ಬುಧವಾರ, ಆಗಸ್ಟ್ 12, 2020
24 °C
ಚೆಲುವನಾರಾಯಣಸ್ವಾಮಿ, ಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ: ರಾಜ– ರಾಣಿಯರ ವಿಗ್ರಹಕ್ಕೆ ಗೌರವಾರ್ಪಣೆ

ಶ್ರೀಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ವಿಧ್ಯುಕ್ತ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೇಲುಕೋಟೆ: ಮುಮ್ಮುಡಿ ಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದ ಖಾಸ ವರ್ಧಂತಿಯ ಅಂಗವಾಗಿ ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ನೆರವೇರಿಸುವುದರೊಂದಿಗೆ ಶ್ರೀಕೃಷ್ಣರಾಜಮುಡಿ ಆಷಾಢ ಜಾತ್ರಾಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು.

ಇದೇ ವೇಳೆ ಯೋಗಾನರಸಿಂಹಸ್ವಾಮಿಗೂ ಅಭಿಷೇಕ ನೆರವೇರಿತು. ವೇದ ಮತ್ತು ಮಂಗಳವಾದ್ಯದೊಂದಿಗೆ ನಡೆದ ಮಹಾಭಿಷೇಕದಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಮಹಾಅಭಿಷೇಕ ಮತ್ತು ಕಲ್ಯಾಣೋತ್ಸವದೊಂದಿಗೆ ಆರಂಭವಾದ ಶ್ರೀಕೃಷ್ಣರಾಜಮುಡಿ ಆಷಾಡ ಜಾತ್ರಾಮಹೋತ್ಸವ ಜುಲೈ 17ರವರೆಗೆ ವಿವಿಧ ಉತ್ಸವಗಳು ನಡೆಯಲಿದೆ. ಜುಲೈ 12ರಂದು ವಜ್ರಖಚಿತ ಕೃಷ್ಣರಾಜಮುಡಿ ಕಿರೀಟಧಾರಣೆ ಮಾಡಲಾಗುತ್ತದೆ.

ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 5-30ಕ್ಕೆ ನಿತ್ಯ ಪೂಜಾ ಕೈಂಕರ್ಯಗಳನ್ನು ಆರಂಭಿಸಿ 8 ಗಂಟೆ ವೇಳೆಗೆ ಮುಕ್ತಾಯ ಮಾಡಲಾಯಿತು. ನಂತರ ಸ್ನಪನಪೂರ್ವಕವಾಗಿ ಕಳಸಗಳನ್ನು ಸ್ಥಾಪಿಸಿ ಚೆಲುವನಾರಾಯಣಸ್ವಾಮಿ, ಯದುಗಿರಿನಾಯಕಿ ಅಮ್ಮನವರು, ಆಚಾರ್ಯ ರಾಮಾನುಜಾಚಾರ್ಯರು ನಮ್ಮಾಳ್ವಾರ್ ವಿಶ್ವಕ್ಸೇನರಿಗೆ ಮಹಾಭಿಷೇಕ ನೆರವೇರಿಸಲಾಯಿತು. ಹಾಲು ಮೊಸರು, ಚಂದನ, ಮುಂತಾದ ದಿವ್ಯಪರಿಕರಗಳಿಂದ ಭಗವಂತನಿಗೆ ಅಭಿಷೇಕ ನೆರವೇರಿಸಿ ನಾಡಿನೆಲ್ಲೆಡೆ ಹರುತ್ತಿರುವ ಸಾಂಕ್ರಾಮಿಕ ಮಹಾಮಾರಿ ಕೊರೊನಾ ವೈರಸ್ ನಾಶವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಮಹಾಭಿಷೇಕದಲ್ಲಿ ಪಾಲ್ಗೊಂಡಿದ್ದರು.

ಕಲ್ಯಾಣೋತ್ಸವ: ಕೃಷ್ಣರಾಜಮುಡಿ ಬ್ರಹ್ಮೋತ್ಸವ ಹಾಗೂ ಮುಮ್ಮುಡಿ ಕೃಷ್ಣರಾಜ ಒಡೆಯರ್ ವರ್ಧಂತಿಯ ನಿಮಿತ್ತ ಸಂಜೆ ಚೆಲುವನಾರಾಯಣಸ್ವಾಮಿ ಹಾಗೂ ಕಲ್ಯಾಣನಾಯಕಿ ಅಮ್ಮನವರಿಗೆ ಕಲ್ಯಾಣೋತ್ಸವ ನಡೆಯಿತು. ದೇವಾಲಯದ ಒಳಭಾಗ ನಡೆದ ಕಾರ್ಯಕ್ರಮದಲ್ಲಿ ಸಮನ್ಮಾಲೆ, ಲಾಜಾಹೋಮ ಸೇರಿದಂತೆ ಮದುವೆಯ ವಿವಿಧ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದೇ ವೇಳೆ ಕೃಷ್ಣರಾಜ ಒಡೆಯರ್ ಮತ್ತು ರಾಣಿಯರ ಭಕ್ತವಿಗ್ರಹಕ್ಕೆ ವಿಶೇಷ ಗೌರವಾರ್ಪಣೆ ಮಾಡಲಾಯಿತು.

ಕಾಳಮ್ಮನಹಬ್ಬ: ಮೇಲುಕೋಟೆಯ ಮುಖ್ಯರಸ್ತೆಯಲ್ಲಿರುವ ಕಾಳಮ್ಮನ ಗುಡಿಯಲ್ಲಿ ಕಾಳಮ್ಮನ ಹಬ್ಬ ನೆರವೇರಿತು. ದೇವಿಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ನಿಂಬೆಹಣ್ಣಿನಿಂದ ದೇವಿಯನ್ನು ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.