ಶುಕ್ರವಾರ, ಏಪ್ರಿಲ್ 23, 2021
24 °C
ಹೊಣಕೆರೆ ಹೋಬಳಿ ಸೋಮನಹಳ್ಳಿಯಲ್ಲಿ 10 ದಿನ ನಡೆಯುವ ಜಾತ್ರೆ

ವಿಜೃಂಭಣೆಯ ಸೋಮನಾಯಕಿ ಬ್ರಹ್ಮರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ತಾಲ್ಲೂಕಿನ ಶಕ್ತಿದೇವತೆಗಳಲ್ಲಿ ಪ್ರಮುಖವಾದ ಸೋಮನಾಯಕಿ ದೇವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ತಾಲ್ಲೂಕಿನ ಹೊಣಕೆರೆ ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಸೋಮನಹಳ್ಳಿ ಅಮ್ಮನ ಬ್ರಹ್ಮ ರಥೋತ್ಸವ, ಹಬ್ಬ ಮತ್ತು ಜಾತ್ರೆಯ ಅಂಗವಾಗಿ ಹತ್ತು ದಿನದ ಹಿಂದೆ ಸ್ಥಂಭ ಮುಹೂರ್ತ ಮತ್ತು ಅಂಕುರಾರ್ಪಣೆಯೊಂದಿಗೆ ಚಾಲನೆ ನೀಡಲಾಗಿತ್ತು. ಪ್ರತಿ ದಿನ ಸುತ್ತಮುತ್ತಲಿನ ಗ್ರಾಮಗಳಾದ ಗಂಗನಹಳ್ಳಿ, ಅಲ್ಪಹಳ್ಳಿ, ಹೊಣಕೆರೆ, ಸೋಮನಹಳ್ಳಿ ಗ್ರಾಮಸ್ಥರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಸೋಮನಾಯಕಿ ಮೂಲ ದೇವಸ್ಥಾನಕ್ಕೆ ಚೀಣ್ಯಾದಿಂದ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು. ಹೊಣಕೆರೆ ಗ್ರಾಮಸ್ಥರಿಂದ ವಿಶೇಷ ಉತ್ಸವ ಮತ್ತು ಓಕುಳಿ ಹಬ್ಬ ಜರುಗಿದವು. ಸಂಜೆಯ ವೇಳೆಗೆ ಮಡೆ ಉತ್ಸವ ಸೇವೆ ಜರುಗಿತು.

ಶನಿವಾರ ಚೀಣ್ಯ, ಸೋಮನಹಳ್ಳಿ, ಅಲ್ಪಹಳ್ಳಿ, ಗಂಗನಹಳ್ಳಿ, ವಡ್ಡರಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಮಧ್ಯಾಹ್ನ ಪೂಜೆಯೊಂದಿಗೆ ಕುರುಜುಬಂಡಿ ಉತ್ಸವ, ನೈವೇದ್ಯ, ಉಪಾಹಾರ ವಿನಿಯೋಗ, ನೂರೊಂದು ಎಡೆ ಮತ್ತು ಅಮ್ಮನವರ ಉತ್ಸವ, ಕೊಂಡೋತ್ಸವ ಜರುಗಿದವು.

ಭಾನುವಾರದಂದು ಬ್ರಹ್ಮರಥೋತ್ಸವದ ಅಂಗವಾಗಿ ಮುತ್ತೈದೆಯರು ಮಡೆ ಮತ್ತು ತಂಬಿಟ್ಟಿನ ಆರತಿಯನ್ನು ಅಲಂಕಾರ ಮಾಡಿಕೊಂಡು ಬಂದು ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿದರು. ಮುಂಜಾನೆಯಿಂದಲೇ ದೇವಾಲಯದಲ್ಲಿ ಚಂಡಿ ಹೋಮ ಮತ್ತು ಶುದ್ಧಿ ಹೋಮ, ಗರ್ಭಗುಡಿಯಲ್ಲಿರುವ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಲಂಕಾರ ಮಾಡಲಾಗಿತ್ತು.

ಮಧ್ಯಾಹ್ನ ನಡೆದ ಬ್ರಹ್ಮರಥೋತ್ಸವದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಬಂದು ತೇರನ್ನು ಎಳೆದರು. ಬಾಳೆಹಣ್ಣು ಮತ್ತು ಜವನವನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಜಾತ್ರೆಯಲ್ಲಿ ತಾಲ್ಲೂಕು ಆಡಳಿತದ ಅಧಿಕಾರಿಗಳು ಭಾಗವಹಿಸಿದ್ದರು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಪ್ರತಿ ವರ್ಷ ಜಾತ್ರೆಗೆ ಬರುತ್ತಿದ್ದು, ಎಲ್ಲಾ ಹರಕೆಗಳು ಫಲಿಸುವ ಜೊತೆಗೆ ಒಳ್ಳೆಯದಾಗಿದೆ. ಪ್ರತಿ ವರ್ಷ ಜಾತ್ರೆಗೆ ಬಂದು ಸೇವೆ ಸಲ್ಲಿಸುತ್ತಿದ್ದೇನೆ ಎಂದು ಜಾತ್ರೆಗೆ ಬಂದಿದ್ದ ಭಕ್ತರಾದ ವಿನಯ್ ಕುಮಾರ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.