ಸೋಮವಾರ, ಫೆಬ್ರವರಿ 24, 2020
19 °C
ಮಾರ್ಗದರ್ಶಿ ಬ್ಯಾಂಕ್‌ ಮುಂದೆ ಕೃಷಿ ಕೂಲಿಕಾರರ ಪ್ರತಿಭಟನೆ, ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಭದ್ರತಾ ರಹಿತ ಸಾಲ ಕೊಡಿ, ಕನ್ನಡ ಮಾತನಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಬಡವರು, ಕೃಷಿ ಕೂಲಿಕಾರರಿಗೆ ₹2ಲಕ್ಷದ ವರೆಗೆ ಭದ್ರತಾರಹಿತ, ಸಬ್ಸಿಡಿ ಸಹಿತ ಸಾಲ ನೀಡಬೇಕು, ಬ್ಯಾಂಕ್‌ ಅಧಿಕಾರಿಗಳು ಕನ್ನಡದಲ್ಲಿ ವ್ಯವಹರಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ನಗರದ ಮಾರ್ಗದರ್ಶಿ ಬ್ಯಾಂಕ್‌ ಎದುರು ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಹೊರಟ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು. ಆರ್‌ಬಿಐ ನೀತಿ ಅನ್ವಯ ಎಲ್ಲಾ ಬ್ಯಾಂಕ್‌ಗಳು ಹಾಗೂ ಅಭಿವೃದ್ಧಿ ನಿಗಮಗಳು ₹2ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡಬೇಕು, ಬ್ಯಾಂಕ್‌ ವ್ಯಾಪ್ತಿಯಲ್ಲಿನ ಹಳ್ಳಿಗಳು, ಪಟ್ಟಣಗಳ ವಾರ್ಡ್‌ಗಳನ್ನು ಬ್ಯಾಂಕ್‌ ನೋಟಿಸ್‌ ಬೋರ್ಡ್‌ನಲ್ಲಿ ವಾರದೊಳಗೆ ಅಂಟಿಸಬೇಕು. ಈಗಾಗಲೇ ಕೂಲಿಕಾರರಿಗೆ ಒಂದು ಕಂತು ಸಾಲ ನೀಡಿದ್ದು, ಉಳಿದವರಿಗೆ ಸಾಲ ನೀಡದೆ ತೊಂದರೆ ನೀಡಲಾಗುತ್ತಿದೆ. ಕೂಡಲೇ ಸಾಲ ನೀಡಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಸಬ್ಸಿಡಿ ಹೆಸರಿನಲ್ಲಿ ಸಾಲ ನೀಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ. ಮೊದಲು ಸಾಲ ನೀಡಿ ನಂತರ ಸಬ್ಸಿಡಿ ಜಮಾ ಮಾಡಬೇಕು. ಹಣಕಾಸು ವ್ಯವಹಾರ ಮುಗಿದ ನಂತರ ಬ್ಯಾಂಕ್‌ ವ್ಯವಹಾರವೇ ಮುಗಿಯಿತು ಎಂದು ಬ್ಯಾಂಕ್‌ಗಳ ಬಾಗಿಲು ಬಂದ್‌ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಿ ಬ್ಯಾಂಕ್‌ಗಳಲ್ಲಿ ಹಣಕಾಸು ವ್ಯವಹಾರ ಮತ್ತು ಬ್ಯಾಂಕಿಂಗ್‌ ವ್ಯವಹಾರ ಎಂದು ವಿಂಗಡಿಸಿ ಸಂಜೆ 5.30ರವರೆಗೆ ಬ್ಯಾಂಕ್‌ ವ್ಯವಹಾರ ನಡೆಸಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್‌ ಕೌಂಟರ್‌ ಮುಂದೆ ಹಣ ಕಟ್ಟಲು ಮತ್ತು ಪಡೆಯಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಅದನ್ನು ತಪ್ಪಿಸಲು ಹೆಚ್ಚುವರಿ ಕೌಂಟರ್‌ ತೆರೆಯಬೇಕು. ಪ್ರತಿ ಬ್ಯಾಂಕ್‌ಗಳಲ್ಲಿ ಬ್ಯಾಂಕಿಂಗ್‌ ನಿಯಮ, ಸೌಲಭ್ಯಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸಬೇಕು. ಜನರೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಸಾರ್ವಜನಿಕರು, ರೈತರು, ಕೃಷಿ ಕೂಲಿಕಾರರಿಗೆ ಸಿಗುವ ಸೌಲಭ್ಯಗಳ ವಿವರವನ್ನು ನೋಟಿಸ್‌ ಬೋರ್ಡ್‌ನಲ್ಲಿ ಅಂಟಿಸಬೇಕು ಎಂದು ಒತ್ತಾಯಿಸಿದರು.

ಸಾಲಕ್ಕಾಗಿ ಬಾಕಿ ಇಲ್ಲದ ಪ್ರಮಾಣಪತ್ರ (ನೋ ಡ್ಯೂ ಸೆರ್ಟಿಫಿಕೇಟ್‌) ಪಡೆಯಲು ಒಂದು ಬ್ಯಾಂಕ್‌ನಿಂದ, ಇನ್ನೊಂದು ಬ್ಯಾಂಕ್‌ಗೆ ಅಲೆಯುವುದನ್ನು ತಪ್ಪಿಸಿ, ಸಾಲ ನೀಡುವ ಬ್ಯಾಂಕ್‌ಗಳೇ ಆನ್‌ಲೈನ್‌ ಮೂಲಕ ತರಿಸಿಕೊಳ್ಳಬೇಕು. ಇದಕ್ಕಾಗಿ ದುಬಾರಿ ಶುಲ್ಕ ಪಡೆಯುವುದನ್ನು ನಿಲ್ಲಿಸಬೇಕು. ಬ್ಯಾಂಕ್‌ಗಳು ತಮ್ಮ ಸೇವಾ ಗಡಿಯೊಳಗೆ ಮೂರು ತಿಂಗಳಿಗೊಮ್ಮೆ ಗ್ರಾಹಕರು, ಸಾರ್ವಜನಿಕರು, ಬ್ಯಾಂಕ್‌ ಅಧಿಕಾರಿಗಳ ಅದಾಲತ್‌ ನಡೆಸಬೇಕು. ಪಿಎಂಎಜಿಪಿ, ಮುದ್ರಾ, ಸಿಎಂಎಜಿಪಿ, ಅಭಿವೃದ್ಧಿ ನಿಗಮಗಳಲ್ಲಿ ಸಾಲ ನೀಡಲು ಅರ್ಜಿ ಸಲ್ಲಿಸಿದ ನಿರುದ್ಯೋಗಿಗಳಿಗೆ ಸಾಲ ನೀಡಬೇಕು. ಜನಪ್ರತಿನಿಧಿಗಳ ಶಿಫಾರಸು, ಹಸ್ತಕ್ಷೇಪ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸ್ವಸಹಾಯ ಸಂಘ, ಸಹಕಾರ ಬ್ಯಾಂಕ್‌ಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಹಿಂದಿನಂತೆ ನೇರ ಸಾಲ ನೀಡಬೇಕು. ಜನ್‌ಧನ್‌ ಖಾತೆಗಳ ಮೂಲಕ ವಿಮಾ ಸೌಲಭ್ಯ ನೀಡಿ ಹಣ ಕಟ್ಟಲಿಲ್ಲ ಎಂದು ಯಾವುದೇ ನೋಟಿಸ್‌ ನೀಡದೆ ರದ್ದು ಮಾಡುತ್ತಿರುವ ವಿಮಾ ಸೌಲಭ್ಯಗಳನ್ನು ಕೂಡಲೇ ಮುಂದುವರಿಸಬೇಕು, ಬ್ಯಾಂಕ್‌ ಮುಖ್ಯಸ್ಥರು ಮತ್ತು ಸಂಘದ ಮುಖಂಡರ ಜೊತೆ ಜಂಟಿ ಸಮಿತಿ ಸಭೆ ಜಿಲ್ಲೆಯ ಅಭಿವೃದ್ಧಿಗೆ ಮಾರ್ಗೋಪಾಯ ರೂಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್‌, ಉಪಾಧ್ಯಕ್ಷ ಕೆ.ಬಸವರಾಜು. ಪದಾಧಿಕಾರಿಗಳಾದ ಬಿ.ಎಂ. ಶಿವಮಲ್ಲುಯ್ಯ, ಎನ್‌. ಸುರೇಂದ್ರ, ಕೆ.ಹನುಮೇಗೌಡ, ಅನಿತಾ, ಎಚ್‌.ಸಿ.ರಾಜೀವ್‌, ಆರ್‌.ರಾಜು, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಗೋವಿಂದ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು