ಗುರುವಾರ , ಅಕ್ಟೋಬರ್ 17, 2019
24 °C
ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ

ಧರ್ಮದಲ್ಲಿ ರಾಜಕಾರಣ ಬೆರೆಸಬೇಡಿ: ಶಿವರಾಜ ವಿ. ಪಾಟೀಲ

Published:
Updated:
Prajavani

ಶ್ರೀರಂಗಪಟ್ಟಣ: ಧರ್ಮದಲ್ಲಿ ರಾಜಕಾರಣ ಬೆರೆಸುವುದು ದೊಡ್ಡ ತಪ್ಪು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಹೇಳಿದರು.

ಸಮೀಪದ ಚಂದ್ರವನ ಆಶ್ರಮದಲ್ಲಿ ನವರಾತ್ರಿ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ, ಧರ್ಮದಲ್ಲಿ ರಾಜಕಾರಣ ಇರಕೂಡದು. ಲಾಬಿ ನಡೆಸಿ, ಅರ್ಜಿ ಸಲ್ಲಿಸಿ ಪಡೆಯುವ ಪ್ರಶಸ್ತಿಗಳಿಗೆ ಬೆಲೆ ಇಲ್ಲ. ಅರ್ಹರಿಗೆ ಪ್ರಶಸ್ತಿ ನೀಡಿದರೆ ಅದನ್ನು ಪಡೆದವರು ಹಾಗೂ ಕೊಟ್ಟವರಿಗೆ ಗೌರವ ಸಿಗುತ್ತದೆ ಎಂದು ಹೇಳಿದರು.

‘ನಮ್ಮಲ್ಲಿ ಭಾಷಣ ಮಾಡುವವವರು, ಘೋಷಣೆ ಕೂಗುವವರಿಗೆ ಕೊರತೆ ಇಲ್ಲ. ಭಾಷಣ, ಘೋಷಣೆಗಳಿಗೆ ಸರ್ಕಾರ ತೆರಿಗೆ ಹಾಕಿದರೆ ಹೆಚ್ಚು ಹಣ ಸಂಗ್ರಹಿಸಬಹುದು. ಇತರರಿಗಾಗಿ ಬದುಕುವವರು ಸತ್ತ ಮೇಲೂ ಬದುಕಿರುತ್ತಾರೆ. ಮನುಷ್ಯತ್ವ, ಮಾನವೀಯ ಮೌಲ್ಯಗಳೊಡನೆ ಬದುಕಬೇಕು’ ಎಂದು ಸಲಹೆ ನೀಡಿದರು.

ಆಶ್ರಮಕ್ಕೆ ಪ್ರಶಸ್ತಿ ಹಣ: ಶಿವರಾಜ ಪಾಟೀಲ ಅವರಿಗೆ ರಾಷ್ಟ್ರಮಟ್ಟದ ‘ಕಾವೇರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ₹50 ಸಾವಿರ ನಗದು ಒಳಗೊಂಡಿದೆ.

‘ಈ ಹಣಕ್ಕೆ ಇನ್ನೂ ₹50 ಸಾವಿರ ಸೇರಿಸಿ ₹1 ಲಕ್ಷ ಮೊತ್ತವನ್ನು ಆಶ್ರಮದ ಕಾರ್ಯಗಳಿಗಾಗಿ ನೀಡುತ್ತೇನೆ’ ಎಂದು ಶಿವರಾಜ ಪಾಟೀಲ ಪ್ರಕಟಿಸಿದರು.

ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಡಿಲಕ್ಕಿ ವಿತರಿಸಿ ಮಾತನಾಡಿ, ‘ಚಂದ್ರವನ ಆಶ್ರಮ 2005ರಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾವೇರಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಸೇರಿ ಇದುವರೆಗೆ 14 ಮಂದಿಗೆ ಪ್ರಶಸ್ತಿ ನೀಡಲಾಗಿದೆ’ ಎಂದು ತಿಳಿಸಿದರು.

ಸಾಹಿತಿ ತೈಲೂರು ವೆಂಕಟಕೃಷ್ಣ ಅವರಿಗೆ ‘ಸಾಹಿತ್ಯ ಶ್ರೀ ಪ್ರಶಸ್ತಿ’, ಕವಿತಾ ಉಮಾಶಂಕರ್‌ ಅವರಿಗೆ ‘ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ’, ವೀರಗಾಸೆ ಕಲಾವಿದ ಮಹದೇವಪ್ಪ ಅವರಿಗೆ ‌‘ಜಾನಪದಶ್ರೀ ಪ್ರಶಸ್ತಿ’ ಹಾಗೂ ಯುಗಧರ್ಮ ರಾಮಣ್ಣ ಅವರಿಗೆ ‘ತತ್ವಪದಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಇದೇ ವೇಳೆ ತ್ರಿನೇತ್ರ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಯೋಗಿಕ್‌ ಸೈನ್ಸ್‌ ಅಂಡ್‌ ರಿಸರ್ಚ್‌ ಸೆಂಟರ್‌ ಉದ್ಘಾಟನೆಗೊಂಡಿತು.

ದೊಡ್ಡಗುಣಿ ಹಿರೇಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ಡಿಜಿ ಆಸ್ಪತ್ರೆ ನಿರ್ದೇಶಕಿ ಡಾ.ಸೌಮ್ಯಾ ರಮೇಶ್‌, ಚಂದ್ರವನ ಆಶ್ರಮದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್‌, ನಿರ್ದೇಶಕ ದಯಾಶಂಕರ್‌, ಕಾಂಗ್ರೆಸ್‌ ಮುಖಂಡ ಎಸ್‌.ಎಲ್‌. ಲಿಂಗರಾಜು, ನಾಗೇಶ್‌, ನವೀನ್ ಇದ್ದರು.

ಜನರ ಋಣ ತೀರಿಸುತ್ತೇನೆ: ಸುಮಲತಾ

ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ‘ಚಂದ್ರವನ ಆಶ್ರಮದಿಂದ ಅಂಬರೀಷ್‌ ಅವರು ಈ ಹಿಂದೆ ಕಲಾಯೋಗಿ ಪ್ರಶಸ್ತಿ ಪಡೆದಿದ್ದರು. ಈ ಬಾರಿ ದೊಡ್ಡಣ್ಣ ಅವರಿಗೆ ಪ್ರಶಸ್ತಿ ಬಂದಿರುವುದು ಸಂತಸದ ವಿಷಯ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿ ದೊಡ್ಡ ಗೌರವ ನೀಡಿದ್ದಾರೆ. ಕಡೆವರೆಗೂ ಜನರ ಋಣ ತೀರಿಸಲು ಶ್ರಮಿಸುತ್ತೇನೆ’ ಎಂದರು.

‘ಕಲಾಯೋಗಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಚಿತ್ರನಟ ದೊಡ್ಡಣ್ಣ, ‘ಮಠ, ಮಂದಿರಗಳು ಜನರಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜದ ಕೆಲಸ ಮಾಡುತ್ತಿವೆ. ಅವುಗಳಿಗೆ ಸರ್ಕಾರ ಹಾಗೂ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

Post Comments (+)