ಭೂತಬಂಗಲೆಯಾದ ಶಿವಪುರ ಧ್ವಜ ಸತ್ಯಾಗ್ರಹ ಸೌಧ!

7

ಭೂತಬಂಗಲೆಯಾದ ಶಿವಪುರ ಧ್ವಜ ಸತ್ಯಾಗ್ರಹ ಸೌಧ!

Published:
Updated:
Deccan Herald

ಮಂಡ್ಯ: ಸಾತಂತ್ರ್ಯ ಚಳುವಳಿಗೆ ಸ್ಫೂರ್ತಿ, ಚೈತನ್ಯ ತುಂಬಿದ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಈಗ ಅನಾಥವಾಗಿದೆ. ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ‘ಹೋರಾಟದ ಹೆಗ್ಗುರುತು’ ಇಂದು ಭೂತಬಂಗಲೆಯಾಗಿದೆ.

1938, ಏಪ್ರಿಲ್‌ನಲ್ಲಿ ನಡೆದ ಶಿವಪುರದ ಧ್ವಜ ಸತ್ಯಾಗ್ರಹ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಶಿವಪುರ ಗ್ರಾಮದಲ್ಲಿ ಶಿಂಷಾ ನದಿಯ ದಂಡೆಯ ಮೇಲೆ ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆಸಲು ಹೋರಾಟಗಾರರು ಯೋಜನೆ ರೂಪಿಸಿದರು. ಧ್ವಜರೋಹಣ ಹಾಗೂ ಧ್ವಜವಂದನ ಕಾರ್ಯಕ್ರಮ ಏರ್ಪಾಟಾಯಿತು. ಆದರೆ ಕಾಂಗ್ರೆಸ್ ಧ್ವಜ ಹಾರಿಸುವುದರಿಂದ ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ದಂಡಾಧಿಕಾರಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ನಿಷೇಧ ಹೇರಿದರು. ಆದರೆ ನಿಷೇಧ ಉಲ್ಲಂಘಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಆ ಮೂಲಕ ಸ್ವಾತಂತ್ರ್ಯ ಚಳವಳಿಯ ಕಿಚ್ಚಿಗೆ ಶಿವಪುರ ಸಾಕ್ಷಿಯಾಯಿತು.

ಈ ಹೋರಾಟದಲ್ಲಿ ಸಿದ್ದಲಿಂಗಯ್ಯ, ಎಚ್.ಕೆ.ವೀರಣ್ಣಗೌಡ, ಸಾಹುಕಾರ್ ಚೆನ್ನಯ್ಯ, ಮಂಡ್ಯದ ಗೋಪಾಲಶೆಟ್ರು, ಎಂ.ಜಿ.ಬಂಡಿಗೌಡರು, ಎಚ್.ಸಿ.ದಾಸಪ್ಪ, ಎಸ್.ರಂಗಯ್ಯ, ಕೊಪ್ಪದ ಜೋಗಿಗೌಡ, ಎಂ.ಎನ್. ಜೋಯಿಸರು, ಡಾ.ರಮೇಶ್, ಬೆಸಗರ ಹಳ್ಳಿಯ ತಮ್ಮಯ್ಯ, ಗುರುದೇವನ ಹಳ್ಳಿಯ ಕೆಂಪುಯ್ಯ, ನರಸಿಂಹಯ್ಯ, ಕೊತ್ನಹಳ್ಳಿ ಪಟೇಲ್ ಮಲ್ಲಯ್ಯ, ಅರಕೆರೆ ಕೆಂಚಪ್ಪ, ಚಿಕ್ಕಬಿಳಿಗೌಡರು, ಕುದರಗುಂಡಿ ಮರಿಯಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಧ್ವಜ ಸತ್ಯಾಗ್ರಹ ನಡೆದು 36 ವರ್ಷಗಳ ನಂತರ ಸ್ಮಾರಕ ಸೌಧ ನಿರ್ಮಿಸುವ ಚಿಂತನೆ ಮೊಳಕೆಯೊಡೆಯಿತು. ಮುಖ್ಯಮಂತ್ರಿಯಾಗಿದ್ದ ಕೆಂಗಲ್‌ಹನುಮಂತಯ್ಯ ಅವರು ಧ್ವಜ ಸತ್ಯಾಗ್ರಹ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. 1979ರ ಸೆಪ್ಟೆಂಬರ್‌ 29 ರಂದು ಸತ್ಯಾಗ್ರಹಸೌಧ ಉದ್ಘಾಟನೆಯಾಯಿತು.

ಅಭಿವೃದ್ಧಿ ಶಕೆ: ಎಂ.ಎಸ್.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಸೌಧದ ಪುನರುಜ್ಜೀವನಕ್ಕೆ ಹಣ ಬಿಡುಗಡೆಗೊಳಿಸಿದರು. ಅದರಂತೆ ಸೌಧದ ಎಡ ಬದಿಯಲ್ಲಿ ಅನೆಕ್ಸ್ ಸಭಾಂಗಣ ನಿರ್ಮಾಣಗೊಂಡಿತು. ನಿರ್ವಹಣೆ ಕೊರತೆಯಿಂದಾಗಿ ಸ್ಮಾರಕ ಸೌಧ ಹಾಗೂ ಅನೆಕ್ಸ್‌ ಕಟ್ಟಡ ಈಗ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಬೀದಿನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಸೌಧದ ಆವರಣದಲ್ಲಿದ್ದ ಸುಂದರ ಕಾರಂಜಿ  ಸ್ಥಗಿತಗೊಂಡಿದೆ.ಈ ಹಿಂದೆ ನಿರ್ಮಿಸಲಾಗಿದ್ದ ಸುಂದರ ಕೈತೋಟ ನಿರ್ವಹಣೆ ಕೊರತೆಯಿಂದಾಗಿ ಒಣಗಿದೆ. ಸಾಕಷ್ಟು ಅಲಂಕಾರಿ ಗಿಡಗಳು ನಾಶಗೊಂಡಿವೆ.

ಸೌಧದ ರಿಪೇರಿ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ತೆರವುಗೊಳಿಸಲಾಯಿತು. ಆದರೆ ಮತ್ತೆ ಭಾವಚಿತ್ರಗಳನ್ನು ಅಳವಡಿಸಲಿಲ್ಲ. ಅವುಗಳು ಏನಾದವು ಎಂಬುದೇ ಯಕ್ಷ ಪ್ರಶ್ನೆ. ಚತುಷ್ಪಥ ನಿರ್ಮಾಣ ಸಂದರ್ಭದಲ್ಲಿ ಸೌಧದ ಮುಂದಿನ ಕಾಂಪೌಂಡ್‌ ಒಡೆಯಲಾಗಿತ್ತು. ಹೆದ್ದಾರಿ ಅಭಿವೃದ್ಧಿ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಿಂದ ತರಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಲ್ಲು ಚಪ್ಪಡಿಗಳು ಮಾಯವಾಗಿವೆ.

ಸೌಧಕ್ಕೆ ರಕ್ಷಣೆ ವ್ಯವಸ್ಥೆ ಇಲ್ಲದ ಕಾರಣ ಸ್ಮಾರಕ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸುತ್ತಲಿನ ಕಾಂಪೌಂಡ್ ಹೊರ ಭಾಗದಲ್ಲಿ ಕಸ ಸುರಿಯಲಾಗಿದೆ. ಅನೆಕ್ಸ್ ಕಟ್ಟಣ ದುರಸ್ತಿ ಇಲ್ಲದೆ ಅನಾಥವಾಗಿದೆ. ವೇದಿಕೆ ಹತ್ತಲು ಮೆಟ್ಟಲುಗಳಿಲ್ಲ. ‘ಈ ಅಪರೂಪದ ಸ್ಮಾರಕ ಅನಾಥವಾಗಿ ಉಳಿದಿರುವುದು ದುರದೃಷ್ಟಕರ. ಈ ಸ್ಮಾರಕವನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಹಿಂದಿನ ಹೋರಾಟದ ನೆನಪನ್ನು ಶಾಶ್ವತವಾಗಿ ಉಳಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೌಧ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಸೌಧಕ್ಕೆ ಕಾಯಕಲ್ಪ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. 

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಮಾರಕ ಸೌಧದ ಪುನರುಜ್ಜೀವನಕ್ಕಾಗಿ ‘ಸತ್ಯಾಗ್ರಹ ಸೌಧ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಮತ್ತು ನಿರ್ವಹಣಾ ಸಮಿತಿ’ ರಚನೆ ಮಾಡಲಾಯಿತು. ಸಮಿತಿ ಸದಸ್ಯರು ಸೌಧದ ಆವರಣದಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರು. ಆದರೆ ಅವು ಮನವಿಯಾಗಿಯೇ ಉಳಿದಿವೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !