ಭಾನುವಾರ, ಸೆಪ್ಟೆಂಬರ್ 25, 2022
21 °C
ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸಿದ್ದ ಕಾಲೇಜಿನ ವಿದ್ಯಾರ್ಥಿಗಳು; ಕುತೂಹಲ ಹೆಚ್ಚಿಸಿದ ಪರಿಕರಗಳು

ಗಮನ ಸೆಳೆದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ನಿದ್ದೆ ನಿಯಂತ್ರಿಸುವ ಯಂತ್ರ, ಗ್ರಂಥಾಲಯದಲ್ಲಿ ಪುಸ್ತಕಗಳ ಮಾಹಿತಿ ನೀಡುವ ಕಂಪ್ಯೂಟರ್‌ಗಳು, ಪ‍ರಿಸರ ಸ್ನೇಹಿ ತಂತ್ರಜ್ಞಾನ, ಪ್ಲಾಸ್ಟಿಕ್‌ ಮಾಲಿನ್ಯ ನಿಯಂತ್ರಣ, ಜೈವಿಕ ತಂತ್ರಜ್ಞಾನ, ಆರೋಗ್ಯ ವಿಜ್ಞಾನ ಮಾದರಿಗಳ ಆವಿಷ್ಕಾರಗಳ ಅನಾವರಣ... ಆಸಕ್ತಿಯಿಂದ ವೀಕ್ಷಿಸಿದ ವಿದ್ಯಾರ್ಥಿಗಳು...

ನಗರದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ವಿಜ್ಞಾನ– ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ– ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮೈಸೂರು ವಿಭಾಗೀಯ ಮಟ್ಟದ ಪ‍ದವಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಕಂಡು ಬಂದ ಚಿತ್ರಣವಿದು.

ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯ ವಿವಿಧ ಕಾಲೇಜುಗಳ ಸಹಯೋಗದಲ್ಲಿ ‘ಮನುಕುಲಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ’ ವಿಷಯದಲ್ಲಿ ಹಮ್ಮಿಕೊಂಡಿದ್ದ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಕುರಿತು ವಿವರಣೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು.

ಹಾಸನ ಸರ್ಕಾರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜು, ಮೈಸೂರು ಸೇಂಟ್‌ಫಿಲೋಮಿನಾ ಕಾಲೇಜು, ಮಹಾರಾಣಿ ಮಹಿಳಾ ಕಾಲೇಜು, ಜೆಎಸ್‌ಎಸ್‌ ಕಾಲೇಜು, ಮಂಡ್ಯ ವಿಶ್ವವಿದ್ಯಾಲಯ, ಕೊಳ್ಳೇಗಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದ್ದಿಲು, ಮರಳು, ಯುವಿ ಲೈಟ್‌ ಮೂಲಕ ಗಾಳಿಯಲ್ಲಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯದಿಂದ ನೀರು ಸಂಗ್ರಹ, ಮಳೆ ನೀರು ಸಂಗ್ರಹ ಮತ್ತು ನೀರಿನ ನಿರ್ವಹಣೆ ಕುರಿತು ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ನವಿತಾ ಮಾಹಿತಿ ನೀಡಿದರು.

ಬಳಸಿ ಎಸೆದ ಪ್ಲಾಸ್ಟಿಕ್‌ ವಸ್ತುಗಳನ್ನು ಒಂದೆಡೆ ಸಂಗ್ರಹಿಸಿ ಅವುಗಳನ್ನು ಮಿಶ್ರಣ ಮಾಡುವ ಯಂತ್ರಗಳಲ್ಲಿ ಹಾಕಿದಾಗ ಸಿಗುವ ಮಿಶ್ರಣವನ್ನು ರಸ್ತೆ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಬಹುದು. ಈ ರಸ್ತೆಯು ದೀರ್ಘ ವರ್ಷಗಳವರೆಗೆ ಬಾಳ್ವಿಕೆ ಬರುತ್ತದೆ ಎಂದು ವಿದ್ಯಾರ್ಥಿಗಳಾದ ಟಿ.ಯು.ಲಿಖಿತಾ, ನವಿತಾ ಹೇಳಿದರು.

ಗ್ರಂಥಾಲಯಗಳಿಗೆ ಕಂಪ್ಯೂಟರ್ ಸ್ಪರ್ಶ ನೀಡಿದರೆ ಪುಸ್ತಕಗಳ ಮಾಹಿತಿ, ಕಪಾಟುಗಳ ಮಾಹಿತಿ ಒಂದೇ ಕಡೆ ಸಿಗುತ್ತದೆ. ಇದರಿಂದ ಓದುಗರಿಗೆ ಹೆಚ್ಚು ಅನುಕೂಲ ಆಗುತ್ತಿದ್ದು, ಈ ತಂತ್ರಜ್ಞಾನವನ್ನು ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಳಸಿಕೊಳ್ಳಲಾಗಿದೆ. ಪುಸ್ತಕಗಳ ಮಾಹಿತಿ ಕಂಪ್ಯೂಟರ್‌ನಲ್ಲೇ (ದಿ ಲೈಬ್ರರಿಯನ್‌) ಲಭ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳಾದ ಸೋನಿಯಾ, ಶರೀನ್‌ ಅವರು ಮಾರ್ಗದರ್ಶಕ ಎಲಿಯೋಸರ್‌ ವಿಶ್ವಾಸ್‌ ಅವರ ಮೂಲಕ ತಿಳಿಸಿಕೊಟ್ಟರು.

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿ ಗ್ಲುಕೋಸ್‌ ಹೆಚ್ಚಿಸಿಕೊಳ್ಳುವ, ಸಕ್ಕರೆ ಅಂಶದ ಬಗ್ಗೆ ಮಾಹಿತಿಯನ್ನು ಮೈಸೂರಿನ ಮಹಾರಾಣಿ ಕಾಲೇಜಿನ ಆರ್‌.ಸ್ನೇಹಾ, ಎಂ.ವೈಷ್ಣವಿ ನೀಡಿದರು. ನೀರು ಶುದ್ಧೀಕರಿಸುವ, ಶುದ್ಧ ಕುಡಿಯುವ ನೀರನ್ನು ಪಡೆಯುವ ವಿಧಾನದ ಬಗ್ಗೆ ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿ.ಕುಮಾರಿ, ಎನ್‌.ನವೀನ್‌ ಮಾಹಿತಿ ನೀಡಿದರು.

ಕೊಳವೆ ಬಾವಿ, ಕೆರೆ, ಕಟ್ಟೆಗಳಿಂದ ನೀರನ್ನು ಬಳಸಿಕೊಳ್ಳಲು ಸೋಲಾರ್‌ ಮೂಲಕ ಯಂತ್ರಗಳ ಬಳಕೆ, ಬೆಳೆ ಒಣಗಿದಾಗ ಸ್ವಯಂಚಾಲಿತ ಯಂತ್ರಗಳ ಬಗ್ಗೆ ಮಂಡ್ಯ ವಿವಿಯ ಸೌಮ್ಯಾ, ಚೇತನ್‌ ಅವರ ಆವಿಷ್ಕಾರ ವಿದ್ಯಾರ್ಥಿಗಳ ಮನಸೂರೆಗೊಂಡಿತು.

ಸೈನ್ಯದಲ್ಲಿ, ಗ್ರಹಗಳಲ್ಲಿ ನಡೆಸುವ ಶೋಧನೆ ಸೇರಿದಂತೆ ವಿವಿಧ ಮಾದರಿಯಲ್ಲಿ ಕಾಪಾಡುವ ರೋವರ್‌ ಬಳಕೆ, ನಿದ್ದೆ ನಿಯಂತ್ರಿಸುವ ಯಂತ್ರ, ಬಾಹ್ಯಾಕಾಶಗಳಲ್ಲಿನ ಹುಡುಕಾಟಕ್ಕೆ ಸಹಾಯ ಮಾಡುವ ರೊಬೊ ಸಿಸ್ಟಮ್‌ ಯಂತ್ರಗಳ ಮಾಹಿತಿಗಳನ್ನು ವಿದ್ಯಾರ್ಥಿಗಳು ತಿಳಿಸಿಕೊಟ್ಟರು.

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಕುಲಸಚಿವ ಡಾ.ನಾಗರಾಜ್‌ ಜಿ.ಚೊಳ್ಳಿ, ಕುಲಪತಿ ಡಾ.ಪುಟ್ಟರಾಜು, ಸಿ.ಕೃಷ್ಣೇಗೌಡ, ಪ್ರಾಂಶುಪಾಲ ಡಾ.ರವಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು