ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಲೀಪುರ: ವೈಕುಂಠದ್ವಾರ ದರ್ಶನ

ಇತಿಹಾಸ ಪ್ರಸಿದ್ಧ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ
Last Updated 25 ಡಿಸೆಂಬರ್ 2020, 6:08 IST
ಅಕ್ಷರ ಗಾತ್ರ

ಮದ್ದೂರು: ಇತಿಹಾಸ ಪ್ರಸಿದ್ಧ ಕದಲೀಪುರ ಗ್ರಾಮದ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಡಿ. 25ರಂದು ವೈಕುಂಠ ಏಕಾದಶಿ ಅಂಗವಾಗಿ ವೈಕುಂಠ ದ್ವಾರ ದರ್ಶನ ಹಾಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದು ಟ್ರಸ್ಟ್‌ನ ಸುಶೀಲಮ್ಮ ಮತ್ತು ಕೆ.ಟಿ.ಶಿವರಾಂ ತಿಳಿಸಿದ್ದಾರೆ.

ಅಂದು ದೇವರಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ, ದೇವಾಲಯಕ್ಕೆ ಬರುವ ಭಕ್ತರಿಗೆ ಬೆಳಗ್ಗೆ 6 ರಿಂದ ರಾತ್ರಿ 11 ಗಂಟೆಯವರಿಗೆ ವೈಕುಂಠ ದ್ವಾರ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಂತರ ತೀರ್ಥ ಪ್ರಸಾದಪಡೆದು ಪುನೀತರಾಗಬೇಕೆಂದು ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ನ ಸುಶೀಲಮ್ಮ ಮತ್ತು ಕೆ.ಟಿ. ಶಿವರಾಂ (ಅಧ್ಯಕ್ಷರು) ಕೋರಿದ್ದಾರೆ.

ದೇವಸ್ಥಾನದ ಇತಿಹಾಸ: ಗ್ರಾಮದ ಶಿಂಷಾ ನದಿ ದಡದಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯನ್ನು ಕಾಣಲು ಕದಂಬ ಮುನಿಗಳು ತಪಸ್ಸು ಮಾಡಿದಾಗ ನಾರಾಯಣ ಪ್ರತ್ಯಕ್ಷವಾ ದರು. ಪಶ್ಚಿಮಾಭಿಮುಖವಾಗಿ ಹರಿಯುವ ಕದಂಬ ನದಿ ಶಿಂಷಾ ತೀರದಲ್ಲಿ ಭಕ್ತರ ಇಷ್ಟಾರ್ಥಗಳನ್ನು ನೆರೆವೇರಿಸುವಂತೆ ಕೇಳಿಕೊಂಡರು. ಅದರಂತೆ ನಾರಾಯಣ ಮಹಾಲಕ್ಷ್ಮಿ ಯನ್ನು ಹೃದಯದಲ್ಲಿ ಕೂರಿಸಿಕೊಂಡು ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಎಂಬ ನಾಮಾಂಕಿತದಿಂದ ನೆಲೆಗೊಂಡರು.

ಶಿಥಿಲಗೊಂಡಿದ್ದ ದೇವಾಲಯವನ್ನು 2012ರಲ್ಲಿ ಕದಲೀಪುರ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಟ್ರಸ್ಟ್ ರಚಿಸಿ ಅಧ್ಯಕ್ಷ ಕೆ.ಟಿ.ಶಿವರಾಂ ಅವರ ನೇತೃತ್ವದಲ್ಲಿ ಜೀರ್ಣೋದ್ಧಾರ ಮಾಡಿಸಿದ್ದು ಭವ್ಯ ದೇವಾಲಯ ತಲೆ ಎತ್ತಿ ನಿಂತಿದೆ.

‘ಕದಂಬ ಮುನಿಗಳು ಈ ಭಾಗದ ಸಂಚಾರ ಮಾಡಿ ಭಗವಂತನನ್ನು ಇಲ್ಲಿಯೇ ಪ್ರತಿಷ್ಠಾಪಿಸಬೇಕೆಂದು ತಪಸ್ಸು ಮಾಡಿದ ಫಲವು ಪುಣ್ಯಕ್ಷೇತ್ರವಾಗಿ ಹೊರಹೊಮ್ಮಿದೆ. ಕದಂಬ ಪಕ್ಷಿಗಳನ್ನು ನೋಡಿ ನಂತರ ಕದಂಬ ಶಿಂಷಾ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಪ್ರತೀತಿ ಇದೆ’ ಎಂದು ದೇಗುಲದ ಪ್ರಧಾನ ಅರ್ಚಕರಾದ ನಾರಾಯಣ ಅಯ್ಯಂಗಾರ್ ಅವರು ತಿಳಿಸಿದರು.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇಗುಲವನ್ನು ಶುಚಿಗೊಳಿಸಲಾಗಿದೆ. ದೀಪಾಲಂಕಾರ ಹಾಗೂ ವಿಶೇಷ ಹೂಗಳ ಅಲಂಕಾರ ಮಾಡಲಾಗುತ್ತಿದೆ. ಇಡೀ ಗ್ರಾಮದ ಜನರು ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ವಿಶೇಷ ರಂಗೋಲಿಗಳಿಂದ ಅಲಂಕರಿಸುತ್ತಿದ್ದಾರೆ.

ಕ್ಷೇತ್ರ ವಿಶೇಷ: ರಾಜ್ಯದಲ್ಲಿಯೇ ಅಪರೂಪ ಎನಿಸುವ ಹೃದಯಭಾಗದಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿಕೊಂಡಿರುವ ಶ್ರೀ ವೆಂಕಟೇಶ್ವರಸ್ವಾಮಿಯ ವೈಶಿಷ್ಟಪೂರ್ಣ ವಿಗ್ರಹ ಈ ಆಕರ್ಷಕ ದೇಗುಲದಲ್ಲಿ ಪ್ರತಿಷ್ಠಾಪನೆಗೊಂಡಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಈ ವಿಶಿಷ್ಟ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಭಕ್ತರು ಬರುವುದು ಇಲ್ಲಿನ ವಿಶೇಷ.

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಮಾರ್ಗದಲ್ಲಿ ಸೋಮನಹಳ್ಳಿ ಬಳಿ ಅಡಿಗಾಸ್ ಹೋಟೆಲ್‌ನ ಬಳಿ ತುಮಕೂರು ಹೆದ್ದಾರಿಗೆ ತಿರುವು ತೆಗೆದುಕೊಂಡರೆ, ಹುಳುಗನಹಳ್ಳಿ ಮಾರ್ಗವಾಗಿ ಕೇವಲ 1.5 ಕಿ.ಮೀ ದೂರದಲ್ಲಿ ಈ ಸುಂದರ ದೇಗುಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT