ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲು ಸ್ವಾಧೀನವಿಲ್ಲದಿದ್ದರೂ ಸ್ವಾವಲಂಬಿ

ಅಂಗ ವೈಕಲ್ಯದ ನಡುವೆಯೂ ಸಾರ್ಥಕ ಬದುಕು, ಮಾದರಿಯಾದ ಆತ್ಮವಿಶ್ವಾಸ
Last Updated 3 ಡಿಸೆಂಬರ್ 2021, 4:53 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಸರ್ವಾಂಗ ಸದೃಢರು ದುಡಿಮೆಯಿಂದ ವಿಮುಖರಾಗುತ್ತಿದ್ದಾರೆ ಎಂಬ ಅಪವಾದದ ನಡುವೆ ತಾಲ್ಲೂಕಿನ ನೆಲಮನೆ ಗ್ರಾಮದ ಶ್ರೀನಿವಾಸ್‌ ತಮ್ಮೆರಡು ಕಾಲುಗಳು ಸ್ವಾಧೀನ ಇಲ್ಲದಿದ್ದರೂ ದಿನ ದಿನವೂ ದುಡಿದು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ.

ಗ್ರಾಮದ ಕೃಷ್ಣೇಗೌಡ ಅವರ ಮಗ ಶ್ರೀನಿವಾಸ್‌ ಅವರ ಎರಡೂ ಕಾಲುಗಳು ನಿಸ್ತೇಜವಾಗಿವೆ. ನಿಲ್ಲಲು ಅವರಿಗೆ ಲವಲೇಶವೂ ಶಕ್ತಿ ಇಲ್ಲ. ಹಾಗಂತ ಸುಮ್ಮನೆ ಕೂತಿಲ್ಲ. ಕುಳಿತೇ ಮಾಡುವ ಕೆಲಸಗಳನ್ನು ಜತನದಿಂದ ಮಾಡುತ್ತಾ ಕಾಸು ಸಂಪಾದಿಸಿ ಕುಟುಂಬದವರಿಗೆ ಹೊರೆಯಾಗದಂತೆ ಬದುಕುತ್ತಿದ್ದಾರೆ. ಮೇಕೆ ಸಾಕುವುದು, ಹೂ ಕೀಳುವುದು, ಹುಲ್ಲು ಕೊಯ್ಯುವುದು, ರಾಸುಗಳ ಮೈ ತೊಳೆದು ಅವುಗಳಿಗೆ ಮೇವು ಹಾಕುವ ಕಾಯಕವನ್ನು ನಿತ್ಯವೂ ಮಾಡುತ್ತಾರೆ.

‘ನಾನು ಮಗುವಾಗಿದ್ದಾಗ ಬೆನ್ನಿನಲ್ಲಿ ಗಂಟು ಇತ್ತಂತೆ. ಅದನ್ನು ತೆಗೆಸಲು ಶಸ್ತ್ರಚಿಕಿತ್ಸೆ ಮಾಡಿಸಿದ ಬಳಿಕ ಕಾಲುಗಳ ಸ್ವಾಧೀನ ತಪ್ಪಿದವು. 10 ವರ್ಷ ತುಂಬಿದ ಬಳಿಕ ಕೈಲಾದ ಕೆಲಸ ಮಾಡಲಾರಂಭಿಸಿದೆ. ಈ ಮೊದಲು ಮೇಕೆಗಳನ್ನು ಸಾಕಣೆ ಮಾಡುತ್ತಿದ್ದೆ. ಸದ್ಯ ಹೂ ಗಿಡಗಳನ್ನು ನೆಟ್ಟು ಅದರಿಂದ ಒಂದಷ್ಟು ಕಾಸು ಸಂಪಾದಿಸುತ್ತಿದ್ದೇನೆ. ಗದ್ದೆಯಲ್ಲಿ ಹುಲ್ಲು ಕೊಯ್ದು ಮೂರು ಚಕ್ರದ ಸ್ಕೂಟರ್‌ನಲ್ಲಿ ತಂದು ಮನೆಯವರಿಗೆ ನೆರವಾಗುತ್ತಿದ್ದೇನೆ’ ಎಂದು ಎಸ್ಸೆಸ್ಸೆಲ್ಸಿ ವರೆಗೆ ಓದಿರುವ 27 ವರ್ಷದ ಶ್ರೀನಿವಾಸ್‌ ಹೇಳಿದರು.
********

ಎಸ್‌ಟಿಡಿ ಬಾಬಣ್ಣ ಎಂದರೆ ಪ್ರೀತಿ, ವಾತ್ಸಲ್ಯ

ಬಲ್ಲೇನಹಳ್ಳಿ ಮಂಜುನಾಥ್‌ ಕೆ.ಆರ್.ಪೇಟೆ: ಸಾಧಿಸಬೇಕೆಂಬ ಛಲವೊಂದಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಪಟ್ಟಣದ ಶ್ರವಣಬೆಳಗೊಳ ರಸ್ತೆಯ ನಿವಾಸಿ ಮಿನಿವಿದಾನಸೌಧದ ಬಳಿ ಪತ್ರ ಬರಹಗಾರರಾಗಿ ನಗುಮುಖದ ಸೇವೆ ನೀಡುವ ಕೆ.ಎಸ್.ಬಸವರಾಜು (ಎಸ್‌ಟಿಡಿ ಬಾಬಣ್ಣ) ಒಂದು ನಿದರ್ಶನ

ಬಾಲ್ಯದಲ್ಲಿಯೇ ಪೋಲಿಯೊ ಪೀಡಿತರಾಗಿ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಆದರೂ ಅವರು ಮತ್ತೊಬ್ಬರ ನೆರವಿಲ್ಲದೆ ಸ್ವತಂತ್ರವಾಗಿ ಓಡಾಡಲಾಗದವರು. ತ್ರಿಚಕ್ರದ ಗಾಡಿಯಿದ್ದರೆ ಮಾತ್ರ ಅವರ ಪ್ರಯಾಣ, ಇಲ್ಲದಿದ್ದರೆ ಮನೆಯಲ್ಲೇ ಏಕಾಂತ! ಆದರೆ ಅವರಲ್ಲಿದ್ದ ಅದಮ್ಯ ಉತ್ಸಾಹ ಒಂಟಿಯಾಗಿ ಕೂರುವಂತೆ ಮಾಡಲಿಲ್ಲ.

ಕುಟುಂಬದ ಸಂಕಷ್ಟದ ನಡುವೆಯೂ ಪಿಯುಸಿವರೆವಿಗೆ ಕುಂಟುತ್ತಲೇ ಹೋಗಿ ಕಲಿತರು. ನಂತರ ಸರ್ಕಾರಿ ಉದ್ಯೋಗಕ್ಕೆ ಕಾಯದೆ ಪಟ್ಟಣದ ಎಸ್.ಬಿ.ಎಂ. ಬಳಿ ಮೊಬೈಲ್ ಇಲ್ಲದ ಕಾಲದಲ್ಲಿ ಎಸ್.ಟಿ.ಡಿ ಬೂತ್ ಆರಂಭಿಸಿದರು. ಮೊದಲ ಬಾರಿಗೆ ಫ್ಯಾಕ್ಸ್‌ ಯಂತ್ರ ತಂದು ಪತ್ರಿಕಾ ವರದಿಗಾರರಿಗೆ ಸುದ್ದಿ ಕಳುಹಿಸಲು ನೆರವಾದರು. ಕಡಿಮೆ ದರದಲ್ಲಿ ಟೆಲಿಪೋನ್ ಬೂತ್ ಸೇವೆ ನೀಡಿದರು. ಹೀಗಾಗಿ ಮೊಬೈಲ್ ಇಲ್ಲದ ಕಾಲದಲ್ಲಿ ಎಸ್‌ಟಿಡಿ ಬೂತ್‌ ಬಾಬಣ್ಣ ಎಂದೇ ತಾಲ್ಲೂಕಿನಾದ್ಯಂತ ಅವರು ಹೆಸರು ಮಾಡಿದ್ದರು. ಮೊಬೈಲ್‌ಗಳು ಹೆಚ್ಚಾದ ನಂತರ ಡಿ.ಟಿ.ಪಿ ಮಾಡುವದನ್ನು ಕಲಿತು ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಪತ್ರ ಬರಹಗಾರರಾಗಿ ಸೇವೆ ಆರಂಭಿಸಿದರು. ನೂರಾರು ಜನರಿಗೆ ಸರ್ಕಾರಿ ಪತ್ರಗಳನ್ನು ಬರೆದುಕೊಡುವ ಕೆಲಸ ಮಾಡುತ್ತಿರುವ ಅವರು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ.

‘ಕಡಿಮೆ ದರದಲ್ಲಿ ಗುಣಮಟ್ಟದ ಸೇವೆ ನೀಡುವದೇ ನನ್ನ ಗುರಿ, ನನ್ನ ತಾಲ್ಲೂಕಿನ ಜನ ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದಾರೆ. ಎಸ್.ಟಿ.ಡಿ ಬೂತ್ ಇದ್ದಾಗ ಅವರ ನೋವುಗಳನ್ನು ಹೇಳಿಕೊಳ್ಳಲು ನೆರವಾಗಿದ್ದೆ, ಈಗ ಅವರ ಸಂಕಷ್ಟಗಳಿಗೆ ಪತ್ರ ಬರೆಯುವ ಕೆಲಸ ಮಾಡುತಿದ್ದೇನೆ’ ಎನ್ನುತ್ತಾರೆ ಬಾಬಣ್ಣ. ತಾಲ್ಲೂಕಿ ಜನ ಅವರ ಅಂಗಡಿಯ ಬಳಿ ಕಾದು ಕುಳಿತು ತಮ್ಮ ಪತ್ರ ಬರಹದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲ ತಮ್ಮಂತೆ ಅಂಗವಿಕಲತೆಯ ನೋವನ್ನು ಅನುಭವಿಸುವವರಿಗೂ ಅವರು ಧ್ವನಿಯಾಗಿ ಕೆಲಸಮಾಡುತಿದ್ದಾರೆ. ಎಸ್‌ಟಿಡಿ ಬಾಬಣ್ಣ ಎಂದರೆ ಪ್ರೀತಿ, ವಾತ್ಸಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ.

******

ಅಂಗವಿಕಲರ ಸ್ವಸಹಾಯ ಸಂಘಕ್ಕೆ ಜೀವ

ಬಿ.ಎ. ಮಧುಕುಮಾರ

ಕೊಪ್ಪ: 22ನೇ ವಯಸ್ಸಿನಲ್ಲಿ ತೆಂಗಿನ ಮರದಿಂದ ಬಿದ್ದು ಬೆನ್ನು ಮೂಳೆ ಮುರಿದು ಶೇ 80 ರಷ್ಟು ಅಂಗಲವಿಕಲರಾಗಿ ಹಾಸಿಗೆ ಹಿಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಕೋಣಸಾಲೆ ಗ್ರಾಮದ ಅನಂತಕುಮಾರ್‌ ಈಗ ಯಶಸ್ವಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಗ್ರಾಮದಲ್ಲಿ ಅಂಗವಿಕಲರ ಸ್ವ ಸಹಾಯ ಸಂಘ ಮಾಡಿ ಸರ್ಕಾರದ ಸೌಲಭ್ಯಗಳನ್ನು ಇತರರಿಗೂ ಕೊಡಿಸುವ ಮೂಲಕ ಮಾದರಿಯಾಗಿದ್ದಾರೆ.

‘ಹಾಸಿಗೆ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಗ ನನಗೆ ಮದ್ದೂರು ರಮಣ ಮಹರ್ಷಿ ಅಂಧರ ಪರಿಷತ್ ನಿಂದ ಆತ್ಮಸ್ಥೈರ್ಯ ತುಂಬಿ, ಸರಳ ವ್ಯಾಯಮಗಳನ್ನು ಹೇಳಿಕೊಟ್ಟರು. ಸರ್ಕಾರ ಸೌಲಭ್ಯಗಳನ್ನು ಕೊಡಿಸಿ ಧೈರ್ಯ ತುಂಬಿದರು. ಗ್ರಾಮದಲ್ಲಿ ಅಂಗವಿಕಲರ ಸ್ವ ಸಹಾಯ ಸಂಘ ಮಾಡಿ ಆಧಾರ, ದೇವರಾಜು ಅರಸು, ಅಂಬೇಡ್ಕರ್ ಸೇರಿದಂತೆ ಇತರ ನಿಗಮಗಗಳಲ್ಲಿ ಅಂಗವಿಕಲರಿಗೆ ದೊರೆಯುವ ಸಾಲ ಸೌಲಭ್ಯ, ಹೊಲಿಗೆ ಯಂತ್ರ, ತ್ರಿ ಚಕ್ರವಾಹನ ಸೇರಿದಂತೆ ಇತರ ಸೌಲಭ್ಯಗಳನ್ನು ನಿರಂತರವಾಗಿ ಕೊಡಿಸುತ್ತಿದ್ದೇನೆ’ ಎನ್ನುತ್ತಾರೆ ಅನಂತ ಕುಮಾರ.

ಅವರು ಕೋಣಸಾಲೆ ಗ್ರಾಮದಲ್ಲಿ ಪುಟ್ಟ ಪೆಟ್ಟಿ ಅಂಗಡಿ ಇಟ್ಟುಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಹಸು, ಮೇಕೆಗಳನ್ನು ಮೂರು ಚಕ್ರದ ಗಾಡಿಗೆ ಕಟ್ಟಿಕೊಂಡು ಮೇಯಿಸುತ್ತಾರೆ. ಮನೆಯವರಿಗೆ ಹೈನುಗಾರಿಕೆಯಲ್ಲಿ ಮತ್ತು ಕುಟುಂಬದ ಆರ್ಥಿಕತೆಗೆ ಸಹಾಯವಾಗುವಂತೆ ದುಡಿಯುತ್ತಾರೆ.

‘ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಅನಂತಕುಮಾರ ಅವರಿಗೆ ನಿರಂತರವಾಗಿ ಆತ್ಮಸ್ಥೈರ್ಯ ತುಂಬಿ, ಅಂಗವಿಕಲ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಪ್ರಸ್ತುತ ಸ್ವಾವಲಂಬಿಯ ಜತೆಗೆ ಇತರರ ಸಹಾಯಕ್ಕೆ ನೆರವಾಗಿದ್ದಾರೆ. ಬೆನ್ನುವುರಿ ಅಪಘಾತ ಸಂಭವಿಸಿದವರು ಚೇತರಿಸಿಕೊಳ್ಳುವುದೇ ಕಷ್ಟ, ಅನಂತ ಕುಮಾರ ಅಂಗವಿಕಲತೆಯನ್ನು ಮೆಟ್ಟಿ ನಿಂತಿದ್ದಾರೆ’ ಎನ್ನುತ್ತಾರೆ ರಮಣ ಮಹರ್ಷಿ ಅಂಧರ ಪರಿಷತ್ ತಾಲ್ಲೂಕು ಸಂಯೋಜಕ ಮಹಾಂತೇಶ್ ಹಿರೇಮಠ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT