ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿರೋಧದ ನಡುವೆಯೂ ಜಲಪಾತೋತ್ಸವ

ಗಗನಚುಕ್ಕಿಯಲ್ಲಿ ನೀರು ಇಲ್ಲದಿದ್ದರೂ ಉತ್ಸವಕ್ಕೆ ಅಪಾರ ಹಣ ಖರ್ಚು, ಜಿಲ್ಲೆಯಾದ್ಯಂತ ಆಕ್ರೋಶ
Last Updated 16 ಜನವರಿ 2020, 19:45 IST
ಅಕ್ಷರ ಗಾತ್ರ

ಮಂಡ್ಯ: ‘ಹೊರಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಿದ ಕಬ್ಬಿನ ಸಾಗಣೆ ವೆಚ್ಚ ನೀಡಲು ಸರ್ಕಾರ ಹಿಂದೆಮುಂದೆ ನೋಡುತ್ತಿದೆ. ಬಿತ್ತನೆ ಬೀಜ ಕಳಪೆಯಾಗಿ ಜೊಳ್ಳು ಬಿದ್ದ ಭತ್ತಕ್ಕೆ ಪರಿಹಾರ ಬಂದಿಲ್ಲ. ಕಡೇ ಭಾಗದ ರೈತರಿಗೆ ಕೆಆರ್‌ಎಸ್‌ ನೀರು ಹರಿದಿಲ್ಲ. ಭತ್ತ ಖರೀದಿ ಕೇಂದ್ರದಲ್ಲಿ ಇನ್ನೂ ಒಂದು ಕ್ವಿಂಟಲ್‌ ಭತ್ತ ಖರೀದಿ ಮಾಡಿಲ್ಲ. ಇಂತಹ ಸಮಸ್ಯೆಗಳ ನಡುವೆ ಗಗನಚುಕ್ಕಿ ಜಲಪಾತೋತ್ಸವ ಬೇಕಿತ್ತಾ’ ಎಂದು ಮಳವಳ್ಳಿ ತಾಲ್ಲೂಕು ನೆಲಮಾಕನಹಳ್ಳಿ ಗ್ರಾಮದ ರೈತ ಎಂ.ಶಂಕರ್‌ ಪ್ರಶ್ನಿಸಿದರು.

ಸಂಕ್ರಾಂತಿ ಮುಗಿದು ಬೇಸಿಗೆ ಸಮೀಪಿಸುತ್ತಿರುವಾಗ, ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಯುತ್ತಿರುವಾಗ, ನದಿಯಲ್ಲಿ ನೀರಿನ ಹರಿವು ಇಲ್ಲದಿರುವಾಗ ಜಲಪಾತೋತ್ಸವ ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆ ಇಡೀ ಜಿಲ್ಲೆಯ ರೈತವಲಯದಲ್ಲಿದೆ. ನಾಲೆಗಳಿಗೆ ನೀರು ಬಿಡುವಂತೆ ಕಳೆದ 15 ದಿನಗಳಿಂದಲೂ ರೈತರು ಒತ್ತಾಯ ಮಾಡುತ್ತಿದ್ದರು. ಆಗ ನೀರು ಬಿಡದೆ, ಜಲಪಾತೋತ್ಸವ ಸಮೀಪಿಸುತ್ತಿದ್ದಂತೆ ವಿಶ್ವೇಶ್ವರಯ್ಯ ನಾಲೆಗೆ ಮಾತ್ರ ನೀರು ಹರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಸಂಕ್ರಾಂತಿ ಹಬ್ಬದ ಹಿಂದಿನ ದಿನ (ಜ.14) ಕಾವೇರಿ ನೀರಾವರಿ ನಿಗಮ ನಾಲೆಗೆ ಕೇವಲ 1,500 ಕ್ಯುಸೆಕ್‌ ನೀರು ಹರಿಸಿತು. ಅಲ್ಪ ಪ್ರಮಾಣದ ನೀರು ಮದ್ದೂರು ತಾಲ್ಲೂಕನ್ನೂ ತಲುಪಲಿಲ್ಲ. ಕಡೇ ಭಾಗವಾದ ಮಳವಳ್ಳಿ ತಾಲ್ಲೂಕುವರೆಗೆ ನೀರು ಬರಲಿಲ್ಲ. ಸಂಕ್ರಾಂತಿ ಹಬ್ಬದಂದು ಜಾನುವಾರುಗಳ ಮೈತೊಳೆದು, ಅಲಂಕಾರ ಮಾಡಿ, ಕಿಚ್ಚು ಹಾಯಿಸಲು ಕಾಯುತ್ತಿದ್ದ ರೈತರು ನೀರಿಲ್ಲದೆ ಪರದಾಡಿದರು. ಕೆರೆ ಹುಡುಕಿಕೊಂಡು ಹೋಗಬೇಕಾಯಿತು.

‘ಕೆಆರ್‌ಎಸ್‌ ಜಲಾಶಯದಲ್ಲಿ ನೀರು ಇದ್ದಾಗ ಸಂಕ್ರಾಂತಿ ಹಬ್ಬಕ್ಕೆ ಮೂರು ದಿನ ಇರುವಾಗಲೇ ನಾಲೆಗಳಿಗೆ 3 ಸಾವಿರ ಕ್ಯುಸೆಕ್‌ವರೆಗೂ ನೀರು ಹರಿಸಲಾಗುತ್ತಿತ್ತು. ಕಡೇ ಭಾಗಕ್ಕೂ ನೀರು ತಲುಪಿ ರೈತರು ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದರು. ರೈತರ ಸುಗ್ಗಿ ಹಬ್ಬಕ್ಕೆ ನೀರು ಕೊಡಲು ನಿರಾಕರಿಸುವ ಅಧಿಕಾರಿಗಳು ತಮಿಳುನಾಡಿಗೆ ನೀರು ಬಿಡುವ ಮೂಲಕ ಜಲಪಾತೋತ್ಸವ ಆಚರಣೆ ಮಾಡಲು ಮುಂದಾಗಿದ್ದಾರೆ’ ಎಂದು ರೈತ ಹೊಳಲು ನಾಗರಾಜ್‌ ಆರೋಪಿಸಿದರು.

ವೆಚ್ಚಕ್ಕೆ ವಿರೋಧ: ಜಲಪಾತೋತ್ಸವದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡುತ್ತಿರುವುದಕ್ಕೆ ರೈತವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಸ್ಯಾಂಡಲ್‌ವುಡ್‌ ನೈಟ್‌ ಹೆಸರಿನಲ್ಲಿ ಚಿತ್ರ ನಟ–ನಟಿಯರನ್ನು ಆಹ್ವಾನಿಸಿ ಕಾರ್ಯಕ್ರಮ ನೀಡುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.

‘ಗಗನಚುಕ್ಕಿ ಜಲಪಾತವನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಜಲಪಾತ ನೋಡಲು ಬಂದ ಪ್ರೇಕ್ಷಕರಿಗೆ ನೆರಳಿನ ವ್ಯವಸ್ಥೆಯೂ ಇಲ್ಲ. ಈಗ ವೆಚ್ಚ ಮಾಡುತ್ತಿರುವ ಹಣದಲ್ಲಿ ಅದೇ ಜಾಗವನ್ನು ಅಭಿವೃದ್ಧಿ ಮಾಡಬಹುದಿತ್ತು. ನೀರು ಹರಿಯುವಾಗ ಉತ್ಸವ ಮಾಡಿದ್ದರೆ ಯಾವ ವಿರೋಧವೂ ಇರುತ್ತಿರಲಿಲ್ಲ. ನೀರು ಇಲ್ಲದಿದ್ದ ಅವಧಿಯಲ್ಲಿ ಉತ್ಸವ ಮಾಡುತ್ತಿರುವುದು ಖಂಡನೀಯ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯಲ್ಲೇ ಅಸಮಾಧಾನ: ಮೇಲ್ನೋಟಕ್ಕೆ ಸರ್ಕಾರದ ವತಿಯಿಂದ ಜಲಪಾತೋತ್ಸವ ನಡೆಯುತ್ತಿದೆ. ಆದರೆ ಇದು ಸ್ಥಳೀಯ ಬಿಜೆಪಿ ಮುಖಂಡರ ಹಬ್ಬವಾಗಿದೆ. ಆದರೆ ಉತ್ಸವಕ್ಕೆ ಸಲಕರಣೆಗಳನ್ನು ಒದಗಿಸುವ, ಗುತ್ತಿಗೆ, ಟೆಂಡರ್‌ ನೀಡುವ ವಿಚಾರದಲ್ಲಿ ಮಳವಳ್ಳಿ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಮಾಡಲಾಗಿದೆ. ಬೇರೆ ತಾಲ್ಲೂಕುಗಳ ಮುಖಂಡರಿಗೆ ಮಣೆ ಹಾಕಲಾಗಿದೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಉಪ ವಿಭಾಗಾಧಿಕಾರಿ ಸೂರಜ್‌ ಎರಡೂ ಗುಂಪುಗಳ ಸಭೆ ನಡೆಸಿ ಅಸಮಾಧಾನ ಹೋಗಲಾಡಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಳವಳ್ಳಿಯಲ್ಲಿ ಇಂದು ಪ್ರತಿಭಟನೆ

ಭತ್ತ ಖರೀದಿ ಕೇಂದ್ರದಲ್ಲಿ ನಡೆಯದ ರೈತರ ನೋಂದಣಿ, ನೀರು ವ್ಯರ್ಥ ಮಾಡಿ ಜಲಪಾತೋತ್ಸವ ಆಚರಣೆ ಮಾಡುತ್ತಿರುವುದನ್ನು ಖಂಡಿಸಿ ಪ್ರಾಂತ ರೈತಸಂಘ ಶುಕ್ರವಾರ ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

‘ಬೇಸಿಗೆ ಬೆಳೆಗೆ ನೀರು ಹರಿಸುವ ಬಗ್ಗೆ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಆದರೆ ಜೀವಜಲ ವ್ಯರ್ಥ ಮಾಡಿ ಜಲಪಾತೋತ್ಸವ ಆಚರಣೆ ಮಾಡುತ್ತಿರುವುದು ಸರಿಯಲ್ಲ. ಭತ್ತ ಖರೀದಿ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ರೈತರ ನೋಂದಣಿ ಪ್ರಕ್ರಿಯೆ ನಡೆಯುತ್ತಿಲ್ಲ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಘದ ಮುಖಂಡ ಭರತ್‌ರಾಜ್‌ ತಿಳಿಸಿದರು.


ರ್‍ಯಾಲಿಗೆ ‘ಬಾಡಿಗೆ ಬೈಕ್‌ ಚಾಲಕರು’

ಜಲಪಾತೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಗಗನಚುಕ್ಕಿ ಜಲಪಾತದವರೆಗೂ ಗುರುವಾರ ಬೈಕ್‌ ರ‍್ಯಾಲಿ ನಡೆಯಿತು. ಬೈಕ್‌ ರ‍್ಯಾಲಿಯಲ್ಲಿ ‘ರಾಯಲ್‌ ಎನ್‌ಫೀಲ್ಡ್‌’ ಕಂಪನಿಯ 20ಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸಿದ್ದವು. ಬೆಂಗಳೂರಿನಿಂದ ಬಾಡಿಗೆ ಕೊಟ್ಟು ಬೈಕ್‌ ಹಾಗೂ ಚಾಲಕರನ್ನು ಕರೆಸಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಮಂಡ್ಯದಲ್ಲೇ ಸಾವಿರಾರು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿವೆ. ಬೈಕ್‌ ರ‍್ಯಾಲಿಗೆ ಸ್ಥಳೀಯರಿಗೆ ಅವಕಾಶ ನೀಡಬಹುದಾಗಿತ್ತು. ಕೇವಲ ಪೆಟ್ರೋಲ್‌ ಹಣ ಕೊಟ್ಟಿದ್ದರೂ ಸಾಕಷ್ಟು ಯುವಕರು ಬರುತ್ತಿದ್ದರು. ಆದರೆ ಖಾಸಗಿ ಕಂಪನಿಗೆ ಪ್ರಚಾರ ಕೊಡಲು ಬಾಡಿಗೆ ಕೊಟ್ಟು ಬೈಕರ್‌ಗಳನ್ನು ಕರೆಸಿರುವುದು ಎಷ್ಟು ಸರಿ’ ಎಂದು ಸ್ಥಳೀಯರಾದ ಸಂತೋಷ್‌ ಪ್ರಶ್ನಿಸಿದರು.

‘ಪ್ರವಾಸೋದ್ಯಮ ಇಲಾಖೆಯ ಜೊತೆ ನೋಂದಣಿ ಮಾಡಿಕೊಂಡಿದ್ದ ಬೈಕರ್‌ಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಸ್ಥಳೀಯರಿಗೂ ಅವಕಾಶ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT