ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕೊಠಡಿ ಕೊರತೆ ನೀಗಿಸಿದ ಗ್ರಾಮಸ್ಥರು

ಮೊದಲ ಮಹಡಿಯಲ್ಲಿ ಮೂರು ಕೊಠಡಿ ನಿರ್ಮಾಣ, ಹಳೆಯ ವಿದ್ಯಾರ್ಥಿಗಳ ಸಹಾಯ
Last Updated 14 ಅಕ್ಟೋಬರ್ 2019, 11:10 IST
ಅಕ್ಷರ ಗಾತ್ರ

ಮಂಡ್ಯ: ಶಾಲಾ ಕೊಠಡಿಗಳ ಕೊರತೆಯಿಂದಾಗಿ ತಾಲ್ಲೂಕಿನ ಜಿ.ಕೆಬ್ಬಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ದಾಖಲಾತಿ 20 ದಾಟಿರಲಿಲ್ಲ. ಆದರೆ, ಈಗ ಗ್ರಾಮಸ್ಥರೇ ಸೇರಿ ಮೂರು ಹೊಸ ಕೊಠಡಿಗಳನ್ನು ನಿರ್ಮಿಸಿದ್ದು ವಿದ್ಯಾರ್ಥಿಗಳ ಸಂಖ್ಯೆ 50ಕ್ಕೇರಿದೆ.

ತಮ್ಮೂರಿನ ಸರ್ಕಾರಿ ಶಾಲೆ ಉಳಿಸುವ ಉದ್ದೇಶದೊಂದಿಗೆ ಗ್ರಾಮಸ್ಥರು, ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಮುಖ್ಯ ಕಟ್ಟಡದ ಮೇಲ್ಭಾಗದಲ್ಲಿ ಕೊಠಡಿ ನಿರ್ಮಿಸುವ ಮೂಲಕ, ಜಗುಲಿಯ ಮೇಲೆ ಪಾಠ ಕೇಳುತ್ತಿದ್ದ ಮಕ್ಕಳ ಕಷ್ಟ ತಪ್ಪಿಸಿದ್ದಾರೆ.

1ರಿಂದ 7ನೇ ತರಗತಿವರೆಗಿನ ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದು, 2 ಮತ್ತು 3 ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡುವ ಪರಿಸ್ಥಿತಿ ಇತ್ತು. ಮುಖ್ಯಶಿಕ್ಷಕರ ಕೊಠಡಿಯಲ್ಲೂ ತರಗತಿ ನಡೆಸಲಾಗುತ್ತಿತ್ತು. ಈಗ ಹೊಸ ಕೊಠಡಿಗಳು ನಿರ್ಮಾಣವಾಗಿದ್ದು, ತಾತ್ಕಾಲಿಕವಾಗಿ ಚಾವಣಿಗೆ ಶೀಟ್‌ ಹಾಕಿಸಲಾಗಿದೆ. ಮುಂದೆ ಸುಸಜ್ಜಿತ ಆರ್‌ಸಿಸಿ ಹಾಕಿಸುವ ಯೋಜನೆ ಗ್ರಾಮಸ್ಥರಲ್ಲಿ ಇದೆ.

‘ಮಕ್ಕಳ ಮನೆ‘ಯೂ ಆರಂಭವಾಗಿದ್ದು, 30 ಮಕ್ಕಳು ದಾಖಲಾಗಿವೆ. ಮಕ್ಕಳನ್ನು ಶಾಲೆಗೆ ಕರೆತರಲು, ಮನೆಗೆ ಬಿಡಲು ಎಸ್‌ಡಿಎಂಸಿ ಸದಸ್ಯರು ಮಾರುತಿ ವ್ಯಾನ್‌ ಉಡುಗೊರೆ ಕೊಟ್ಟಿದ್ದು, ಉಚಿತವಾಗಿ ಸೇವೆ ನೀಡಲಾಗುತ್ತಿದೆ.

‘ಶಾಲೆಯ ಸ್ಥಿತಿ ಬಗ್ಗೆ ಅಧಿಕಾರಿಗಳಿಗೆ ವಿಷಯ ತಿಳಿಸಿ, ಪತ್ರ ಬರೆದು ಹೈರಾಣಾಗಿದ್ದೆವು. ಮಕ್ಕಳ ಕಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಶಾಲೆಗೆ ಕಾಯಕಲ್ಪ ನೀಡಲು ನಿರ್ಧರಿಸಿದೆವು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಚೌಡೇಗೌಡ ಹೇಳಿದರು.

ಜೈಲು ಅಧೀಕ್ಷಕಿಯ ಸಹಾಯ: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಮುಖ್ಯ ಕಾರಾಗೃಹ ಅಧೀಕ್ಷಕಿಯಾಗಿರುವ ಕೆ.ಸಿ.ದಿವ್ಯಶ್ರೀ, ಈ ಶಾಲೆಯ ಹಳೆಯ ವಿದ್ಯಾರ್ಥಿ. ತಾವು ಕಲಿತ ಶಾಲೆಗೆ ಅವರು ಪ್ರೀತಿಯಿಂದ ಸಹಾಯ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯೆ ಜಯಶೀಲಾ ಅವರು ಎರಡು ಕಂಪ್ಯೂಟರ್‌ ಕೊಡಿಸಿದ್ದಾರೆ.

‘ಜಗುಲಿ ಮೇಲೆ ಕೂರಿಸಿ ಪಾಠ ಮಾಡುವ ಪರಿಸ್ಥಿತಿ ಈಗಿಲ್ಲ. ಗ್ರಾಮಸ್ಥರ ಸಹಾಯದಿಂದ ಅನುಕೂಲವಾಗಿದೆ. ನಲಿ–ಕಲಿ ಚಟುವಟಿಕೆಗೆ ಇನ್ನೊಷ್ಟು ಕೊಠಡಿಗಳ ಅವಶ್ಯಕತೆ ಇದೆ’ ಎಂದು ಮುಖ್ಯ ಶಿಕ್ಷಕಿ ಗೀತಾ ಹೇಳಿದರು.

ತೆಂಗಿನ ಸಸಿ ನೆಟ್ಟು ಪೋಷಣೆ: ಗ್ರಾಮಸ್ಥರು ಶಾಲೆಯ ಆವರಣದಲ್ಲಿ ನಾಲ್ಕು ವರ್ಷಗಳ ಹಿಂದೆ 30 ತೆಂಗಿನ ಸಸಿ ನೆಟ್ಟು ಪೋಷಣೆ ಮಾಡಿದ್ದಾರೆ. ಈಗಾಗಲೇ ಮೂರು ಮರಗಳು ಫಲ ಕೊಡುತ್ತಿವೆ. ಇನ್ನೊಂದು ವರ್ಷದಲ್ಲಿ ಎಲ್ಲಾ ಮರಗಳು ಫಲ ನೀಡಲಿದ್ದು, ಅದರಿಂದ ಬಂದ ಆದಾಯವನ್ನು ಶಾಲೆಯ ಅಭಿವೃದ್ಧಿಗೆ ವಿನಿಯೋಗ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

************

ಮೃತ ವಿದ್ಯಾರ್ಥಿ ಹೆಸರಿನಲ್ಲಿ ಕೊಠಡಿ

ಜಿ.ಕೆಬ್ಬಹಳ್ಳಿ ಶಾಲೆಯಲ್ಲಿ ಓದುತ್ತಿದ್ದ ನವೀನ್‌ ಎಂಬ ವಿದ್ಯಾರ್ಥಿ ಈಚೆಗೆ ಮೃತಪಟ್ಟಿದ್ದು, ಆತನ ಸ್ಮರಣೆಯಲ್ಲಿ ಒಂದು ಕೊಠಡಿ ನಿರ್ಮಿಸಲಾಗಿದೆ. ಅದರ ಸಂಪೂರ್ಣ ಖರ್ಚನ್ನು ವಿದ್ಯಾರ್ಥಿಯ ತಂದೆಯೇ ಭರಿಸಿದ್ದಾರೆ. ಕೊಠಡಿ ಗೋಡೆಯ ಮೇಲೆ ವಿದ್ಯಾರ್ಥಿಯ ಹೆಸರಿನ ಫಲಕ ಹಾಕುವ ಮೂಲಕ ಸ್ಮರಿಸಲಾಗಿದೆ.

*******

ಗ್ರಾಮದ ಶಾಲೆಗೆ ಗ್ರಾಮಸ್ಥರಿಂದ ಸಹಾಯ

ಸರ್ಕಾರದ ಸೌಲಭ್ಯಕ್ಕೆ ಕಾಯದ ಹಳ್ಳಿಯ ಜನ

ಹಳೆಯ ವಿದ್ಯಾರ್ಥಿಗಳಿಂದ ಕಲಿತ ಶಾಲೆಗೆ ಸಹಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT