ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದನವನವಾದ ಕೂಳಗೆರೆ ಶಾಲೆ ಆವರಣ

ಖಾಸಗಿ ಶಾಲೆಯನ್ನು ಮೀರಿಸುವಂತೆ ಸರ್ಕಾರಿ ಶಾಲೆ ಅಭಿವೃದ್ಧಿ, ಎಲ್ಲೆಡೆ ಹಸಿರಿನ ಹೊದಿಕೆ
Last Updated 24 ಮಾರ್ಚ್ 2020, 10:47 IST
ಅಕ್ಷರ ಗಾತ್ರ

ಭಾರತೀನಗರ: ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳೂ ಕೂಡ ಖಾಸಗಿ ಶಾಲೆಗಳಿಗಿಂತ ಮಿಗಿಲಾಗುತ್ತವೆ ಎಂಬುದಕ್ಕೆ ಸಮೀಪದ ಕೂಳಗೆರೆ ಗೇಟ್‌ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಗಿದೆ.

1989ರಲ್ಲಿ ಪ್ರಾರಂಭವಾದ ಈ ಶಾಲೆಗೆ ಆರಂಭದಲ್ಲಿ ಯಾವುದೇ ಮೂಲ ಸೌಕರ್ಯ ಇರಲಿಲ್ಲ. ಜನಪ್ರತಿನಿಧಿಗಳು, ಪೋಷಕರ ಸಹಕಾರದಿಂದ 1996ರಲ್ಲಿ ಮಂಜೂರಾದ 3 ಎಕರೆ 28 ಗುಂಟೆ ನಿವೇಶನದಲ್ಲೀಗ, ಸುಸಜ್ಜಿತ ಶಾಲಾ ಕಟ್ಟಡದ ಜೊತೆಗೆ, ಹಸಿರು ಉದ್ಯಾನವೇ ನಿರ್ಮಾಣವಾಗಿದೆ.

ಬಟಾಬಯಲಿನಂತಿದ್ದ ಶಾಲಾ ನಿವೇಶನದಲ್ಲಿ ವರ್ಷದಿಂದ ವರ್ಷಕ್ಕೆ ತೆಂಗು, ಹಲಸು ಸೇರಿದಂತೆ ಹಲವು ಬಗೆಯ ಹಣ್ಣಿ ಗಿಡಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ನೆಟ್ಟು, ನೀರೆರೆದು ಪೋಷಿಸಿ ಬೆಳೆಸಿದ್ದಾರೆ.

ಶಾಲಾ ಪರಿಸರ ನಂದನವನವಾಗಲು ತೋಟಗಾರಿಕಾ ಶಿಕ್ಷಕ ಎಸ್.ಎಚ್. ಹೊನ್ನೇಗೌಡ ಅವರ ಪರಿಶ್ರಮವೂ ಇದೆ. ಹಲವು ಬಗೆಯ ಗಿಡ ಮರ ಬಳ್ಳಿಗಳನ್ನು ನೆಟ್ಟು, ನೆಲೆಯೂರುವಂತೆ ಮಾಡಿದ್ದಾರೆ.

ಶಾಲಾ ಆವರಣ ಬರದಲ್ಲೂ ಕೂಡ ಹಸಿರಿನಿಂದ ಕಂಗೊಳಿಸಿ ಬೆರಗು ಮೂಡಿಸುತ್ತದೆ. ಜ್ಞಾನ ದೇಗುಲವೀಗ ಎಲ್ಲೆಂದರಲ್ಲಿ ಗಿಡ ಮರ ಬಳ್ಳಿಗಳಿಂದಲೇ ತುಂಬಿ ಹೋಗಿದೆ. ಅಲಂಕಾರಿಕ ಸಸ್ಯಗಳು, ಔಷಧಿ ಸಸ್ಯಗಳು, ಹೂವಿನ ಗಿಡಗಳು, ತೆಂಗು, ಬಾಳೆ ಸೇರಿ ಒಟ್ಟು 550ಕ್ಕೂ ಹೆಚ್ಚು ಬಗೆಯ ಗಿಡಮರ ಬಳ್ಳಿಗಳು ಆವರಣದಲ್ಲಿ ರಾರಾಜಿಸುತ್ತಿವೆ.

ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತೆಂಗು, ಕರಿಬೇವು, ವಿವಿಧ ಬಗೆಯ ಸೊಪ್ಪು, ತರಕಾರಿಗಳು ಶಾಲಾ ಕೈದೋಟದಲ್ಲಿ ಲಭ್ಯ ಇವೆ.

ಶಾಲೆಯಲ್ಲಿ ಹಸಿರು ಮನೆ ಕ್ಲಬ್, ನಿಸರ್ಗ ಇಕೋ ಕ್ಲಬ್‌ಗಳು ಜ್ಞಾನ ದಾಹದ ಜೊತೆಗೆ ಪರಿಸರದ ಆಳ ಅರಿವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿವೆ. ಪರಿಸರ ಸಂರಕ್ಷಣೆ ಜೊತೆಗೆ ಪ್ಲಾಸ್ಟಿಕ್ ನಿಷೇಧಕ್ಕೂ ಆದ್ಯತೆ ನೀಡಿದೆ. ನೈರ್ಮಲ್ಯ, ಶುಚಿತ್ವ ನಿರ್ವಹಣೆಗೆ ಪ್ರಾಧಾನ್ಯತೆ ನೀಡಲಾಗಿದೆ. ಪ್ರತ್ಯೇಕ ಶೌಚಾಲಯಗಳಿವೆ. ಹಸಿರು ಪರಿಸರದಲ್ಲೀಗ ಬಗೆ ಬಗೆಯ ಪಕ್ಷಿಗಳ ಇಂಚರ, ಚಿಟ್ಟೆ, ದುಂಬಿಗಳ ಝೇಂಕಾರ ಕೇಳಿ ಬರುತ್ತಿದೆ.

‘ಉತ್ತಮ ಪರಿಸರವಿದ್ದಲ್ಲಿ ಉತ್ತಮ ಮನಸ್ಸು ಇರುತ್ತದೆ’ ಎಂಬಂತೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ, ಧನಾತ್ಮಕವಾದ ಪರಿಸರ ನಮ್ಮ ಶಾಲಾ ವಾತಾವರಣ ಪೂರಕವಾಗಿದೆ’ ಎಂದು ಮುಖ್ಯಶಿಕ್ಷಕ ಎಚ್. ಮಹದೇವಸ್ವಾಮಿ ಹೇಳುತ್ತಾರೆ.

ವಿವಿಧ ಪ್ರಶಸ್ತಿಗಳಿಗೆ ಶಾಲೆ ಭಾಜನ

ಹಸಿರಿನ ಸೃಷ್ಟಿಗೆ ತಾಲ್ಲೂಕು ಮಟ್ಟದ, ಜಿಲ್ಲಾ ಮಟ್ಟದ ಪ್ರಶಸ್ತಿ ಬಹುಮಾನಗಳು ಲಭಿಸಿದೆ. 2017ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ‘ಜಿಲ್ಲಾ ಮಟ್ಟದ ಹಸಿರು ಮಿತ್ರ ಶಾಲೆ’ ಪ್ರಶಸ್ತಿಗೆ ಭಾಜನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT