್ಧಿಯ ಹೆಸರಲ್ಲಿ ಆಗುತ್ತಿರುವ ಕೆಲಸ– ಯೋಜನೆಗಳಿಗೆ ಪ್ರಕೃತಿಯ ಪ್ರತಿಕ್ರಿಯೆ ಏನಿದ್ದೀತು ಎಂಬ ಅರಿವು ಅತ್ಯಗತ್ಯ’ ಎಂದು ಸಾಹಿತಿ ಲಕ್ಷ್ಮೀಶ್‌ ತೋಳ್ಪಾಡಿ ಶನಿವಾರ ಹೇಳಿದರು.

ತಾಲ್ಲೂಕಿನ ಉಳಿಗೆರೆ ಸಮೀಪದಲ್ಲಿರುವ ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ‘‌ಹೊಸ ಜೀವನ ದಾರಿ’ ಕೇಂದ್ರದಲ್ಲಿ ಆರಂಭಗೊಂಡ ಎರಡು ದಿನಗಳ ‘ಅಭಿವೃದ್ಧಿ ಸಂವಾದ’ ಉದ್ಫಾಟಿಸಿ ಮಾತನಾಡಿದರು.

ಎತ್ತಿನ ಹೊಳೆ ಯೋಜನೆಯನ್ನು ಉದಾಹರಿಸಿದ ಅವರು, ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತದೆ ಎಂಬುದು ಆಧುನಿಕ ಸಂದರ್ಭದ ಮಿಥ್ಯೆ; ಪ್ರಭುತ್ವವೇ ಅಭಿವೃದ್ಧಿ ಮಾಡ ಹೊರಟಾಗ ಸಾರ್ವಜನಿಕ ಉದ್ದೇಶದ ನೆಪದಲ್ಲಿ ಜನರ ಆಶಯಗಳಿಗೆ ಕಿವಿಗೊಡದಿರುವುದು ದುರಾದೃಷ್ಟಕರ. ಅಭಿವೃದ್ಧಿ ಕೆಲಸಗಳಿಗೆ ಪ್ರಕೃತಿಯ ಪ್ರತಿಕ್ರಿಯೆ ತಿಳಿಯುವುದು ಜ್ಞಾನ; ತಿಳಿಯಲು ಪ್ರಯತ್ನಿಸದಿರುವುದು ಅಹಂಕಾರ’ ಎಂದು ವಿಶ್ಲೇಷಿಸಿದರು.

‘ನಮ್ಮ ಅನುಕರಣಶೀಲ ಮನೋಪ್ರವೃತ್ತಿಯಿಂದಾಗಿ ಅನಗತ್ಯ ಬೇಕುಗಳು ಬದುಕನ್ನು ಹೈರಾಣಗೊಳಿಸಿವೆ. ಇದರ ಬದಲು ಸರಳ ಜೀವನ ಪದ್ಧತಿ ಅನುಸರಿಸುವ ಮೂಲಕ ನೆಮ್ಮದಿ ಕಂಡುಕೊಳ್ಳಬಹುದು. ಲೋಕವನ್ನು ತಿದ್ದುವ ಮುನ್ನ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು’ ಎಂದು ತೋಳ್ಪಾಡಿ ಪ್ರತಿಪಾದಿಸಿದರು.

ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ಮಾತನಾಡಿ, ‘ಅಭಿವೃದ್ಧಿ ಸಾಧಿಸುತ್ತೇವೆ ಎಂದಾಗ ಅದರ ಗುರಿಯ ಬಗ್ಗೆ ಸ್ಪಷ್ಟನೆ ಇಲ್ಲ. ಗುರಿ ಸಾಧನೆಗೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಏನನ್ನು ಸಾಧಿಸ ಹೊರಟ್ಟಿದ್ದೇವೆಯೋ ಅದರ ಅಗತ್ಯ ನಮಗಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

ಪ್ರಾಧ್ಯಾಪಕ ಸುಜಿತ್‌ ಸಿನ್ಹಾ, ಮಹಾರಾಷ್ಟ್ರದ ಮಂಡಲೇಖ ಗ್ರಾಮದಲ್ಲಿ ಗಾಂಧಿ ತತ್ವಾದರ್ಶದಡಿ ಸಾಕಾರಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರ ನೀಡಿದರು.

ಚರ್ಚೆ ಇಂದು: ಫೆ. 24ರಂದು ಬೆಳಿಗ್ಗೆ 10.30ಕ್ಕೆ ‘ಅಭಿವೃದ್ಧಿ ಮತ್ತು ರಾಜಕಾರಣದ ವಾಸ್ತವಗಳು’ ಕುರಿತು ಹಿರಿಯ ರಾಜಕಾರಣಿ ಬಿ.ಆರ್.ಪಾಟೀಲ್‌ ಅವರೊಂದಿಗೆ ಚರ್ಚೆ ನಡೆಯಲಿದೆ. ‘ಪ್ರಜಾವಾಣಿ’ ಸಹಾಯಕ ಸಂಪಾದಕ ಎನ್.ಎ.ಎಂ.ಇಸ್ಮಾಯಿಲ್‌ ಚರ್ಚೆ ನಡೆಸಿಕೊಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT