ಗುರುವಾರ , ಅಕ್ಟೋಬರ್ 17, 2019
24 °C
ಮಾಹಿತಿ ಫಲಕವೂ ಇಲ್ಲದ ಸ್ಮಾರಕ, ಆವರಣದೊಳಗೆ ಬೆಳೆದಿವೆ ಗರಿಕೆ, ಗಿಡಗಂಟಿಗಳು

ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಶಸ್ತ್ರಾಗಾರ

Published:
Updated:
Prajavani

ಮಂಡ್ಯ: ಎರಡು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ವಿದೇಶಿ ತಂತ್ರಜ್ಞಾನ ಬಳಸಿ ಸ್ಥಳಾಂತರ ಮಾಡಿದ್ದ,  ಶ್ರೀರಂಗಪಟ್ಟಣದಲ್ಲಿನ ಟಿಪ್ಪುಸುಲ್ತಾನ್‌ ಕಾಲದ ಶಸ್ತ್ರಾಗಾರವು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಆವರಣದೊಳಗೆ ಗರಿಕೆ, ಗಿಡ ಗಂಟಿಗಳು ಬೆಳೆದಿದ್ದು, ಸ್ಮಾರಕ ವೀಕ್ಷಣೆಗೆ ಭಯ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಚಾವಣಿ ಯಲ್ಲೂ ಬೇವಿನ ಗಿಡವೊಂದು ಮೂರು ಅಡಿಯಷ್ಟು ಎತ್ತರ ಬೆಳೆದಿದ್ದು, ಕಟ್ಟಡಕ್ಕೆ ಧಕ್ಕೆ ಉಂಟಾಗುವ ಸಂಭವವಿದೆ.

ಮಳೆ ಬಂದರೆ ನೀರು ಹರಿದು ಹೋಗಲು ಸರಿಯಾಗಿ ಕಾಲುವೆ ವ್ಯವಸ್ಥೆ ಮಾಡಿಲ್ಲ. ಕಟ್ಟಡದ ಒಳಗೆ ನೀರು ಇಳಿಯುತ್ತಿದ್ದು, ಅಲ್ಲಲ್ಲಿ ಬಣ್ಣ ಕಿತ್ತು ಬಂದಿದೆ. ಕೋಟಿ ಕೋಟಿ ಖರ್ಚು ಮಾಡಿ ಸ್ಥಳಾಂತರ ಮಾಡಿದ್ದರೂ ಕಟ್ಟಡದ ಬಗೆಗಿನ ಮಾಹಿತಿ ಫಲಕವನ್ನೂ ಅಳವಡಿಸಿಲ್ಲ. ಹೀಗಾಗಿ, ರಾಜರ ಕಾಲದ ಯಾವುದೋ ಹಳೆಯ ಕಟ್ಟಡ ಎಂಬಂತೆ ಭಾಸವಾಗುತ್ತಿದ್ದು, ಆ ಬಗ್ಗೆ ತಿಳಿದವರಷ್ಟೇ ಹುಡುಕಿಕೊಂಡು ಬಂದು ನೋಡುವಂತಾಗಿದೆ.

ಸ್ಮಾರಕದ ಅಂದವನ್ನು ಹೆಚ್ಚಿಸುವ ಕೆಲಸವಾಗಿಲ್ಲ. ಛಾಯಾಚಿತ್ರಗಳನ್ನು ಅಳವಡಿಸಿ ಪ್ರವಾಸಿಗರ ಕುತೂಹಲ ತಣಿಸುವ ಕೆಲಸವನ್ನೂ ಪ್ರಾಚ್ಯವಸ್ತು ಇಲಾಖೆ ಮಾಡಿಲ್ಲ.

ಚೆಲ್ಲಾಪಿಲ್ಲಿಯಾದ ಕಬ್ಬಿಣದ ಸಲಾಕೆಗಳು: ಸ್ಥಳಾಂತರಕ್ಕೆ ಬಳಸಿದ ಲಕ್ಷಾಂತರ ರೂಪಾಯಿ ಮೌಲ್ಯದ ಬೃಹತ್‌ ಗಾತ್ರದ ಕಬ್ಬಿಣದ ಸಲಾಕೆಗಳು ಅಲ್ಲಿಯೇ ಬಿದ್ದಿವೆ. ಅವುಗಳನ್ನು ಸ್ಥಳಾಂತರಿಸುವ ಕೆಲಸವೂ ಆಗಿಲ್ಲ. ಒಟ್ಟಿನಲ್ಲಿ ವಿಶ್ವದ ಗಮನ ಸೆಳೆದಿದ್ದ ಟಿಪ್ಪು ಶಸ್ತ್ರಾಗಾರ ಸರಿಯಾದ ನಿರ್ವಹಣೆ ಇಲ್ಲದೆ ದೈನೇಸಿ ಸ್ಥಿತಿಗೆ ತಲುಪಿದೆ. ಶಸ್ತ್ರಾಗಾರದ ಮುಂದೆ ಹಸುಗಳನ್ನು ಮೇಯಲು ಬಿಟ್ಟಿದ್ದು, ಒಳಾಂಗಣದಲ್ಲಿ ಸಗಣಿ ಕಾಣಸಿಗುವುದು ಅದರ ನಿರ್ವಹಣೆಗೆ ಹಿಡಿದ ಕೈಗನ್ನಡಿ.

‘ಮೈನವಿರೇಳಿಸುವ ಇತಿಹಾಸ ಹೊಂದಿದ್ದ ಶ್ರೀರಂಗಪಟ್ಟಣ ನೋಡಲು ಬಂದಿದ್ದೆ. ಆದರೆ, ಟಿಪ್ಪು ಶಸ್ತ್ರಾಗಾರದ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಮೊದಲು ಅದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಫಲಕ ಅಳವಡಿಸಬೇಕು. ಕಟ್ಟಡವನ್ನು ಸಂರಕ್ಷಿಸಬೇಕು’ ಎಂದು ಬೆಂಗಳೂರಿನ ಪ್ರವಾಸಿಗ ವಿ.ಟಿ.ಸಂತೋಷ್ ಆಗ್ರಹಿಸಿದರು.

‘ಶಸ್ತ್ರಾಗಾರವನ್ನು ಸ್ಥಳಾಂತರಿಸುತ್ತಲೇ ಮಾಹಿತಿ ಫಲಕ ಅಳವಡಿಸಬೇಕಿತ್ತು. ಆದರೆ, ಆಗಿಲ್ಲ.  ಮುಂದಿನ ದಿನಗಳಲ್ಲಿ, ಶಸ್ತ್ರಾಗಾರದ ಸುತ್ತ ಕಾಂಪೌಂಡ್‌ ನಿರ್ಮಿಸಿ ಬೆಳೆದಿರುವ ಕಳೆಯನ್ನು ತೆಗೆದು ಹಾಕಲಾಗುವುದು. ಮಾಹಿತಿ ಫಲಕವನ್ನೂ ಅಳವಡಿಸಲಾಗುವುದು. ಶ್ರೀರಂಗಪಟ್ಟಣದ ಪ್ರತಿಯೊಂದು ಸ್ಮಾರಕವನ್ನು ರಕ್ಷಿಸುವ, ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವ ಕೆಲಸ ಮಾಡಲಾಗುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

130 ಮೀಟರ್‌ ಸ್ಥಳಾಂತರ
ರೈಲ್ವೆ ಹಳಿಯ ಹತ್ತಿರದಲ್ಲಿದ್ದ ಶಸ್ತ್ರಾಗಾರವು, ಜೋಡಿ ಹಳಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ತೊಡಕಾಗಿತ್ತು. ಐತಿಹಾಸಿಕ ಹಿನ್ನೆಲೆಯ ಈ ಕಟ್ಟಡವನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳುವುದು ರೈಲ್ವೆ ಇಲಾಖೆಗೆ ಬಹುದೊಡ್ಡ ಸವಾಲಾಗಿತ್ತು.

ಇದಕ್ಕಾಗಿ ಮೂಲ ಸ್ಥಳದಿಂದ ಶಸ್ತ್ರಾಗಾರವನ್ನು 130 ಮೀಟರ್‌ ದೂರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಇದಕ್ಕಾಗಿ ಒಟ್ಟು ₹13.6 ಕೋಟಿ ವೆಚ್ಚ ತಗುಲಿದ್ದು, ಅದನ್ನು ರೈಲ್ವೆ ಇಲಾಖೆ ಭರಿಸಿದೆ.

*
ಪ್ರಾಚ್ಯವಸ್ತು ಇಲಾಖೆಯಿಂದ ಸ್ಮಾರಕಗಳನ್ನು ನಿರ್ವಹಣೆ ಮಾಡಲಾಗುತ್ತದೆ. ಶಸ್ತ್ರಾಗಾರ ನಿರ್ವಹಣೆ ಕುರಿತು ಪರಿಶೀಲನೆ ನಡೆಸುತ್ತೇನೆ.
–ಬಿ.ಆರ್‌.ಶೈಲಜಾ, ಉಪ ವಿಭಾಗಾಧಿಕಾರಿ

Post Comments (+)