ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಂದ ಸುರಕ್ಷತೆ, ನಿರ್ಭಯ ವಾತಾವರಣ

ಹುತಾತ್ಮ ದಿನಾಚರಣೆ: ಪ್ರಧಾನ ಜಿಲ್ಲಾ–ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಅಭಿಮತ
Last Updated 21 ಅಕ್ಟೋಬರ್ 2020, 13:48 IST
ಅಕ್ಷರ ಗಾತ್ರ

ಮಂಡ್ಯ: ‘ಪ್ರತಿದಿನ ನಿರ್ಭಯವಾಗಿ, ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಪೊಲೀಸರು ಮತ್ತು ಯೋಧರ ಅವಿರತ ಸೇವೆಯೇ ಕಾರಣವಾಗಿದೆ. ಯೋಧರು, ಪೊಲೀಸರ ಕುಟುಂಬವನ್ನು ಗೌರವಿಸಬೇಕು, ಬೆಂಬಲ ನೀಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಹೇಳಿದರು.

ಪೊಲೀಸ್‌ ಇಲಾಖೆ ವತಿಯಿಂದ ಬುಧವಾರ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪರೇಡ್‌ ಮೈದಾನದಲ್ಲಿ ನಡೆದ ಪೊಲೀಸ್‌ ಹುತಾತ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪೊಲೀಸರು, ಯೋಧರು ತಮ್ಮ ಕುಟುಂಬವನ್ನು ತೊರೆದು ಮಳೆ, ಬಿಸಿಲು, ಚಳಿ ಎನ್ನದೆ ದೇಶವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ವೈರಿಗಳನ್ನು ಮಟ್ಟ ಹಾಕಲು ಹೋರಾಡುತ್ತಾರೆ. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಜೀವವನ್ನು ಲೆಕ್ಕಿಸದೆ ಪೊಲೀಸರು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಪೊಲೀಸರ ಪಾತ್ರ ಬಹಳ ಮುಖ್ಯವಾದುದು’ ಎಂದರು.

‘ಅ.21 ರಂದು 1959ರಲ್ಲಿ ಚೀನಾ ಗಡಿ ಭಾಗದಲ್ಲಿ ಕರಣ್ ಸಿಂಗ್ ಎನ್ನುವವರು ತಮ್ಮ ತಂಡದೊಂದಿಗೆ ಹುತಾತ್ಮ ರಾದರು. ಇವರ ಸ್ಮರಣಾರ್ಥವಾಗಿ ದೇಶಾದಾದ್ಯಂತ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದಲ್ಲದೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ಅಧಿಕಾರಿಗಳು ಮತ್ತು ಸೈನಿಕ ಅಧಿಕಾರಿಗಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅವರ ನೆನಪುಗಳು ಚಿರಕಾಲವಿರಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ ‘ಗಡಿಯಲ್ಲಿರುವ ಸೈನಿಕರು ಶತ್ರುಗಳಿಂದ ದೇಶವನ್ನು ರಕ್ಷಣೆ ಮಾಡಿದರೆ ಪೊಲೀಸರು ದೇಶದಲ್ಲಿ ಇರುವ ಶತ್ರುಗಳಿಂದ ದಿನದ 24 ಗಂಟೆಯೂ ಕೆಲಸ ಮಾಡುತ್ತಾರೆ. ಮಳೆ, ಚಳಿಯನ್ನು ಲೆಕ್ಕಿಸದೆ ರಕ್ಷಣೆ ಮಾಡುತ್ತಿದ್ದಾರೆ. ದೇಶದ ಒಳಗಿನ ಭಯೋತ್ಪಾದನೆ, ನಕ್ಸಲರು, ಡಕಾಯಿತಿ ಮಾಡುವವರ ವಿರುದ್ಧ ಹೋರಾಟ ಮಾಡುವುದು ಸುಲಭದ ಕೆಲಸವಲ್ಲ. ಅವುಗಳನ್ನು ನಿಗ್ರಹಿಸಲು ಹಲವಾರು ಪೊಲೀಸರು ಹುತಾತ್ಮರಾಗಿದ್ದಾರೆ’ ಎಂದು ಹೇಳಿದರು.

ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಕಪ್ಪು ಪಟ್ಟಿ ಧರಿಸುವ ಮೂಲಕ ನಿಧನರಾದ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿ.ಧನಂಜಯ್‌ ಇದ್ದರು.

264 ಪೊಲೀಸ್‌ ಸಿಬ್ಬಂದಿ ಹುತಾತ್ಮ

‘ಕರ್ನಾಟಕದಲ್ಲಿ ಪ್ರಸಕ್ತ ವರ್ಷದಲ್ಲಿ 17 ಪೊಲೀಸ್‌ ಸಿಬ್ಬಂದಿ ಸೇರಿದಂತೆ ದೇಶದಲ್ಲಿ 264 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದರು.

‘ಕೊರೊನಾ ಕರ್ತವ್ಯದಲ್ಲಿ ನಿರತರಾಗಿದ್ದ 80 ಮಂದಿ ಪೊಲೀಸರು ರಾಜ್ಯದಲ್ಲಿ ಹುತಾತ್ಮರಾಗಿದ್ದಾರೆ. ಜಿಲ್ಲೆಯಲ್ಲಿ ಒಬ್ಬರು ಕೊರೊನಾದಿಂದ ನಿಧನರಾಗಿದ್ದಾರೆ. ಸಮಾಜದಲ್ಲಿ ಏನೇ ಆದರೂ ಪೊಲೀಸರ ಸೇವೆ ನಿರಂತವಾಗಿರುತ್ತದೆ. ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಿದರೆ ಸಮಾಜಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT