ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಸ್ಥಳಕ್ಕೆ ಭೇಟಿ ನೀಡದ ಪುರಾತತ್ವ ಇಲಾಖೆ ಅಧಿಕಾರಿಗಳು

ಊಗಿನಹಳ್ಳಿ: ದೇಗುಲದಲ್ಲಿ ಶಾಸನ ಪತ್ತೆ

Published:
Updated:
Prajavani

ಕೆ.ಆರ್.ಪೇಟೆ: ತಾಲ್ಲೂಕಿನ ಊಗಿನಹಳ್ಳಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಈಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕಾಮಗಾರಿ ನಡೆಸಲು ಕಟ್ಟಡಗಳನ್ನು ತೆರವುಗೊಳಿಸುವಾಗ ಶಾಸನವೊಂದು ಪತ್ತೆಯಾಗಿದೆ.

ಬಳಪದ ಕಲ್ಲಿನಲ್ಲಿ ಹಳೆಗನ್ನಡ ಮತ್ತು ಸಂಸ್ಕೃತ ಲಿಪಿ ಒಳಗೊಂಡ ಐದು ಸಾಲುಗಳ ಬರಹ ಇದರಲ್ಲಿದ್ದು, ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ಹಾಗೂ ಶಾಸನತಜ್ಞರಿಗೆ ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ದೇವಸ್ಥಾನವು ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಶಿಥಿಲಾವಸ್ಥೆಯಲ್ಲಿದೆ. ದೇವಸ್ಥಾನದ ಬಳಿ ಉತ್ಖನನ ನಡೆಸಿದರೆ ಇನ್ನಷ್ಟು ಮಾಹಿತಿ ಸಿಗಬಹುದು. ಆದ್ದರಿಂದ ಪುರಾತತ್ವ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಬೇಕು. ಶಾಸನದ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಸಾಹಿತಿ ಊಗಿನಹಳ್ಳಿ ಮಹೇಶ್ ಒತ್ತಾಯಿಸಿದ್ದಾರೆ.

ಗೋವಿಂದನಹಳ್ಳಿಯಲ್ಲಿ ಪಂಚ ಲಿಂಗೇಶ್ವರ ದೇವಸ್ಥಾನವನ್ನು ನಿರ್ಮಿಸಿದ ಶಿಲ್ಪಿಗಳು, ಅಲ್ಲಿ ಉಳಿದಿದ್ದ ಸಾಮಗ್ರಿ ಗಳನ್ನು ಬಳಸಿಕೊಂಡು ಊಗಿನಹಳ್ಳಿ ಯಲ್ಲಿ ಈಶ್ವರ ದೇವಾಲಯ ನಿರ್ಮಿಸಲು ಮುಂದಾಗಿದ್ದರು. ಕೋಳಿ ಕೂಗಿ ಬೆಳಕು ಹರಿಯುವುದರೊಳಗೆ 12 ಕಂಬಗಳ ದೇವಸ್ಥಾನವನ್ನು ನಿರ್ಮಿಸಲು ಹೊರಟಿದ್ದರು. ಆದರೆ, ಅದು ಶಿಲ್ಪಿಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಾಣ ವಾಗಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

Post Comments (+)