ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಆಯಾರಾಂ, ಗಯಾರಾಂ ಸ್ಥಿತಿ: ಸಿದ್ದರಾಮಯ್ಯ

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಪ್ರಚಾರ, ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ
Last Updated 21 ನವೆಂಬರ್ 2019, 14:32 IST
ಅಕ್ಷರ ಗಾತ್ರ

ಕಿಕ್ಕೇರಿ (ಮಂಡ್ಯ): ‘ಎಂಎಲ್‌ಎಗಳು ಎತ್ತು, ಕೋಳಿ, ಕುರಿ, ಕೋಣದ ರೀತಿಯಲ್ಲಿ ಮಾರಾಟವಾಗುತ್ತಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿದ್ದಾರೆ. ಇಡೀ ದೇಶದಲ್ಲಿ ಆಯಾರಾಂ, ಗುಯಾರಾಂ ಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪಕ್ಷಾಂತರ ಪಿಡುಗು ತೊಲಗಬೇಕು’ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ‘ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೆಲ್ಲಾ ಶಾಸಕರ ಖರೀದಿಸುವುದನ್ನು ಚಾಳಿ ಮಾಡಿಕೊಂಡಿದ್ದಾರೆ. ಯಾರೇ ಆಗಲಿ, ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದರೆ ಜನರು ಅವರನ್ನು ಮನೆಗೆ ಕಳುಹಿಸುವ ನಿರ್ಧಾರ ಕೈಗೊಳ್ಳಬೇಕು’ ಎಂದರು.

‘ಆ ಶ್ರೀರಾಮುಲು ಪಕ್ಷಾಂತರಿಗಳನ್ನು ಅನರ್ಹರು ಎನ್ನಬೇಡಿ ಎಂದು ಹೇಳುತ್ತಾನೆ. ಸಿದ್ದರಾಮಯ್ಯ ಪಕ್ಷಾಂತರ ಮಾಡಿಲ್ವ ಎಂದು ಕೇಳುತ್ತಾನೆ. ನಾನು ಜೆಡಿಎಸ್‌ ಬಿಡಲಿಲ್ಲ, ಅವರೇ ನನನ್ನು ಹೊರ ಹಾಕಿದರು. ನಾನು ಉಚ್ಛಾಟನೆಯಾದ ಬಳಿಕವೇ ಅಹಿಂದ ಸಂಘಟನೆ ಮಾಡಿದೆ. ಆಹ್ವಾನ ನೀಡಿದ ನಂತರವಷ್ಟೇ ಕಾಂಗ್ರೆಸ್‌ ಸೇರಿದೆ. ಇತಿಹಾಸವನ್ನು ತಿಳಿದು ಮಾತನಾಡಬೇಕು. ಪ್ರಜಾಪ್ರತಿನಿಧಿ ಕಾಯ್ದೆಯ10ರ ಷೆಡ್ಯೂಲ್‌ ಓದಿಕೊಂಡಿಲ್ಲ’ ಎಂದರು.

ನಾನು ಕೊಟ್ಟ ಕೆಲಸ ನೆನಪಿಸಿಕೊಳ್ಳಿ: ‘ನಾನು ಕೊಟ್ಟ ಯೋಜನೆಗಳನ್ನೊಮ್ಮೆ ನೆನಪು ಮಾಡಿಕೊಳ್ಳಿ. ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಕೊಟ್ಟ ಏಕೈಕ ರಾಜ್ಯವೆಂದರೆ ಕರ್ನಾಟಕ. ಅನ್ನಭಾಗ್ಯ ಯೋಜನೆಯನ್ನು ನರೇಂದ್ರ ಮೋದಿ ಕೊಟ್ಟಿದ್ದಾರೆ ಎನ್ನುವುದಾದರೆ ಗುಜರಾತ್‌, ಮಹಾರಾಷ್ಟ್ರ ರಾಜ್ಯಗಳಲ್ಲಿ ಏಕೆ ಮಾಡಿಲ್ಲ, ಯಡಿಯೂರಪ್ಪ ಅವರು ಅರ್ಥ ಮಾಡಿಕೊಂಡು ಮಾತನಾಡಬೇಕು. ಯಾರೂ ಮಾಡದಂತಹ ದಲಿತರಿಗೆ ಗುತ್ತಿಗೆಯಲ್ಲಿ ಶೇ 50 ಮೀಸಲಾತಿಯನ್ನು ನಾನು ಜಾರಿ ಮಾಡಿದೆ’ ಎಂದರು.

'ಬಿಜೆಪಿ ಹಾಗೂ ಜೆಡಿಎಸ್‌ನವರು ರಾಜ್ಯಕ್ಕೆ ಏನೂ ಕೊಡುಗೆ ನೀಡಿಲ್ಲ, ಅವರ ಸಾಧನೆ ಶೂನ್ಯ. ಯಡಿಯೂರಪ್ಪ ಅವರ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಜೆಡಿಎಸ್‌ನವರು ಹೇಳುತ್ತಾರೆ. ಅವರಿಗೆ ಆಚಾರ, ವಿಚಾರ, ನೀತಿ, ನಿಯತ್ತು ಏನೂ ಇಲ್ಲ’ ಎಂದು ಹೇಳಿದರು.

ಮೋದಿ ದೇಶಭಕ್ತರೇ?:‘ಕಾಂಗ್ರೆಸ್‌ ಪಕ್ಷ ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ, ಬಿಜೆಪಿ ಹುಟ್ಟಿದ್ದು ಸ್ವತಂತ್ರ್ಯ ನಂತರದಲ್ಲಿ. ನಾನು ದೇಶ ಭಕ್ತ ಎನ್ನುವ ಪ್ರಧಾನಿ ಮೋದಿ ಹುಟ್ಟಿದ್ದು 1960ರಲ್ಲಿ. ಹೀಗಿರುವಾಗ ಅವರು ದೇಶಭಕ್ತ ಹೇಗಾಗುತ್ತಾರೆ’ ಎಂದು ಪ್ರಶ್ನಿಸಿದರು.

ಕುಂಕುಮ ಬೇಡ ಎಂದರು...

ಹಿರೀಕಳಲೆ ಗ್ರಾಮದಲ್ಲಿ ಪ್ರಚಾರ ನಡೆಸುವ ವೇಳೆ ಮಹಿಳೆಯರು ಸಿದ್ದರಾಮಯ್ಯ ಅವರಿಗೆ ಬೆಲ್ಲದ ಆರತಿ ಮಾಡಿದರು. ಈ ವೇಳೆ ಮಹಿಳೆಯೊಬ್ಬರು ಅವರಿಗೆ ಕುಂಕುಮ ಇಡಲು ಮುಂದಾದರು. ಹಣೆಗೆ ಕೈ ಅಡ್ಡ ಹಿಡಿದ ಸಿದ್ದರಾಮಯ್ಯ, ‘ಬೇಡಮ್ಮ’ ಎಂದರು. ನಂತರ ಆ ಮಹಿಳೆಯ ತಲೆ ಮೇಲೆ ಕೈ ಇಟ್ಟು, ‘ನಿನಗೆ ಒಳ್ಳೆಯದಾಗಲಮ್ಮ’ ಎನ್ನುತ್ತಾ ಅಕ್ಷತೆ ಹಾಕಿದರು.

ಗುದ್ದಿಕೊಂಡ ಕಾರುಗಳು

ಕೃಷ್ಣಾಪುರ ಬಳಿ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಸಿದ್ದರಾಮಯ್ಯ, ಪಿ.ಎಂ.ನರೇಂದ್ರಸ್ವಾಮಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಕಾರುಗಳು ಒಂದನ್ನೊಂದು ಗುದ್ದಿಕೊಂಡವು. ಇದರಿಂದ ನಾಯಕರಿಗೆ ಅಪಾಯವಾಗಲಿಲ್ಲ. ನಂತರ ಅವರು ಅದೇ ಕಾರುಗಳಲ್ಲಿ ಪ್ರಯಾಣ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT