ಮಂಗಳವಾರ, ನವೆಂಬರ್ 24, 2020
25 °C
ಪ್ರಧಾನ ಅರ್ಚಕ ಲಕ್ಷ್ಮೀಶರ ಚಿಂತನೆಗಳಿಗೆ ರೂಪ ನೀಡುವ ಕಲಾವಿದ ಸಂದೇಶ!

PV Web Exclusive | ಅಲಂಕಾರದಿಂದಲೇ ಭಕ್ತರ ಸೆಳೆಯುವ ಚಾಮುಂಡಿ!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಚಾಮುಂಡೇಶ್ವರಿ ಎಂದೊಡನೆ ಮೈಸೂರು ನೆನಪಾಗುತ್ತದೆ. ಚಾಮುಂಡಿ ಬೆಟ್ಟಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ತಪ್ಪದೇ ಬೆಟ್ಟಕ್ಕೆ ತೆರಳಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವ ಜೊತೆಗೆ ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಾರೆ. ಆದರೆ ಮೈಸೂರಿಗೆ ಸಮೀಪದಲ್ಲೇ ಇರುವ ಐತಿಹಾಸಿಕ ದ್ವೀಪನಗರಿ ಶ್ರೀರಂಗಪಟ್ಟಣದಲ್ಲಿರುವ ಚಾಮುಂಡೇಶ್ವರಿ ದೇವಾಲಯ ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ. ಸ್ಮಾರಕಗಳ ಪಟ್ಟಣಕ್ಕೆ ಭೇಟಿ ಕೊಡುವ ಪ್ರವಾಸಿಗರು ಇಲ್ಲಿಯ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುವುದಿಲ್ಲ. ಆದರೆ, ಚಾಮುಂಡೇಶ್ವರಿಯ ಆಕರ್ಷಕ, ವೈವಿಧ್ಯಮಯ ಅಲಂಕಾರವನ್ನು ಕಂಡವರು ತಪ್ಪದೇ ಈ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯ ಸಣ್ಣದಾದರೂ ದೇವಿಯ ಅಲಂಕಾರ ಭಕ್ತಕೋಟಿಯ ಮನಸೂರೆಗೊಳ್ಳುತ್ತದೆ. ಈ ನವರಾತ್ರಿಯಲ್ಲಿ ಪ್ರತಿದಿನ ಒಂದೊಂದು ಅಲಂಕಾರದಲ್ಲಿ ಕಂಗೊಳಸುತ್ತಿರುವ ಚಾಮುಂಡಿ ತಾಯಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಕರ್ಷಕ ಅಲಂಕಾರವನ್ನು ಕಂಡವರು ರಾಜ್ಯ, ಹೊರರಾಜ್ಯಗಳಿಂದಲೂ ದೇವಾಲಯ ಹುಡುಕಿಕೊಂಡು ಶ್ರೀರಂಗಪಟ್ಟಣಕ್ಕೆ ಬರುತ್ತಾರೆ.


ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಧಾನ ಅರ್ಚಕ ಡಾ.ಲಕ್ಷ್ಮೀಶ್‌ (ಬಲಕ್ಕೆ), ಕಲಾವಿದ ಸಂದೇಶ್‌ ಇದ್ದಾರೆ

ಇಷ್ಟು ಸಣ್ಣ ದೇವಾಲಯದಲ್ಲಿ ಎಷ್ಟೊಂದು ವಿಶಾಲ ಅಲಂಕಾರ ಎಂದು ಭಕ್ತರು ಆಶ್ಚರ್ಯ ವ್ಯಕ್ತಪಡಿಸುವುದು ಸಾಮಾನ್ಯ. ನವರಾತ್ರಿಯ ಪೌರಾಣಿಕ ಮಹಿಮೆಯನ್ನು ದೇವಿಯ ಅಲಂಕಾರದ ಮೂಲಕವೇ ಅನಾವರಣಗೊಳಿಸುತ್ತಿರುವುದು ವಿಶೇಷ. ದೇವಾಲಯದ ಪ್ರಧಾನ ಅರ್ಚಕರಾಗಿರುವ ಡಾ.ಲಕ್ಷ್ಮೀಶ ಹಾಗೂ ಕಲಾವಿದ ಸಂದೇಶ ಜೋಡಿ ದೇವಿಗೆ ವಿಶೇಷ ರೂಪ ನೀಡಿ ಭಕ್ತರನ್ನು ಸೆಳೆಯುತ್ತಿದ್ದಾರೆ.

ಅರ್ಚಕ ಲಕ್ಷ್ಮೀಶ ಅವರು ದೇವಿಯ ಮಹಿಮೆ ವಿವರಿಸಿದರೆ ಕಲಾವಿದ ಸಂದೇಶ ಅದಕ್ಕೆ ತಕ್ಕ ರೀತಿಯಲ್ಲಿ ರೂಪ ನೀಡುತ್ತಾರೆ. ನಾಲ್ಕೈದು ಮಂದಿ ಅವರಿಗೆ ಸಹಕಾರ ನೀಡಿದರೂ ಐದಾರು ಗಂಟೆಗಳ ಸತತ ಪ್ರಯತ್ನದ ಮೂಲಕ ದೇವಿಗೆ ಅಲಂಕಾರ ಮಾಡುತ್ತಾರೆ. ನವರಾತ್ರಿಯಲ್ಲಿ ಚಾಮುಂಡೇಶ್ವರಿಯ ನವ ಅವತಾರಗಳನ್ನು ಅಲಂಕಾರದಿಂದಲೇ ಬಿಂಬಿಸಲಾಗುತ್ತಿದೆ.


ನವರಾತ್ರಿಯ 2ನೇ ದಿನ ಚಾಮುಂಡೇಶ್ವರಿಗೆ ಬ್ರಹ್ಮಚಾರಿಣಿ ಅಲಂಕಾರ ಮಾಡಿರುವುದು

ಮೊದಲ ದಿನ ಶೈಲಪುತ್ರಿ: ಮಹಿಷಾಸುರ ದೇವತೆಗಳಿಗೆ ತೊಂದರೆ ಕೊಡುತ್ತಿದ್ದ. ಪ್ರಾಣಿ, ವ್ಯಕ್ತಿ, ಯಾವುದೇ ವಸ್ತುವಿನಿಂದ ಸಾವು ಬರಬಾರದು, ಹೆಣ್ಣಿನಿಂದ ಮಾತ್ರ ಸಾವು ಸಂಭವಿಸಬೇಕು ಎಂದು ಆತ ಬ್ರಹ್ಮದೇವನಿಂದ ವರ ಪಡೆದಿದ್ದ. ಅಬಲೆಯಾದ ಹೆಣ್ಣು ಶಕ್ತಿಶಾಲಿ ಪುರುಷನನ್ನು ಕೊಲ್ಲಲು ಸಾಧ್ಯವಿಲ್ಲ ಎಂಬುದು ಮಹಿಷಾಸುರನ ಲೆಕ್ಕಾಚಾರವಾಗಿತ್ತು. ಆದರೆ ಮಹಿಷಾಸುರನ ಲೆಕ್ಕಾಚಾರದ ದಿಕ್ಕು ತಪ್ಪಿಸಲು ದೇವತೆಗಳು ಯೋಜನೆ ರೂಪಿಸಿದ್ದರು. ರಕ್ಕಸ ಮಹಿಷಾಸುರನ ವಧೆಗಾಗಿ ಹಿಮಾಲಯದ ಬ್ರಹ್ಮಕುಂಡದಲ್ಲಿ ಹೆಣ್ಣುಮಗುವೊಂದರ ಜನನವಾಯಿತು. ಮಗುವಿಗೆ ದೇವತೆಗಳೆಲ್ಲರೂ ತಮ್ಮ ಶಕ್ತಿ ನೀಡಿ ಶಕ್ತಿಸ್ವರೂಪಿಯನ್ನಾಗಿ ಮಾಡಿದರು.

ಶೈಲಪುತ್ರಿ ಅವತಾರವನ್ನು ಲಕ್ಷ್ಮೀಶ‍– ಸಂದೇಶರು ಹಸಿರುಮಯ ರೂಪ ನೀಡಿದ್ದಾರೆ. ಸಂಪೂರ್ಣವಾಗಿ ವೀಳ್ಯದೆಲೆ ಮೂಲಕ ದೇವಿಗೆ ಅಲಂಕಾರ ಮಾಡಿದ್ದಾರೆ. ವನದ ಸಾಂಕೇತಿಕವಾಗಿ ಸಸ್ಯಗಳನ್ನಿಟ್ಟು ವಿಶೇಷ ರೂಪ ನೀಡಲಾಗಿದೆ. ದೇವರಿಗೆ ಮಗುವಿನ ರೂಪಕೊಟ್ಟು ಶೈಲಪುತ್ರಿಯ ಜನನವನ್ನು ಪ್ರತಿಬಿಂಬಿಸಲಾಗಿದೆ.


ನವರಾತ್ರಿಯ 5ನೇ ದಿನ ಚಾಮುಂಡೇಶ್ವರಿಗೆ ಪುಸ್ತಕಗಳಿಂದ ಸರಸ್ವತಿ ಅಲಂಕಾರ ಮಾಡಿರುವುದು

2ನೇ ದಿನ ಬ್ರಹ್ಮಚಾರಿಣಿ: ದೇವಿಯು ಬ್ರಹ್ಮನ ಕುರಿತಾಗಿ ತಪಸ್ಸು ಮಾಡುತ್ತಾಳೆ. ಇದರ ಸಾಂಕೇತಿಕವಾಗಿ ಚಾಮುಂಡೇಶ್ವರಿ ಗರ್ಭಗುಡಿಯಲ್ಲೇ ತಪೋವನ ಸೃಷ್ಟಿಸಲಾಗಿದೆ. ಗುಹೆಯ ಮಾದರಿಯಲ್ಲಿ ಅಲಂಕಾರ ಮಾಡಿ, ದೇವಿಯ ಕೈಗೆ ಕಮಂಡಲ ನೀಡಲಾಗಿದೆ. ಅಲಂಕಾರಿಕ ಗಿಡಗಳ ನಡುವೆ ದೇವಿಯನ್ನು ಪ್ರತಿಷ್ಠಾಪನೆ ಮಾಡಿದ ರೀತಿಯಲ್ಲಿ ಹೊಸ ರೂಪ ನೀಡಲಾಗಿದೆ.

3ನೇ ದಿನ ಚಂದ್ರಘಂಟ: ದೇವಿಯು ದೇವರ ಜಪ ಮಾಡುತ್ತಾ ತನ್ನ ಶಕ್ತಿಯನ್ನು ಹೆಚ್ಚಳ ಮಾಡಿಕೊಳ್ಳುತ್ತಾಳೆ. ದೇವತೆಗಳ ಶಕ್ತಿಯು ಶಿರದ ಮೂಲಕ ಚಂದ್ರಾಕೃತಿಯಲ್ಲಿ ಪ್ರವೇಶಮಾಡುತ್ತದೆ. ಈ ಹಿನ್ನೆಲೆಯನ್ನು  ದೇವಿಯ ಸುತ್ತಲೂ ಸೇವಂತಿಗೆ ಹೂವಿನಿಂದ ಚಂದ್ರಾಕೃತಿ ನಿರ್ಮಿಸಿ ಅಲಂಕಾರ ಮಾಡಲಾಗಿದೆ. ಆ ಮೂಲಕ ಪುಷ್ಪವಾಹಿನಿ ರೂಪದಲ್ಲೂ ದೇವಿಯ ದರ್ಶನ ನೀಡಲಾಗಿದೆ.


ನವರಾತ್ರಿಯ 4ನೇ ದಿನ ಚಾಮುಂಡೇಶ್ವರಿಗೆ ಚಕ್ಕುಲಿ, ಕೋಡುಬಳೆಗಳಿಂದ ಕೂಷ್ಮಾಂಡನಿದೇವಿ ಅಲಂಕಾರ  ಮಾಡಿರುವುದು

4ನೇ ದಿನ ಕುಷ್ಮಾಂಡಿನಿ: ಕುಷ್ಮಾಂಡಿನಿ ದೇವಿ ಅವತಾರದಲ್ಲಿ ದೇವಿಗೆ ವಿವಿಧ ಬಗೆಯ ಭಕ್ಷ್ಯ ಭೋಜನೆಗಳೆಂದರೆ ಬಲು ಇಷ್ಟ. ಉಪವಾಸ ವ್ರತಾಚರಣೆ ಮುಕ್ತಾಯದ ಸಂಕೇತ ಈ ಅವತಾರದಲ್ಲಿದೆ. ಈ ಹಿನ್ನೆಲೆಯೊಂದಿಗೆ ಚಕ್ಕುಲಿ, ಕೋಡುಬಳೆಗಳಿಂದಲೇ ದೇವಿಯ ಅಲಂಕಾರ ಮಾಡಲಾಗಿದೆ. ದೇವಿಯ ಮೂರ್ತಿಯ ಸುತ್ತಲೂ ಕಲಾತ್ಮಕವಾಗಿ ಚಕ್ಕುಲಿ, ಕೋಡುಬಳೆಯನ್ನು ಅಲಂಕಾರಿಕವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಈ ಅಲಂಕಾರ ಅಪಾರ ಸಂಖ್ಯೆಯ ಭಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮಕ್ಕಳು ಈ ಅಲಂಕಾರಕ್ಕೆ ಮನಸೋತಿದ್ದಾರೆ.

5ನೇ ದಿನ ಸರಸ್ವತಿ (ಸ್ಕಂದ ಮಾತೆ): ವೀಣಾಪಾಣಿ, ಪುಸ್ತಕಧಾರಿಣಿ ಅವತಾರವನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ದೇವಿಯ ಸುತ್ತಲೂ ಪುಸ್ತಕಗಳಿಂದಲೇ ರೂಪ ನೀಡಲಾಗಿದೆ. ಜಪಮಾಲೆ, ಶ್ವೇತವಸ್ತ್ರದ ಮೂಲಕ ದೇವಿಗೆ ರೂಪ ನೀಡಲಾಗಿದೆ. ಸಣ್ಣ ಸಣ್ಣ ನೂರಾರು ಪುಸ್ತಕಗಳನ್ನು ಅಲಂಕಾರಿಕವಾಗಿ ಜೋಡಿಸಲಾಗಿದೆ. ಇಂದಿನ ಆಧುನಿಕ, ಆನ್‌ಲೈನ್‌ ಯುಗದಲ್ಲಿ ಪುಸ್ತಕಗಳ ಮಹತ್ವವನ್ನು ಚಾಮುಂಡೇಶ್ವರಿ ತಾಯಿ ಸಾರುತ್ತಿದ್ದಾಳೆ ಎಂಬ ಭಾವ ಮೂಡುತ್ತದೆ.


ನವರಾತ್ರಿಯ 4ನೇ ದಿನ ಚಾಮುಂಡೇಶ್ವರಿಗೆ ಕೂಷ್ಮಾಂಡನಿದೇವಿ ಅಲಂಕಾರ ಮಾಡಿರುವುದು

6ನೇ ದಿನ ಕಾತ್ಯಾಯಿನಿ: ಶಕ್ತಿಲಹರಿಗಳ ಅಂಶ ದೇವಿಯಲ್ಲಿ ಪ್ರವೇಶ ಮಾಡಿದ್ದನ್ನು ಕಾತ್ಯಾಯಿನಿ ರೂಪದಲ್ಲಿ ಅನಾವರಣಗೊಳಿಸಲಾಗಿದೆ. ಶಾಂತ ರೂಪವನ್ನು ಕಡಿಮೆ ಮಾಡಿ ರೌದ್ರ ರೂಪವನ್ನು ಅಲಂಕಾರದಲ್ಲಿ ತುಂಬಲಾಗಿದೆ. ಇದು ಧನಲಕ್ಷ್ಮಿ ಅವತಾರವೂ ಆಗಿರುವ ಕಾರಣ ದೇವರನ್ನು ಸಂಪೂರ್ಣವಾಗಿ ನಾಣ್ಯಗಳಿಂದಲೇ ಅಲಂಕಾರ ಮಾಡಲಾಗಿದೆ. ಬಂಗಾರದ ಬಣ್ಣದಲ್ಲಿರುವ ₹ 5ರ ನಾಣ್ಯ, ₹ 1, ₹ 2ರ ನಾಣ್ಯಗಳನ್ನು ಆಕರ್ಷಕವಾಗಿ ಬಳಕೆ ಮಾಡಿಕೊಂಡು ರೂಪ ನೀಡಲಾಗಿದೆ.

ಈ ಗುರುವಾರಕ್ಕೆ (ಅ.22) 6 ದಿನ ಕಳೆದಿದ್ದು ನವರಾತ್ರಿಗೆ ಇನ್ನು ಮೂರು ದಿನ ಉಳಿದಿದೆ. 7ನೇ ದಿನ ಕಾಳರಾತ್ರಿ ಅವತಾರದ ಅಲಂಕಾರವನ್ನು ಕಾಳಿ, ರುಂಡ ಮಾಲೆ, ರಕ್ತ ಉಂಡೆಗಳನ್ನು ಸೃಷ್ಟಿಸಿ ದರ್ಶನ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 8ನೇ ದಿನ ದುರ್ಗೆ ಅವತಾರವಿದ್ದು ಅಸುರರನ್ನು ನಿರ್ನಾಮ ಮಾಡುವ ರೀತಿಯಲ್ಲಿ ತ್ರಿಶೂಲ ನೀಡಿ ಶಕ್ತಿರೂಪಿಣಿಯ ರೂಪ ನೀಡಲಾಗುತ್ತದೆ.


ನವರಾತ್ರಿಯ ಮೊದಲ ದಿನ ಚಾಮುಂಡೇಶ್ವರಿಗೆ ಶೈಲಪುತ್ರಿ ಅಲಂಕಾರ ಮಾಡಿರುವುದು

ಕಡೆಯ 9ನೇ ದಿನ ಸಿದ್ಧಿಧಾತ್ರಿ ಅವತಾರದಲ್ಲಿ ಚಾಮುಂಡೇಶ್ವರಿಯು ಭಕ್ತಿಯಿಂದ ಬೇಡುವವರಿಗೆ ಪ್ರಸನ್ನಳಾಗುತ್ತಾಳೆ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಣೆ ಮಾಡುವ ರೂಪ ಪಡೆಯುತ್ತಾಳೆ. ಈ ಅವತಾರವನ್ನು ನಾನಾ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಇಂದಿನ ಆಧುನಿಕ ಜಗತ್ತಿನಲ್ಲಿ ಪುರಾಣದ ಪರಂಪರೆಗಳು ಪುನರುಜ್ಜೀವನಗೊಳ್ಳಬೇಕಾದ ಅನಿವಾರ್ಯತೆ ಇದೆ. ನವರಾತ್ರಿ ವೇಳೆ ಚಾಮುಂಡೇಶ್ವರಿಯ 9 ಅವತಾರಗಳನ್ನು ಅಲಂಕಾರದ ಮೂಲಕ ವಿಶೇಷ ದರ್ಶನ ನೀಡಲಾಗುತ್ತಿದೆ. ಅಲಂಕಾರದ ಚಿತ್ರಗಳನ್ನು ಭಕ್ತರು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಕಾರಣ ಇದು ಪ್ರಸಿದ್ಧಿ ಪಡೆದಿದೆ’ ಎಂದು ಅರ್ಚಕರಾದ ಲಕ್ಷ್ಮೀಶ ತಿಳಿಸಿದರು.

ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ಈ ದೇವಾಲಯ ಜನರಲ್ಲಿ ಅಧ್ಯಾತ್ಮ ಭಾವ ಬೀರುತ್ತದೆ. ಪ್ರತಿ ಶುಕ್ರವಾರ, ಅಮಾವಾಸ್ಯೆ ಹುಣ್ಣಿಮೆ ದಿನದಂದು, ಹಬ್ಬ ಹರಿದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ಇರುತ್ತದೆ. ಎಲ್ಲಾ ಸಂದರ್ಭಗಳಲ್ಲೂ ದೇವಿಯ ಅಲಂಕಾರ ಭಕ್ತರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು