ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸವಿಮಂಡ್ಯ’ ಚಾನೆಲ್‌ನಲ್ಲಿ ಮಂಡ್ಯ ಡಯಟ್‌ ಶಿಕ್ಷಕರ ಪಾಠ

Last Updated 27 ನವೆಂಬರ್ 2020, 13:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಶಿಕ್ಷಕರು ರಾಜ್ಯದಲ್ಲೇ ಮೊದಲ ಬಾರಿಗೆ ‘ಸವಿ ಮಂಡ್ಯ’ ಯೂಟ್ಯೂಬ್‌ ಚಾನೆಲ್‌ ಮೂಲಕ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುತ್ತಿರುವುದು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಡಯಟ್‌ ಆವರಣದಲ್ಲಿಯೇ ಸಣ್ಣದೊಂದು ಸ್ಟುಡಿಯೊ ಆರಂಭಿಸಲಾಗಿದ್ದು 18 ಶಿಕ್ಷಕರು ಕಳೆದೊಂದು ತಿಂಗಳಿಂದ ವಿವಿಧ ವಿಷಯಗಳನ್ನು ಬೋಧನೆ ಮಾಡುತ್ತಿದ್ದಾರೆ. ಸಂಸ್ಥೆ ಆವರಣದಲ್ಲೇ ಇರುವ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿ ಪಠ್ಯದ ಪಿಪಿಟಿ ಸಿದ್ಧ ಮಾಡಿಕೊಂಡು, ಪ್ರಾಜೆಕ್ಟರ್‌ ಮೂಲಕ ಬೋಧನೆ ಮಾಡಲಾಗುತ್ತಿದೆ. ಇದನ್ನು ಚಿತ್ರೀಕರಿಸಿ ಸವಿಮಂಡ್ಯ ಯೂಟ್ಯೂಬ್‌ ಚಾನೆಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿದೆ.

ಇಲ್ಲಿಯವರೆಗೆ 1,500 ವಿದ್ಯಾರ್ಥಿಗಳು ಚಾನೆಲ್‌ಗೆ ನೋಂದಣಿ ಮಾಡಿಕೊಂಡಿದ್ದಾರೆ. 30 ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಶಿಕ್ಷಕರಿಗೆ ತರಬೇತಿ ನೀಡುವ ಡಯಟ್‌ ಸಂಪನ್ಮೂಲ ವ್ಯಕ್ತಿಗಳು ಚಾನೆಲ್‌ ಮೂಲಕ ವಿದ್ಯಾರ್ಥಿಗಳಿಗೆ ತಲುಪುತ್ತಿರುವುದು ವಿನೂತನವಾಗಿದೆ. 7ನೇ ತರಗತಿ ವಿದ್ಯಾರ್ಥಿಗಳ 6 ವಿಷಯಗಳ ಕುರಿತು ಬೋಧನೆ ಮಾಡಲಾಗುತ್ತಿದೆ.

ಒಂದೆಡೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಇನ್ನೊಂದೆಡೆ ಡಯಟ್‌ ಶಿಕ್ಷಕರು ಗ್ರೀನ್‌ ಮ್ಯಾಟ್‌ ಮೂಲಕ ವಿಡಿಯೊ ಮಿಕ್ಸಿಂಗ್‌, ಪಿಪಿಟಿ ವಿವರಣೆ ನೀಡುತ್ತಾ ಪಾಠ ಮಾಡುತ್ತಿರುವುದು ವಿನೂತನ ಎನಿಸಿದೆ.

‘ಆನ್‌ಲೈನ್‌ ತರಗತಿಯಲ್ಲಿ ಶಿಕ್ಷಕರು ನೇರವಾಗಿ ಪಾಠ ಹೇಳುತ್ತಾ ಹೋಗುತ್ತಾರೆ. ಆದರೆ ಸವಿಮಂಡ್ಯ ಚಾನೆಲ್‌ನಲ್ಲಿ ವಿಡಿಯೊ ಮಿಕ್ಸಿಂಗ್‌ ಮೂಲಕ ವಿಷಯಗಳನ್ನು ವಿವಿರಿಸುವುದು ಕುತೂಹಲ ಮೂಡಿಸುತ್ತದೆ’ ಎಂದು ಮದ್ದೂರು ತಾಲ್ಲೂಕು ಸಬ್ಬನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಎಸ್‌.ಎಂ.ಮನೋಹರ್‌ ತಿಳಿಸಿದರು.

‘ಶಿಕ್ಷಕರು ಸ್ವಯಂ ಪ್ರೇರಿತವಾಗಿ ಮಾಡುತ್ತಿರುವ ಪಾಠ ಬೋಧನೆ ಹೆಚ್ಚು ಮಕ್ಕಳಿಗೆ ತಲುಪುತ್ತಿದೆ. ಪಾಠದ ವಿಡಿಯೊಗಳನ್ನು ಪರಿಶೀಲನೆ ಮಾಡಿದ ನಂತರ ಚಾನೆಲ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಶಿವಮಾದಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT