ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕಲ್ಲು ಗಣಿಗೆ ನಾಶವಾದ ಸಾಲು ಬೆಟ್ಟಗಳು

ಮಹದೇಶ್ವರ– ಸಿದ್ದೇಶ್ವರ ದೇವಾಲಯಗಳಿಂದಾಗಿ ಉಳಿದ ಒಂದೇ ಒಂದು ಬೆಟ್ಟ
Last Updated 4 ಮಾರ್ಚ್ 2021, 4:30 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದ ಆಸುಪಾಸಿನಲ್ಲಿದ್ದ ಸಾಲು ಬೆಟ್ಟಗಳು ಅಕ್ರಮ ಕಲ್ಲು ಗಣಿಗಾರಿ ಕೆಯಿಂದ ನಾಶವಾಗಿವೆ. ಸಿದ್ದೇಶ್ವರ–ಮಹದೇಶ್ವರ ಗುಡಿ ಇರುವ ಒಂದೇ ಒಂದು ಬೆಟ್ಟ ಈಗ ಉಳಿದಿದ್ದು, ಸಾಲು ಬೆಟ್ಟಗಳು ಕಂದಕಗಳಾಗಿ ಮಾರ್ಪಟ್ಟಿವೆ.

ಬೇಬಿಬೆಟ್ಟ ಎಂದರೆ ಕೇವಲ ಒಂದು ಬೆಟ್ಟವಲ್ಲ; ಅವು ಬೆಟ್ಟಗಳ ಸಾಲು. ಪಾಂಡವರು ವನವಾಸ ಕಾಲದಲ್ಲಿ ಅಲ್ಲಿ ಓಡಾಡಿದ್ದರು ಎಂಬ ಪ್ರತೀತಿ ಇದೆ. ಬೇಬಿಬೆಟ್ಟಕ್ಕೆ ಹೊಂದಿಕೊಂಡಂತೆ ಹತ್ತಾರು ಬೆಟ್ಟ–ಗುಡ್ಡಗಳಿದ್ದವು. ಇವೆ ಲ್ಲವೂ ಗಣಿ ಯಂತ್ರಗಳ ಬಾಯಿಗೆ ತುತ್ತಾಗಿದ್ದು ಗುಹೆಯಂತಾಗಿವೆ.

ಬೆಟ್ಟದ ಕೆಳಗೆ ಮಹದೇಶ್ವರ ಗುಡಿ, ಮೇಲ್ಭಾಗದಲ್ಲಿ ಸಿದ್ದೇಶ್ವರ ದೇವಾಲಯವಿದ್ದು ಗಣಿ ಮಾಲೀಕರು ಇದನ್ನು ಮುಟ್ಟಲು ಸಾಧ್ಯವಾಗಿಲ್ಲ. ಪ್ರತಿವರ್ಷ ಜಾತ್ರೆ, ಪೂಜೆ ನಡೆ ಯುವ ಕಾರಣ ಗಣಿ ಮಾಲೀಕರು ಆ ಬೆಟ್ಟಕ್ಕೆ ಕೈಹಾಕಿಲ್ಲ. ಬೆಟ್ಟದ ತಪ್ಪಲಲ್ಲಿ ಶ್ರೀರಾಮ ಯೋಗೀಶ್ವರ ಮಠ ಇದೆ. ಗಣಿಗಳ ಹಾವಳಿಯಿಂದ ಮಠದ ದಾಸೋಹ ಭವನದ ಚಾವಣಿ ಹಾರಿ ಹೋಗಿದೆ. ಗೋಡೆಗಳು ಬಿರುಕುಬಿಟ್ಟಿವೆ.

ಕಲ್ಲು ಗಣಿಗಳ ದೂಳು, ಸದ್ದು, ಸ್ಫೋಟದಿಂದಾಗಿ, ಮಠದ ವತಿಯಿಂದ ಇಲ್ಲಿ ನಡೆಯುತ್ತಿದ್ದ ಪ್ರೌಢಶಾಲೆ ಬಂದ್‌ ಆಗಿದೆ. ಅದೇ ಕಟ್ಟಡದಲ್ಲಿ ನಂತರ ಆರಂಭವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಸ್ಥಳಾಂತರ ಗೊಂಡಿದೆ. ಈಗ ಶಾಲಾ ಕಟ್ಟಡ ಪಾಳುಬಿದ್ದಿದೆ.

‘ಗಣಿ ಮಾಲೀಕರು ದೇವಾಲಯ ಗಳಿರುವ ಬೆಟ್ಟಕ್ಕೂ ಕೈ ಹಾಕಿದ್ದರು, ಮೆಟ್ಟಿಲುಗಳನ್ನು ಕಿತ್ತು ಹಾಕಿದ್ದರು. ಆದರೆ ದಿವಂಗತ ಸದಾಶಿವ ಸ್ವಾಮೀಜಿಯ ಹೋರಾಟದಿಂದಾಗಿ ಆ ಬೆಟ್ಟ ಉಳಿದಿದೆ. ಸ್ವಾಮೀಜಿಯ ಹೋರಾಟಕ್ಕೆ ಸ್ಥಳೀಯರು ಬೆಂಬಲ ನೀಡಲಿಲ್ಲ, ಹೋರಾಟ ನಡೆಸುತ್ತಲೇ ಅವರು ಮೃತಪಟ್ಟರು. ಸ್ಥಳೀಯ ಜನಪ್ರತಿನಿಧಿಗಳು ಗಣಿ ಮಾಲೀಕರಾಗಿದ್ದು ಹೋರಾಟ ಹತ್ತಿಕ್ಕುತ್ತಿದ್ದಾರೆ’ ಎಂದು ಬೇಬಿ ಗ್ರಾಮದ ಲೋಕೇಶ್‌ ತಿಳಿಸಿದರು.

‘ಕ್ರಷರ್‌ ಹಾವಳಿಯಿಂದಾಗಿ, ಭಕ್ತರು ಜಾತ್ರೆ ಹಾಗೂ ಧಾರ್ಮಿಕ ಉತ್ಸವಗಳಿಗಾಗಿ ಮಠಕ್ಕೆ ಬರಲು ಭಯಪಡುತ್ತಾರೆ. ನಮಗೂ ಭಯ ಕಾಡುತ್ತದೆ. ದೇವರ ಮೇಲೆ ಭಾರಿ ಹಾಕಿದ್ದೇವೆ’ ಎಂದು ಈಗಿನ ಸ್ವಾಮೀಜಿ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಬೇಬಿಬೆಟ್ಟ ವ್ಯಾಪ್ತಿಯ ಸರ್ವೆ ನಂಬರ್‌ 1ರಲ್ಲಿ 1,487 ಎಕರೆ, ಸ.ನಂ. 127ರಲ್ಲಿ 301 ಎಕರೆ, ಸ.ನಂ.70ರಲ್ಲಿ 257 ಎಕರೆ ಭೂಮಿ ಕಲ್ಲುಗಣಿಗಾರಿಕೆಗೆ ಒಳಗಾಗಿದೆ. ಜಿಲ್ಲೆಯಾದ್ಯಂತ ಅನುಮತಿ ಪಡೆದ ಗಣಿ ಕಂಪನಿಗಳ ಸಂಖ್ಯೆ ಕೇವಲ 88, ಆದರೆ ಅಕ್ರಮವಾಗಿ ಸಾವಿರಾರು ಕ್ರಷರ್‌ಗಳು ಚಟುವಟಿಕೆ ನಡೆಸಿವೆ.

ಹುಣಸೋಡು ಸ್ಫೋಟ ಪ್ರಕರಣದ ನಂತರ ಬೇಬಿಬೆಟ್ಟ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಗಣಿ ಚಟುವಟಿಕೆ ನಿಷೇಧಿಸಲಾಗಿದೆ. ನಿಷೇಧದ ನಡುವೆಯೂ ರಾತ್ರಿಯ ವೇಳೆ ಬೋರ್ಡರ್ಸ್‌, ಕಲ್ಲು ಕಂಬಗಳ ಸಾಗಣೆ ನಿರಾತಂಕವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘2008ರಿಂದ ಇಲ್ಲಿಯವರೆಗೂ ಬಾಕಿ ಉಳಿದಿರುವ ರಾಜಧನ ಪಾವತಿ ಮಾಡಲು ನೋಟಿಸ್‌ ನೀಡಲಾಗಿದೆ. ಗಣಿ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು ಚಟುವಟಕೆ ನಡೆಸದಂತೆ ಪೊಲೀಸರು ನಿಗಾ ವಹಿಸಿದ್ದಾರೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ ತಿಳಿಸಿದರು.

ಗಣಿ ಮಾಲೀಕರ ಚಿನಕುರಳಿ
‘ಚಿನಕುರಳಿ ಪಟ್ಟಣದ ಬಹುತೇಕ ಕುಟುಂಬಗಳು ಗಣಿ ಚಟುವಟಿಕೆ ನಡೆಸುತ್ತಿವೆ. ಅವರಲ್ಲಿ ಬಹುತೇಕರು ಟಿಪ್ಪರ್‌, ಡಿಗ್ಗರ್‌ ಮಾಲೀಕರೇ ಆಗಿದ್ದಾರೆ. ಸ್ಫೋಟಕಗಳ ವಹಿವಾಟು ನಡೆಸುವವರೂ ಇದ್ದಾರೆ. ಅವರೆಲ್ಲರೂ ಬೇಬಿಬೆಟ್ಟವನ್ನು ಪಿತ್ರಾರ್ಜಿತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಚಿನಕುರಳಿ ಬಳ್ಳಾರಿ ಜಿಲ್ಲೆಯ ಸಂಡೂರು ಆಗಿದೆ’ ಎನ್ನುತ್ತಾರೆ ಬೇಬಿ ಗ್ರಾಮದ ವ್ಯಕ್ತಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT