ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲೆಯಲ್ಲ ಈ ಅಹಲ್ಯೆ

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪೂರ್ಣಚಂದ್ರನ ಅಳತೆ ತೆಗೆದುಕೊಂಡು ರೂಪಿಸಲಾಗಿದೆಯೋ ಎಂಬಂಥ ದುಂಡು ಮುಖ. ಹಾಲಿನ ಕೆನೆಯ ಬಣ್ಣವನ್ನು ಎರಕ ಹೊಯ್ದಂಥ ಮೈಬಣ್ಣ, ಕನಸುಗಳನ್ನೇ ಉರುವಲಾಗಿಸಿಕೊಂಡು ಮಿನುಗುವ ಜೋಡಿಕಂಗಳು, ನಕ್ಕರೆ ಮಲ್ಲಿಗೆಯ ಮಳೆ ಸುರಿದಂತೆ... ಹಾಲಬಟ್ಟಲಲ್ಲಿ ಬೆಳಕು ಹೊಳೆದಂತೆ... ಅರೆರೆ ಇಂಥ ಸೌಂದರ್ಯವನ್ನು ಹಾಗೇ ಬಿಟ್ಟುಬಿಟ್ಟರೆ ದೃಷ್ಟಿ ತಾಕೀತು ಎಂಬ ಅಂಜಿಕೆಯಿಂದ ಎಡಗೆನ್ನೆಯ ಮೇಲೆ ಸೃಷ್ಟಿಕರ್ತನೇ ಇಟ್ಟಿರುವ ಸಿಹಿಮುತ್ತಿನ ಗುರುತಿನಂಥ ಕಪ್ಪುಚುಕ್ಕಿ...

ಮೃದುಭಾವವೇ ಮೈದಳೆದಂಥ ರೂಪಿನ ಅಹಲ್ಯಾ ಸುರೇಶ್‌ ಧ್ವನಿಯಲ್ಲಿ ಮಾತ್ರ ದೃಢವಿಶ್ವಾಸ ಎದ್ದು ಕಾಣುತ್ತದೆ.

‘ಯಶಸ್ಸಿನ ಉತ್ತುಂಗಕ್ಕೇರದೇ ಇಲ್ಲಿಂದ ಮರಳಲಾರೆ. ಎಷ್ಟೇ ಕಷ್ಟವಾಗಲಿ ಗೆದ್ದೇ ಬರುತ್ತೇನೆ ಎಂದು ಅಪ್ಪನಿಗೆ ಮಾತು ಕೊಟ್ಟಿದ್ದೇನೆ’ ಎನ್ನುವಾಗ ಅವರ ಸೌಂದರ್ಯದ ಹಿಂದಿರುವ ಛಲದ ದರ್ಶನವೂ ಆಗುತ್ತದೆ.

ಚಿಕ್ಕಬಳ್ಳಾಪುರದ ಈ ಹುಡುಗಿ ರಾಜಧಾನಿಗೆ ಬಂದಿದ್ದು ಎಂಬಿಎ ಓದುವ ಉದ್ದೇಶಕ್ಕಾಗಿ. ಆದರೆ ನಿರೀಕ್ಷೆಯೇ ಇಲ್ಲದೇ ‘ಕಮರೊಟ್ಟು ಚೆಕ್‌ಪೋಸ್ಟ್‌’ ಎಂಬ ಹಾರರ್‌ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಶಿಕ್ಷಣ ಮತ್ತು ಸಿನಿಮಾ ಹೀಗೆ ಅವರ ಬದುಕಿನ ದಾರಿ ಎರಡು ಕವಲುಗಳಲ್ಲಿ ಒಡೆದುಕೊಂಡಿತ್ತು. ಆಗ ಅವರು ಆಯ್ದುಕೊಂಡಿದ್ದು ಸಿನಿಮಾ. ಮಗಳ ಮೇಲೆ ನಂಬಿಕೆಯಿಟ್ಟು ಅಪ್ಪ– ಅಮ್ಮನೂ ಬೆಂಬಲ ನೀಡಿದರು.

ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯಾಗಲಿ, ನಟಿಸುತ್ತೇನೆ ಎಂಬ ಅರಿವಾಗಲಿ ಅವರಿಗೆ ಇರಲೇ ಇಲ್ಲ. ನಟನೆಯಲ್ಲಿ ಅಷ್ಟೊಂದು ಆಸಕ್ತಿಯನ್ನೂ ಇಟ್ಟುಕೊಂಡವರಲ್ಲ. ಅಷ್ಟೇ ಏಕೆ, ಚಿಕ್ಕಂದಿನಿಂದಲೂ ಅಹಲ್ಯಾ ಮೂಡಿ ಸ್ವಭಾವದವರು. ನಾಲ್ಕು ಜನ ಒಂದು ಕಡೆ ಸೇರಿದ್ದರೆ ಅತ್ತ ತಲೆಯನ್ನೂ ಹಾಕುತ್ತಿರಲಿಲ್ಲ. ಮೌನವೇ ಆಭರಣವಾಗಿದ್ದ ಅವರೀಗ ಮಾತನ್ನೇ ಬಂಡವಾಳ ಮಾಡಿಕೊಳ್ಳುವ ನಟನೆಯ ಜಗತ್ತಿಗೆ ಅಡಿಯಿಟ್ಟಿದ್ದಾರೆ.

‘ಇರಲಿ ನೋಡೋಣ’ ಎಂದು ಅಂದುಕೊಂಡು ಒಂದು ಸಿನಿಮಾದಲ್ಲಿ ನಟಿಸಿದ್ದು ಅವರ ಬದುಕಿನ ಕನಸು, ಉದ್ದೇಶಗಳನ್ನೇ ಬದಲಿಸಿಬಿಟ್ಟಿದೆ.

‘ಎಲ್ಲರ ಒಳಗೂ ಒಂದು ಸುಪ್ತ ಪ್ರತಿಭೆ ಇರುತ್ತದಂತೆ. ಅವಕಾಶ ಸಿಕ್ಕಾಗ ಅದು ಮುನ್ನೆಲೆಗೆ ಬರುತ್ತದೆ. ನನ್ನೊಳಗೂ ಇಂಥದ್ದೊಂದು ನಟನಾ ಪ್ರತಿಭೆ ಇದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಯಾವಾಗ ‘ಕಮರೊಟ್ಟು ಚೆಕ್‌ಪೋಸ್ಟ್‌’ ಸಿನಿಮಾದಲ್ಲಿ ಕ್ಯಾಮೆರಾ ಎದುರು ನಿಂತು ನಟಿಸಿದೆನೋ ನನ್ನ ಭವಿಷ್ಯ ಇರುವುದು ಈ ಕ್ಷೇತ್ರದಲ್ಲಿಯೇ ಎಂದು ಗೊತ್ತಾಗಿಹೋಯ್ತು. ಇಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿದೆ. ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ತೆಗೆದುಕೊಂಡೆ. ವಿಪರೀತ ಸಿನಿಮಾಗಳನ್ನು ನೋಡತೊಡಗಿದೆ. ಬೇರೆ ಬೇರೆ ನಟ–ನಟಿಯರು ಹೇಗೆ ನಟಿಸುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಅಭಿನಯದ ಪಾಠ ಕಲಿತೆ’ ಎನ್ನುವ ಅಹಲ್ಯಾ ಯಾವುದೇ ನಟನಾ ತರಬೇತಿ ಪಡೆದವರಲ್ಲ. ಅವರಿಗದು ಬೇಕು ಅಂತಲೂ ಅನಿಸಿಲ್ಲ. ಒಂದೊಂದು ಸಿನಿಮಾದಲ್ಲಿಯೂ ಹೊಸ ಹೊಸ ವಿಷಯಗಳನ್ನು ಕಲಿಯುತ್ತಲೇ ಇದ್ದೇನೆ ಎನ್ನುತ್ತಾರೆ ಅವರು.

ಅಹಲ್ಯಾ ನಟನೆಯ ಮೊದಲನೇ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಅವಕಾಶಗಳು ಮಾತ್ರ ಒಂದರ ಹಿಂದೊಂದರಂತೆ ಅರಸಿಕೊಂಡು ಬರುತ್ತಿವೆ. ಅವುಗಳಲ್ಲಿ ಸಾಕಷ್ಟು ವೈವಿಧ್ಯವೂ ಇವೆ. ಮೋಹನ್‌ ನಿರ್ದೇಶನದ ‘ಆದಿಪುರಾಣ’ ಎಂಬ ಸಿನಿಮಾದಲ್ಲಿ ಅವರು ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಹುಡುಗರ ‘ಲುಂಗಿ’ ಸಿನಿಮಾದಲ್ಲಿಯೂ ಕ್ರಿಶ್ಚಿಯನ್‌ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ‘ಲುಂಗಿ ಚಿತ್ರದಲ್ಲಿ ಪ್ರೇಮ, ಪ್ರೇಮವೈಫಲ್ಯ ಹೀಗೆ ಹಲವು ಭಾವನೆಗಳು ಇರುವ ಪಾತ್ರ. ಪಕ್ಕಾ ಕಮರ್ಷಿಯಲ್ ಶೈಲಿಯ ಪಾತ್ರವದು. ಆ ಪಾತ್ರದ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆಗಳಿವೆ’ ಎನ್ನುತ್ತಾರೆ ಅವರು.

ಕನ್ನಡದ ಗಡಿಯನ್ನೂ ದಾಟಿ ತಮಿಳಿನಲ್ಲಿಯೂ ಹೆಜ್ಜೆಯಿಟ್ಟು ಬಂದಿದ್ದಾರೆ ಅಹಲ್ಯಾ. ‘ವೆನ್ನಿಲಾ ಕಬ್ಬಡಿ ಕುಝು 2’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅವರು ನಟಿಸಿದ್ದಾರೆ. ತನಗೆ ಬಾರದ ಭಾಷೆಯೊಂದರ ಚಿತ್ರದಲ್ಲಿ ನಟಿಸಿದ್ದು ಅವರಿಗೆ ವಿಶಿಷ್ಟ ಅನುಭವ ನೀಡಿದೆಯಂತೆ.

ಅಹಲ್ಯಾ ಇದುವರೆಗೆ ನಟಿಸಿರುವ ಎಲ್ಲ ಚಿತ್ರಗಳಲ್ಲಿಯೂ ಎರಡು ನಾಯಕಿಯರು. ಹಾಗಾಗಿಯೇ ನಾನೊಬ್ಬಳೇ ನಾಯಕಿ ಆಗಿರುವ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆಯೂ ಅವರಿಗೆ ಸಹಜವಾಗಿಯೇ ಇದೆ.

‘ನಾನು ನಟಿಸುವ ಪಾತ್ರ  ಸವಾಲಿನದಾಗಿರಬೇಕು. ಹಾಗೆಯೇ ಪ್ರೇಕ್ಷಕರಿಗೆ ಇಷ್ಟವಾಗುವ ಹಾಗೆ ಇರಬೇಕು. ಸುಮ್ಮನೇ ಬಂದು ಹೋಗುವ ಪಾತ್ರದಲ್ಲಿ ನಟಿಸಲು ಇಷ್ಟವಿಲ್ಲ’ ಎಂದು ಅವರು ಸ್ಪಷ್ಟವಾಗಿಯೇ ಹೇಳುವ ಇವರು ಅನುಷ್ಕಾ ಶೆಟ್ಟಯ ದೊಡ್ಡ ಅಭಿಮಾನಿ. ಅವರು ಹೇಗೆ ಒಂದಕ್ಕಿಂತ ಇನ್ನೊಂದು ಭಿನ್ನ ಪಾತ್ರಗಳಲ್ಲಿ ನಟಿಸುತ್ತಾರೆಯೋ ತಾನೂ ಹಾಗೆಯೇ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎಂಬ ಕನಸನ್ನೂ ಇಟ್ಟುಕೊಂಡವರು.

ದಾರಿತಪ್ಪಿ ಚಂದನವನದೊಳಗೆ ಬಂದು ಇಲ್ಲಿನ ಗಾಳಿ ಗಂಧಕ್ಕೆ ಮಾರುಹೋಗಿರುವ ಅಹಲ್ಯಾ, ಇಲ್ಲಿಯೇ ಬೇರೂರುವ ಪ್ರತಿಭೆ ಮತ್ತು ಆಕಾಶಕ್ಕೆ ಜಿಗಿದು ಹೊಳೆಯುವ ಕನಸು ಎರಡನ್ನೂ ತಮ್ಮೊಳಗೆ ಇರಿಸಿಕೊಂಡಿದ್ದಾರೆ.
***
ಜ್ಯೂನಿಯರ್‌ ಸಾನ್ವಿ ಹಣೆಪಟ್ಟಿ!
ಅಹಲ್ಯಾ ಕನ್ನಡಕ ತೊಟ್ಟು ನಿಂತರೆ ‘ಕಿರಿಕ್‌ ಪಾರ್ಟಿ’ ಚಿತ್ರದ ಸಾನ್ವಿ ಪಾತ್ರಧಾರಿ ರಶ್ಮಿಕಾ ಮಂದಣ್ಣ ಅವರನ್ನು ತುಸು ಹೋಲುತ್ತಾರೆ. ಇದನ್ನೇ ಮುಂದಿಟ್ಟುಕೊಂಡು ಅವರನ್ನು ಜ್ಯೂನಿಯರ್‌ ಸಾನ್ವಿ ಎಂದೂ ಹಲವರು ಕರೆಯಲು ಆರಂಭಿಸಿದ್ದರಂತೆ. ಎಲ್ಲಿ ಹೋದರೂ ಇದೇ ಮಾತು ಕೇಳಿಬರತೊಡಗಿದಾಗ ಅವರು ಕನ್ನಡಕ ಹಾಕುವುದನ್ನೇ ಬಿಟ್ಟುಬಿಟ್ಟರಂತೆ!

ಹಾಗಂತ ಜನರ ಈ ಹೋಲಿಕೆಯನ್ನು ಅವರೇನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ‘ನನಗೆ ರಶ್ಮಿಕಾಗೆ ತುಂಬ ವ್ಯತ್ಯಾಸಗಳಿವೆ. ಇಬ್ಬರೂ ಕನ್ನಡಕ ಹಾಕಿಕೊಳ್ಳುವುದರಿಂದ ಹೋಲಿಕೆ ಕಾಣಬಹುದಷ್ಟೆ’ ಎಂದು ನಕ್ಕು ಸುಮ್ಮನಾಗುತ್ತಾರೆ.

ಇನ್ನೂ ಒಂದು ಸ್ವಾರಸ್ಯಕರ ಸಂಗತಿ ಏನೆಂದರೆ ಅಹಲ್ಯಾ ಅವರಿಗೆ ರಕ್ಷಿತ್‌ ಶೆಟ್ಟಿ ನೆಚ್ಚಿನ ನಟ. ‘ನಾನು ರಕ್ಷಿತ್‌ ಅವರ ಅಭಿಮಾನಿ. ಒಂಥರಾ ಕ್ರಶ್‌ ಅವರ ಮೇಲೆ... ಒಂದು ಸಲವಾದರೂ ಅವರ ಜತೆ ನಟಿಸಬೇಕು ಎಂಬ ಆಸೆ ಇದೆ. ಸಾಧ್ಯವಾದಷ್ಟೂ ಬೇಗೆ ಅದು ಸಾಧ್ಯವಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ’ ಎಂದು ನಾಚಿಕೆಯ ನಗು ಬೀರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT