ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 13 ಕೋಟಿ ಕೊರತೆ: ಸಚಿವರ ಭೇಟಿಗೆ ನಿರ್ಧಾರ

ಪುರಸಭೆ ಸಾಮಾನ್ಯ ಸಭೆ: ಕಟ್ಟಡ ಪರವಾನಗಿ ನೀಡುವ ಕ್ರಮ ಸರಳೀಕರಿಸಲು ತೀರ್ಮಾನ
Last Updated 17 ಅಕ್ಟೋಬರ್ 2021, 4:09 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಪಟ್ಟಣದಲ್ಲಿ ವಾಸದ ಮನೆ ಸೇರಿದಂತೆ ಇತರ ಕಟ್ಟಡ ಕಟ್ಟುವವರಿಗೆ ತೊಂದರೆಯಾಗದ ರೀತಿಯಲ್ಲಿ ಕಟ್ಟಡ ಪರವಾನಗಿ ನೀಡುವ ಕ್ರಮವನ್ನು ಸರಳೀಕರಿಸಲು ಪುರಸಭೆಯ ಸಾಮಾನ್ಯ ಸಭೆ ತೀರ್ಮಾನಿಸಿತು.

ಪಟ್ಟಣದ ಸ್ವರ್ಣಜಯಂತಿ ಶಹರೀ ರೋಜ್ಗಾರ್ ಯೋಜನಾ ಭವನದಲ್ಲಿ ಕೋರಂ ಅಭಾವದಿಂದ ಮುಂದೂಡಲಾಗಿದ್ದ ಆಡಳಿತ ಮಂಡಳಿಯ ಮೊದಲ ಸಭೆ ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಗರಾಭಿವೃದ್ಧಿ ಇಲಾಖೆಯು ಕಟ್ಟಡ ಪರವಾನಗಿ ನೀಡಲು ಕಠಿಣ ನಿಯಮ ರೂಪಿಸಿರುವುದರಿಂದ ಮನೆ ಸೇರಿದಂತೆ ಇತರ ಕಟ್ಟಡ ನಿರ್ಮಿಸುವವರು ಪರವಾನಗಿ ಪಡೆಯಲು ಹರಸಾಹಸ ಪಡುವಂತಾಗಿದೆ. ಇದರಿಂದಾಗಿ ಪುರಸಭೆಯ ಅಧಿಕಾರಿಗಳು ಕಟ್ಟಡ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪುರಸಭೆಗೆ ಆರ್ಥಿಕ ಆದಯ ಬರುವುದು ತಪ್ಪಿ ಮನೆ ಕಟ್ಟುವವರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಕ್ರಮವನ್ನು ಸರಳೀಕರಿಸುವಂತೆ ಒತ್ತಾಯ ಕೇಳಿಬಂದಿತ್ತು. ವಿಷಯದ ಪರ ಮತ್ತು ವಿರೋಧ ಚರ್ಚೆ ನಡೆದು ಅಂತಿಮವಾಗಿ ಕಟ್ಟಡ ನಿರ್ಮಾಣ ಮಾಡುವವರಿಗೆ ನಿಯಮ ಸರಳೀಕರಿಸಲು ಸಭೆ ತೀರ್ಮಾನಿಸಿತು.

ಹಣದ ಕೊರತೆ: ₹ 27 ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ನಡೆಯುತ್ತಿದ್ದು, ಪ್ರಸ್ತುತ ₹ 14 ಕೋಟಿ ರೂಪಾಯಿ ವೆಚ್ಚದಲ್ಲಿ ಹೇಮಗಿರಿಯ ಹೇಮಾವತಿ ನದಿಯ ಬಳಿ ಜಾಕ್ವೆಲ್, ಪಂಪ್‌ಹೌಡ್‌, ಪೈಪ್‌ಲೈನ್‌ ನಿರ್ಮಿಸಿ ಸಾಧುಗೋನಹಳ್ಳಿಯ ಬಾಣಂತಿಗುಡ್ಡದ ಬಳಿ ಫಿಲ್ಟರ್ ಹೌಸ್ ಮತ್ತು ನೀರು ಶೇಖರಣಾ ತೊಟ್ಟಿ ನಿರ್ಮಿಸಲಾಗಿದೆ. ಯೋಜನೆ ಸಂಪೂರ್ಣಗೊಳ್ಳಲು ಇನ್ನೂ ₹ 13ಕೋಟಿ ಅವಶ್ಯಕತೆ ಇದೆ. ಕೆಯುಐಡಿಎಫ್‌ಸಿ ವತಿಯಿಂದ ₹ 10 ಕೋಟಿ ಸಾಲ ಪಡೆಯಬೇಕಾಗಿದೆ ಎಂದು ಅಧ್ಯಕ್ಷೆ ಮಹಾದೇವಿ ನಂಜುಂಡ ಮನವಿ ಮಾಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು ಕ್ಷೇತ್ರದ ಶಾಸಕರೇ ಸಚಿವರಾಗಿರುವುದರಿಂದ ಅವರನ್ನು ಭೇಟಿ ಮಾಡಿ 3ನೇ ಹಂತದ ಕುಡಿಯುವ ನೀರು ಯೋಜನೆಯನ್ನು ಪೂರ್ಣಗೊಳಿಸಲು ₹ 13 ಕೋಟಿಯನ್ನು ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸುವಂತೆ ಕೋರಲು ಸಭೆ ನಿರ್ಣಯಿಸಿತು.

ವಾಣಿಜ್ಯ ಮಳಿಗೆ ಹರಾಜು: ಪಟ್ಟಣದ ಪುರಸಭೆ ಒಡೆತನದಲ್ಲಿರುವ 140ಕ್ಕೂ ಹೆಚ್ಚಿನ ವಾಣಿಜ್ಯ ಮಳಿಗೆಗಳನ್ನು ಕೋವಿಡ್ ಕಾರಣದಿಂದ ಹರಾಜು ನಡೆಸಿಲ್ಲ. ತುರ್ತಾಗಿ 4 ವರ್ಷ 11 ತಿಂಗಳ ಅವಧಿಗೆ ಮರು ಹರಾಜು ಮಾಡಲು ಸಭೆ ತೀರ್ಮಾನಿಸಿತು.

ಬೀದಿ ದೀಪ ಅಳವಡಿಸಲು ಆಗ್ರಹ: ಹೊಸಹೊಳಲು ಸೇರಿದಂತೆ ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲೂ ಒಳಚರಂಡಿ ಯೋಜನೆಯ ಕಾಮಗಾರಿಯು ಕುಂಟುತ್ತಿದೆ. ಇದರಿಂದ ಇಡೀ ಪಟ್ಟಣದಲ್ಲಿ ಅಶುಚಿತ್ವ ಹೆಚ್ಚಾಗಿದೆ. ತ್ಯಾಜ್ಯ ಮ್ಯಾನ್ ಹೋಲ್ ಮೂಲಕ ಹರಿದು ಸಂಚಾರ ಕಷ್ಟವಾಗಿದೆ. ಅದನ್ನು ಕೂಡಲೇ ಪೂರ್ಣಗೊಳಿಸುವಂತೆ ಪಕ್ಷಾತೀತವಾಗಿ ಸದಸ್ಯರು ಆಗ್ರಹಿಸಿದರು.

ಬೀದಿದೀಪ ನಿರ್ವಹಣೆ ಸರಿ ಇಲ್ಲದಿರುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿ ಎಲ್ಇಡಿ ಬಲ್ಬ್‌ ಅಳವಡಿಸಲು ಕೋರಿದರು. ಪುರಸಭೆಯ ಅಧ್ಯಕ್ಷೆ ಮತ್ತು ಮುಖ್ಯಾಧಿಕಾರಿ ಕುಮಾರ್ ಅತ್ಯುತ್ತಮ ಗುಣಮಟ್ಟದ 230 ಎಲ್ಇಡಿ ದೀಪ ಖರೀದಿಸಿ ಪ್ರತಿ ವಾರ್ಡ್‌ಗೂ 10 ದೀಪ ವಿತರಿಸುವ ಭರವಸೆ ನೀಡಿದರು.

ಉಪಾಧ್ಯಕ್ಷೆ ಗಾಯತ್ರಿ ಸುಬ್ರಹ್ಮಣ್ಯ, ಸದಸ್ಯರಾದ ಕೆ.ಎಸ್.ಸಂತೋಷ್‌ಕುಮಾರ್‌, ಕೆ.ಬಿ.ಮಹೇಶ್, ನಟರಾಜ, ಗಿರೀಶ್, ಕೆ.ಸಿ.ಮಂಜುನಾಥ್, ಕೆ.ಆರ್.ರವೀಂದ್ರಬಾಬು, ಡಿ.ಪ್ರೇಮಕುಮಾರ್, ಎಚ್.ಎನ್.ಪ್ರವೀಣ್, ಸೌಭಾಗ್ಯ ಉಮೇಶ್, ಖಮ್ಮರ್ ಬೇಗಂ ಸಲ್ಲೂ, ಸುಗುಣ ರಮೇಶ್, ಪಂಕಜಾ ಪ್ರಕಾಶ್, ಶೋಭಾದಿನೇಶ್, ಶುಭಾಗಿರೀಶ್, ಕಮಲಮ್ಮ, ಪದ್ಮರಾಜು, ಇಂದ್ರಾಣಿವಿಶ್ವನಾಥ್, ಎಚ್.ಡಿ.ಅಶೋಕ್, ಕೆ.ಎಸ್.ಸಂತೋಷ್, ಕೆ.ಎಸ್.ಪ್ರಮೋದ್, ಎಚ್.ಆರ್.ಲೋಕೇಶ್, ಪರಿಸರ ಎಂಜಿನಿಯರ್ ಅರ್ಚನಾಆರಾಧ್ಯ, ಸಹಾಯಕ ಎಂಜಿನಿಯರ್ ಮಧುಸೂಧನ್, ನಗರನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯ ಕಾರ್ಯಪಾಲಕ ಎಂಜಿನಿಯರ್ ಗುರುರಾಜ್, ಕಂದಾಯ ಅಧಿಕಾರಿ ರವಿಕುಮಾರ್, ಪುರಸಭೆಯ ಕಚೇರಿಯ ವ್ಯವಸ್ಥಾಪಕ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT