ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ ಕಿಂಗ್ಸ್‌ಗೆ ಸವಾಲೊಡ್ಡುವವರು ಯಾರು?

ಐಪಿಎಲ್ ಎರಡನೇ ಕ್ವಾಲಿಫೈಯರ್ ಇಂದು: ಕೋಲ್ಕತ್ತ ನೈಟ್‌ರೈಡರ್ಸ್‌–ಸನ್‌ರೈಸರ್ಸ್‌ ಮುಖಾಮುಖಿ: ಕೇನ್‌ ವಿಲಿಯಮ್ಸನ್‌ ಆಕರ್ಷಣೆ
Last Updated 24 ಮೇ 2018, 19:58 IST
ಅಕ್ಷರ ಗಾತ್ರ

ಕೋಲ್ಕತ್ತ: ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಕೋಲ್ಕತ್ತ ನೈಟ್ ರೈಡರ್ಸ್‌ ಮತ್ತು ಒಂದು ಸಲ ಚಾಂಪಿಯನ್ ಆಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಶುಕ್ರವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಲಿವೆ.

ಈ ಪಂದ್ಯದಲ್ಲಿ ಜಯಿಸುವ ತಂಡವು 27ರಂದು ಮುಂಬೈನಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಆಡಲಿದೆ.

ಈಡನ್ ಗಾರ್ಡನ್‌ನಲ್ಲಿ ಈ ಪಂದ್ಯವು ನಡೆಯಲಿರುವುದರಿಂದ ಕೆಕೆಆರ್ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಬುಧವಾರ ಇಲ್ಲಿ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್ ನಾಯಕತ್ವದ ಕೆಕೆಆರ್ ಅಮೋಘ ಜಯ ಸಾಧಿಸಿತ್ತು. ಆದರೆ ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಡಿದ್ದ ಸನ್‌ರೈಸರ್ಸ್‌ ಹೈದರಾಬಾದ್ ಬಳಗವು ಮುಂಬೈನಲ್ಲಿ ನಡೆದಿದ್ದ ಮೊದಲ ಕ್ವಾಲಿಫೈಯರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಸೋತಿತ್ತು.

ಆದರೆ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಬಳಗವನ್ನು ಹೊಂದಿರುವ ತಂಡವೆಂಬ ಹೆಗ್ಗಳಿಕೆ ಸನ್‌ರೈಸರ್ಸ್‌ಗೆ ಇದೆ. ಮಧ್ಯಮವೇಗಿಗಳಾದ ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಸಂದೀಪ್ ಶರ್ಮಾ, ಕಾರ್ಲೋಸ್ ಬ್ರಾಥ್‌ವೇಟ್ ಮತ್ತು ಲೆಗ್‌ಸ್ಪಿನ್ನರ್ ರಶೀದ್ ಖಾನ್ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದಾರೆ. ಮೊದಲ ಕ್ಲಾಲಿಫೈಯರ್‌ನಲ್ಲಿ 139 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಚೆನ್ನೈ ತಂಡಕ್ಕೆ ಕೊನೆಯ ಓವರ್‌ನವರೆಗೂ ಸನ್‌ರೈಸರ್ಸ್‌ ಬೌಲರ್‌ಗಳು ಸವಾಲೊಡ್ಡಿದ್ದರು.

ಈ ಪಡೆಯನ್ನು ಎದುರಿಸಿ ನಿಲ್ಲುವ ಸವಾಲು ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳಾದ ಸುನಿಲ್ ನಾರಾಯಣ್, ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ ಮತ್ತು ಕ್ರಿಸ್ ಲಿನ್ ಅವರ ಮುಂದಿದೆ. ದಿನೇಶ್ ಮತ್ತು ಆ್ಯಂಡ್ರೆ ರಸೆಲ್ ಎಲಿಮಿನೆಟರ್‌ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್ ಮಾಡಿದ್ದರಿಂದ ತಂಡ ಜಯಿಸಿತ್ತು.

ಆದರೆ ಸನ್‌ರೈಸರ್ಸ್‌ ತಂಡಕ್ಕೆ ಚೆಂತೆ ಇರುವುದು ಬ್ಯಾಟಿಂಗ್ ವಿಭಾಗದಲ್ಲಿ. ನಾಯಕ ಕೇನ್ ವಿಲಿಯಮ್ಸನ್, ಶಿಖರ್ ಧವನ್, ಮನೀಷ್ ಪಾಂಡೆ ಅವರ ಆಟವೇ ಮುಖ್ಯ. ಮಧ್ಯಮ ಕ್ರಮಾಂಕದಲ್ಲಿ  ಯುಸೂಫ್ ಪಠಾಣ್ ಅವರು ದೊಡ್ಡ ಮೊತ್ತ ಗಳಿಸಲು ಸಾಧ್ಯವಾದರೆ ಎದುರಾಳಿ ಪಡೆ ಮೇಲೆ ಒತ್ತಡ ಹಾಕಲು ಸಾಧ್ಯವಾಗುತ್ತದೆ. ಆದರೆ ಈಚೆಗೆ ನಡೆದ ಎರಡೂ ಪಂದ್ಯಗಳಲ್ಲಿ ಕೆಕೆಆರ್ ತಂಡದ ಬೌಲರ್‌ಗಳು ಉತ್ತಮವಾಗಿ ಆಡಿದ್ದಾರೆ.

ತಂಡದಲ್ಲಿರುವ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ, ಆ್ಯಂಡ್ರೆ ರಸೆಲ್, ಸ್ಪಿನ್ನರ್‌ಗಳಾದ ಸುನಿಲ್ ನಾರಾಯಣ್, ಪಿಯೂಷ್ ಚಾವ್ಲಾ ಮತ್ತು ಕುಲದೀಪ್ ಯಾದವ್ ಅವರ ದಾಳಿಯನ್ನು ಎದುರಿಸಿ ನಿಂತರೆ ಸನ್‌ರೈಸರ್ಸ್ ತಂಡವು ಗೆಲುವಿನತ್ತ ಸಾಗಬಹುದು. ಈಡನ್ ಅಂಗಳದ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವ ನಿರೀಕ್ಷೆ ಇದೆ.

**

ಫೈನಲ್ ಪಂದ್ಯದ ವಿಡಿಯೊ: ಟ್ವಿಟರ್‌ನಲ್ಲಿ ಆಕ್ರೋಶ

ಹಾಟ್‌ಸ್ಟಾರ್‌ ಆ್ಯಪ್‌ನಲ್ಲಿ ಐಪಿಎಲ್ ಟೂರ್ನಿಯ ಫೈನಲ್‌ ಪಂದ್ಯದ ಪ್ರೊಮೊ ಬಗ್ಗೆ ಟ್ವಿಟರ್‌ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 27ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗುವ ವಿಡಿಯೊ ಇದಾಗಿದೆ.

ಚೆನ್ನೈ ತಂಡವು ಈಗಾಗಲೇ ಫೈನಲ್ ಪ್ರವೇಶಿಸಿದೆ. ಶುಕ್ರವಾರ ನಡೆಯುವ ಎರಡನೇ ಕ್ವಾಲಿಫೈಯರ್‌ನಲ್ಲಿ ಕೆಕೆಆರ್ ಮತ್ತು ಸನ್‌ರೈಸರ್ಸ್‌ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಫೈನಲ್‌ ಆಡಲಿದೆ. ಆದರೆ ಸಿಎಸ್‌ಕೆ ಮತ್ತು ಕೆಕೆಆರ್ ಮುಖಾಮುಖಿಯಾಗುವ ವಿಡಿಯೊ ತುಣುಕು ಗುರುವಾರ ಪ್ರಸಾರವಾಗಿದೆ. ಅದರಲ್ಲಿ ಈ ಹಿಂದೆ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಕೆಕೆಆರ್ ತಂಡದ ಆಟಗಾರರು ಆಡಿದ್ದ ತುಣುಕು ಇದಾಗಿದೆ  ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆ ಆರಂಭವಾದ ಕೂಡಲೇ ಈ ವಿಡಿಯೊ ತುಣುಕನ್ನು ಹಾಟ್‌ಸ್ಟಾರ್ ಕಿತ್ತು ಹಾಕಿದೆ.

‘ಇಡೀ ಐಪಿಎಲ್ ಟೂರ್ನಿ ಫಿಕ್ಸಿಂಗ್ ಆಗಿದೆ. ಫಲಿತಾಂಶವು ಪೂರ್ವನಿಯೋಜಿತವಾಗಿರುವ ಟೂರ್ನಿ ಇದಾಗಿದೆ.  ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿವೆ. ಮಹೇಂದ್ರಸಿಂಗ್ ದೋನಿ ಮತ್ತು ಕೆಕೆಆರ್ ತಂಡದ ಮಾಲೀಕ, ಬಾಲಿವುಡ್ ನಟ ಶಾರೂಕ್ ಖಾನ್ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಬರುತ್ತಾರೆ. ಆದ್ದರಿಂದ ಟಿವಿ ವಾಹಿನಿಗಳಿಗೆ ಟಿಆರ್‌ಪಿ ಹೆಚ್ಚುತ್ತದೆ. ಆದ್ದರಿಂದ ಬಿಸಿಸಿಐ ಕೆಕೆಆರ್ ತಂಡವು ಫೈನಲ್‌ ಪ್ರವೇಶಿಸುವಂತೆ ನೋಡಿಕೊಳ್ಳುತ್ತದೆ’ ಎಂದು  ಅಂಕುಶ್ ರಾಥೋರಿ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

**

ತಂಡಗಳು

ಕೋಲ್ಕತ್ತ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್ (ನಾಯಕ), ಸುನಿಲ್ ನಾರಾಯಣ್, ಆ್ಯಂಡ್ರೆ ರಸೆಲ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ಕುಲದೀಪ್ ಯಾದವ್, ಪಿಯೂಷ್ ಚಾವ್ಲಾ, ನಿತೀಶ್ ರಾಣಾ, ಪ್ರಸಿದ್ಧ ಕೃಷ್ಣ, ಶಿವಂ ಮಾವಿ, ಮಿಷೆಲ್ ಜಾನ್ಸನ್, ಶುಭಮನ್ ಗಿಲ್, ಆರ್. ವಿನಯಕುಮಾರ್, ರಿಂಕು ಸಿಂಗ್, ಕ್ಯಾಮರಾನ್ ಡೆಲ್‌ಪೋರ್ಟ್, ಜೇವನ್ ಸೀರ್‌ಲೆಸ್, ಅಪೂರ್ವ್ ವಾಂಖೆಡೆ, ಇಶಾಂಕ್ ಜಗ್ಗಿ, ಟಾಮ್ ಕುರ್ರನ್, ಮುಖ್ಯ ಕೋಚ್: ಜ್ಯಾಕ್  ಕಾಲಿಸ್.

ಸನ್‌ರೈಸರ್ಸ್‌ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಶಿಖರ್ ಧವನ್, ಮನೀಷ್ ಪಾಂಡೆ, ಭುವನೇಶ್ವರ್ ಕುಮಾರ್, ವೃದ್ಧಿಮಾನ್ ಸಹಾ, ಸಿದ್ಧಾರ್ಥ್ ಕೌಲ್, ದೀಪಕ್ ಹೂಡಾ, ಖಲೀಲ್ ಅಹಮದ್, ಸಂದೀಪ್ ಶರ್ಮಾ, ಯೂಸುಫ್ ಪಠಾಣ್, ಶ್ರೀವತ್ಸ ಗೋಸ್ವಾಮಿ, ರಿಕಿ ಭುಯ್, ಬೇಸಿಲ್ ಥಂಪಿ, ಟಿ. ನಟರಾಜನ್, ಸಚಿನ್ ಬೇಬಿ, ವಿಪುಲ್ ಶರ್ಮಾ, ಮೆಹದಿ ಹಸನ್, ತನ್ಮಯ್ ಅಗರವಾಲ್, ಅಲೆಕ್ಸ್‌ ಹೇಲ್ಸ್‌, ಕಾರ್ಲೋಸ್ ಬ್ರಾಥ್‌ವೇಟ್, ರಶೀದ್ ಖಾನ್, ಶಕೀಬ್ ಅಲ್ ಹಸನ್, ಮೊಹಮ್ಮದ್ ನಬಿ, ಕ್ರಿಸ್ ಜೋರ್ಡಾನ್. ಮುಖ್ಯ ಕೋಚ್ : ಟಾಮ್ ಮೂಡಿ.

‘ಸಿಎಸ್‌ಕೆ ಮತ್ತು ಕೆಕೆಆರ್ ಫೈನಲ್‌ಗೆ ಬರುವುದು ಖಚಿತ ಎಂದು ಹಾಟ್‌ಸ್ಟಾರ್‌ ಗ್ರಹಿಸಿದೆ. ಇದು ಫಿಕ್ಸ್‌ ಆಗಿರುವುದರ ಸಂಕೇತ’ ಎಂದು ಶರಣ್ ಎಂಬುವವರು ಟ್ವೀಟ್‌ ಮಾಡಿದ್ದಾರೆ.

**

ಸ್ನಾನ ಮಾಡುತ್ತ ಶುಭ ಹಾರೈಸಿದ ಶಾರೂಕ್

ಕೋಲ್ಕತ್ತ ನೈಟ್‌ ರೈಡರ್ಸ್‌ ಫ‍್ರ್ಯಾಂಚೈಸ್‌ನ ಸಹಮಾಲೀಕ ಶಾರೂಕ್ ಖಾನ್ ಅವರು ತಮ್ಮ ತಂಡದ ಆಟಗಾರರಿಗೆ ಶುಭ ಹಾರೈಸಿದ ವಿಡಿಯೊ ವೈರಲ್ ಆಗಿದೆ. ಶಾರೂಕ್ ಸ್ನಾನ ಮಾಡುತ್ತ ಶುಭ ಹಾರೈಸಿರುವುದು ಈ ವಿಡಿಯೊ ತುಣುಕಿನ ವಿಶೇಷ.

‘ನಿಮ್ಮೆಲ್ಲರನ್ನೂ ಭೇಟಿಯಾಗಲು ಇವತ್ತು ಸಾಧ್ಯವಾಗಿಲ್ಲ. ಆದ್ದರಿಂದ ಶಾವರ್‌ (ತಲೆಸ್ನಾನ) ಮಾಡುವುದನ್ನು ನಿಲ್ಲಿಸಿ ಶುಭ ಸಂದೇಶ ಕಳಿಸುತ್ತಿದ್ದೇನೆ. ಶುಕ್ರವಾರ ಚೆನ್ನಾಗಿ ಆಡಿ, ಅಲ್ಲಿ ನಾನೂ ಇರುತ್ತೇನೆ’ ಎಂದು ಖಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT