ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಜಿಲ್ಲೆಯ 1.55 ಲಕ್ಷ ಮಂದಿ ಮೇಲೆ ವಿಶೇಷ ನಿಗಾ

ಇತರ ಆರೋಗ್ಯ ಸಮಸ್ಯೆಗಳಿಂದ ಸತ್ತವರೇ ಹೆಚ್ಚು, ಕೋವಿಡ್‌ ಸಾವು ತಡೆಗಟ್ಟಲು ಕ್ರಮ
Last Updated 17 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ತೀವ್ರ ಉಸಿರಾಟ ತೊಂದರೆ, ಶ್ವಾಸಕೋಶ ಸಮಸ್ಯೆ, ಮಧುಮೇಹ, ಕಿಡ್ನಿ ವೈಫಲ್ಯ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 1.55 ಲಕ್ಷ ಮಂದಿಯನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು, ಅವರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಕೋವಿಡ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಶೇ 50ಕ್ಕೂ ಹೆಚ್ಚು ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರೇ ಆಗಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ 1.55 ಲಕ್ಷ ಮಂದಿಯನ್ನು ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಅವರನ್ನು ಕೋವಿಡ್‌ನಿಂದ ರಕ್ಷಣೆ ಮಾಡಲು ವಿಶೇಷ ತಪಾಸಣೆ ನಡೆಸಲಾಗುತ್ತಿದೆ.

ವೈರಲ್‌ ಜ್ವರ, ಡೆಂಗಿ, ಚಿಕೂನ್‌ ಗುನ್ಯಾ ಸೇರಿ ತೀವ್ರ ಉಸಿರಾಟ ತೊಂದರೆ, ರಕ್ತದೊತ್ತಡ, ಕಿಡ್ನಿ ವೈಫಲ್ಯ, ಶ್ವಾಸಕೋಶ ಸಮಸ್ಯೆಗಳಿಂದ ಬಳಲುವವರಿಗೆ ಕೊರೊನಾ ಲಕ್ಷಣ ಕಂಡುಬಂದರೆ ತಕ್ಷಣದಲ್ಲಿ ಚಿಕಿತ್ಸೆ ನೀಡುವುದು ಅವಶ್ಯವಾಗಿದೆ. ಸಮಸ್ಯೆ ಉಲ್ಬಣಗೊಂಡಾಗ ಆಸ್ಪತ್ರೆಗೆ ದಾಖಲಾದರೆ ಅವರನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ವಿಶೇಷ ನಿಗಾ ವಹಿಸಿಸಿದ್ದಾರೆ. ಸೋಮವಾರದವರೆಗೆ 87 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಅದರಲ್ಲಿ ಬಹುತೇಕ ಮಂದಿ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಾಗಿದ್ದಾರೆ.

28 ಮೊಬೈಲ್‌ ಟೀಂ: ಜಿಲ್ಲೆಯಾದ್ಯಂತ 28 ಸಂಚಾರಿ ಕೊರೊನಾ ಪರೀಕ್ಷಾ ತಂಡ ಕೆಲಸ ಮಾಡುತ್ತಿವೆ. ಪ್ರತಿ ತಾಲ್ಲೂಕಿಗೆ ತಲಾ ನಾಲ್ಕು ತಂಡಗಳು ಪರೀಕ್ಷೆ ನಡೆಸುತ್ತಿವೆ. ಕಂಟೈನ್‌ಮೆಂಟ್‌ ವಲಯ‌, ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗಿರುವ ಸ್ಥಳಗಳಿಗೆ ತೆರಳಿ ಪರೀಕ್ಷೆ ನಡೆಸಲಾಗುತ್ತಿದೆ.

ತಹಶೀಲ್ದಾರ್‌ ಅವರ ಸೂಚನೆ ಮೇರೆಗೆ ತಂಡ ರಚಿಸಲಾಗಿದ್ದು, ಸದಸ್ಯರು ಸ್ಥಳಕ್ಕೆ ತೆರಳಿ ಪರೀಕ್ಷೆ ನಡೆಸುತ್ತಿದ್ದಾರೆ. ಪ್ರತಿ ತಂಡದಲ್ಲಿ ಇಬ್ಬರು ಲ್ಯಾಬ್‌ ತಂತ್ರಜ್ಞರು‌, ಒಬ್ಬರು ಡಾಟಾ ಎಂಟ್ರಿ ಆಪರೇಟರ್‌ ಇರುತ್ತಾರೆ. ಜೊತೆಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ನಿರೀಕ್ಷಕ ಸಹಾಯ ಪಡೆಯಲಾಗುತ್ತಿದೆ.

ಮಂಡ್ಯ ನಗರದಲ್ಲಿ ಮಿಮ್ಸ್ ಆಸ್ಪತ್ರೆ, ಕ್ಯಾತುಂಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಹಳೇ ತಾಲ್ಲೂಕು ಆಸ್ಪತ್ರೆ, ಗುತ್ತಲು ಸರ್ಕಾರಿ ಶಾಲೆಯ ಬಳಿ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯ 116 ಪ್ರಾಥಮಿಕ ಆರೋಗ್ಯ ಕೇಂದ್ರ, 10 ಸಮುದಾಯ ಆರೋಗ್ಯ ಕೇಂದ್ರ, 6 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಯುತ್ತಿದೆ. ಇದಲ್ಲದೆ 3 ಬೃಹತ್‌ ಮೊಬೈಲ್‌ ಪರೀಕ್ಷಾ ವಾಹನಗಳು ಜಿಲ್ಲೆಯಾದ್ಯಂತ ಸಂಚಾರ ಮಾಡುತ್ತಿವೆ. ಇವುಗಳ ಮೂಲಕ ಕಾರ್ಖಾನೆ ಸೇರಿ ಜನನಿಬಿಡ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ.

***
ಲಕ್ಷ ದಾಟಿದ ಪರೀಕ್ಷೆ
ಸೆ. 15ರವರೆಗೆ ಜಿಲ್ಲೆಯಾದ್ಯಂತ 44,838 ರ‍್ಯಾಪಿಡ್‌ ಪರೀಕ್ಷೆ, 58,806 ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. ಒಟ್ಟು 1,03,644 ಮಂದಿ ಪರೀಕ್ಷೆಗೆ ಒಳಗಾಗಿದ್ದಾರೆ. ಜಿಲ್ಲೆಯ ಆದಿಚುಂಚನಗಿರಿ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತದೆ. ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕು ವ್ಯಾಪ್ತಿಯಲ್ಲಿನ ಮಾದರಿಗಳನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಉಳಿದ ತಾಲ್ಲೂಕುಗಳ ಮಾದರಿಗಳ ಪರೀಕ್ಷೆ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿದೆ.

ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ 431, ಖಾಸಗಿ ಆಸ್ಪತ್ರೆಗಳಲ್ಲಿ 108, ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ 459 ಚಿಕಿತ್ಸೆ ಪಡೆಯುತ್ತಿದ್ಧಾರೆ. 945 ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

**
ಕೋವಿಡ್‌ ಲಕ್ಷಣಗಳಿದ್ದರೂ ಯಾರ ಬಳಿಯೂ ಹೇಳದೆ ರೋಗ ಉಲ್ಬಣಗೊಂಡು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುವುದಕ್ಕಿಂತ ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ಬಂದರೆ ಸಾವು ಸಂಭವಿಸುವುದನ್ನು ತಡೆಯಬಹುದು.
–ಟಿ.ಎನ್‌.ಧನಂಜಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT